ಹೆಚ್ಚುತ್ತಿರುವ ಅನುತ್ಪಾದಕ ಸಾಲ: ಮುರಳಿ ಮನೋಹರ್ ಜೋಶಿ ನೇತೃತ್ವದ ಸಮಿತಿಯಿಂದ ಕೇಂದ್ರ ಸರಕಾರಕ್ಕೆ ತರಾಟೆ

Update: 2018-09-25 07:17 GMT

ಹೊಸದಿಲ್ಲಿ, ಸೆ.25: ರಫೇಲ್ ಹಗರಣಕ್ಕೆ ಸಂಬಂಧಿಸಿದಂತೆ ವಿಪಕ್ಷ ಕಾಂಗ್ರೆಸ್ ನಿಂದ ತೀವ್ರ ವಾಗ್ದಾಳಿಗೊಳಗಾಗಿರುವ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರಕ್ಕೆ ಇದೀಗ ಇನ್ನೊಂದು ತಲೆನೋವು ಆರಂಭಗೊಂಡಿದೆ. ಬೃಹತ್ ಪ್ರಮಾಣದ ಅನುತ್ಪಾದಕ ಸಾಲ ಹೊಂದಿರುವ  ದೊಡ್ಡ ಕಾರ್ಪೊರೇಟ್ ಸಂಸ್ಥೆಗಳ ಪಟ್ಟಿಯ ವಿಚಾರದಲ್ಲಿ ಯಾವ ಕ್ರಮ ಕೈಗೊಳ್ಳಲಾಗಿದೆ ಎಂದು ಪಕ್ಷದ ಹಿರಿಯ ನಾಯಕ ಮುರಳಿ ಮನೋಹರ್ ಜೋಶಿ ನೇತೃತ್ವದ ಸಂಸದೀಯ ಅಂದಾಜು ಸಮಿತಿಯು ಪ್ರಧಾನಿ ಕಾರ್ಯಾಲಯವನ್ನು ಪ್ರಶ್ನಿಸಿದೆ.

ಇಂತಹ ಕಾರ್ಪೊರೇಟ್ ಸಂಸ್ಥೆಗಳ ಪಟ್ಟಿಯನ್ನು ರಿಸರ್ವ್ ಬ್ಯಾಂಕಿನ ಮಾಜಿ ಗವರ್ನರ್ ರಘುರಾಮ್ ರಾಜನ್ ಅವರು ತಮ್ಮ ಸೇವಾವಧಿ ಸಂದರ್ಭ  ಪ್ರಧಾನಿ ಕಾರ್ಯಾಲಯಕ್ಕೆ ನೀಡಿದ್ದರು.

ಜೋಶಿ ನೇತೃತ್ವದ ಸಮಿತಿ ಕಲ್ಲಿದ್ದಲು ಮತ್ತು ವಿದ್ಯುತ್ ಸಚಿವಾಲಯಗಳಿಗೂ ನೋಟಿಸ್ ಜಾರಿಗೊಳಿಸಿ ಈ ಕ್ಷೇತ್ರಗಳಲ್ಲೂ ಹೆಚ್ಚುತ್ತಿರುವ ಅನುತ್ಪಾದಕ ಸಾಲಗಳ ಬಗ್ಗೆ ವಿವರಣೆ ಕೋರಿದೆ.  ರಾಜನ್ ಸಲ್ಲಿಸಿದ ಪಟ್ಟಿಯಲ್ಲಿ ಈ ಎರಡು ಕ್ಷೇತ್ರಗಳ ಬಗ್ಗೆಯೂ ಉಲ್ಲೇಖವಿತ್ತು.

ಪ್ರಧಾನಿ ಕಾರ್ಯಾಲಯಕ್ಕೆ ಸಮಿತಿ ನೋಟಿಸ್ ಜಾರಿಗೊಳಿಸಿ ರಾಜನ್ ಸಲ್ಲಿಸಿದ್ದ ಪಟ್ಟಿಗೆ ಸಂಬಂಧಿಸಿದಂತೆ ನಡೆದ ತನಿಖೆ ಅಥವಾ ಕಾನೂನು ಕ್ರಮದ ಬಗ್ಗೆ ಮಾಹಿತಿ ಕೋರಿದೆ. ಸಮಿತಿಯು ರಾಜನ್ ಅವರ ಅವಧಿಯಲ್ಲಿ ಅನುತ್ಪಾದಕ ಸಾಲ ಅಥವಾ ಎನ್ ಪಿಎ  ಸಮಸ್ಯೆಯ ಪರಿಹಾರಕ್ಕೆ ಸಹಾಯ ಕೋರಿತ್ತು.

ಆದರೆ ಅಂದಾಜು ಸಮಿತಿಯಲ್ಲೂ ಎಲ್ಲವೂ ಸರಿಯಾಗಿಲ್ಲ. ಸಮಿತಿಯ ಹಲವಾರು ಬಿಜೆಪಿ ಸದಸ್ಯರಿಗೆ ಜೋಶಿ ಬಗ್ಗೆ ಅಸಮಾಧಾನವಿದೆಯೆಂದು ಹೇಳಲಾಗುತ್ತಿದೆ. ಮೂಲಗಳ ಪ್ರಕಾರ ಕೆಲ ಸಮಯದ ಹಿಂದೆ ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಹ್ಮಣ್ಯಂ ಅವರು ಸಮಿತಿ ಮುಂದೆ ಹಾಜರಾಗಿದ್ದ ಸಂದರ್ಭ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಹೊರ ನಡೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News