ಒಂದೇ ರಾತ್ರಿ ಎರಡು ಬಾರಿ ಬಾಲಕಿಯ ಪ್ರಾಣ ಉಳಿಸಿದ ವರ್ತಕ

Update: 2018-09-25 10:52 GMT

ಮುಂಬೈ, ಸೆ.25: ನಗರದ ದಿಯೊನರ್ ಪ್ರದೇಶದ ಪ್ಲಂಬಿಂಗ್ ಸಾಮಗ್ರಿ ಮಾರಾಟ ಮಳಿಗೆಯ ಮಾಲಕ ಸೈಯದ್ ನಾಸಿರ್ ಹುಸೈನ್ ಅವರು ಒಂದೇ ರಾತ್ರಿಯ ಅವಧಿಯಲ್ಲಿ 12ನೇ ತರಗತಿಯ ಬಾಲಕಿಯೊಬ್ಬಳನ್ನು ಎರಡು ಬಾರಿ ಆತ್ಮಹತ್ಯೆ ಯತ್ನದಿಂದ ಪಾರು ಮಾಡಿದ್ದಾರೆ. ಈ ಹಿಂದೆ ವಾಶಿ ಸೇತುವೆಯಿಂದ ನದಿಗೆ ಹಾರಿದ್ದ ಇಬ್ಬರು ಮಹಿಳೆಯರನ್ನು ಹುಸೈನ್ ರಕ್ಷಿಸಿದ್ದರು.

ಎಂದಿನಂತೆ ರಾತ್ರಿ ತಮ್ಮ ಅಂಗಡಿ ಮುಚ್ಚಿ ಮನೆಗೆ ಹೊರಟಿದ್ದ ಹುಸೈನ್ ಅವರಿಗೆ ಬರಿಗಾಲಲ್ಲಿ ಸೇತುವೆಯಲ್ಲಿ ಹುಡುಗಿಯೊಬ್ಬಳು ನಡೆಯುತ್ತಿದ್ದುದು ಗಮನಕ್ಕೆ ಬಂದಿತ್ತು. ಈ ಹಿಂದೆ ಕೂಡ ತಾವು ರಕ್ಷಿಸಿದ್ದ ಮಹಿಳೆಯರು ಬರಿಗಾಲಲ್ಲಿದ್ದುದನ್ನು ಗಮನಿಸಿದ್ದ ಹುಸೈನ್ ತಮ್ಮ ಬೈಕನ್ನು ರಸ್ತೆ ಬದಿ ನಿಲ್ಲಿಸುವಷ್ಟರಲ್ಲಿ ಆ ಬಾಲಕಿ ಸೇತುವೆಯ ರೈಲಿಂಗ್ ಹತ್ತಿದ್ದಳು. ತಮ್ಮ ಬೈಕಿಗೆ ಸ್ಟ್ಯಾಂಡ್ ಕೂಡ ಹಾಕದೆ ಹಾಗೆಯೇ ಬಿಟ್ಟು ಓಡಿ ಬಂದ ಹುಸೈನ್ ಆಕೆಯನ್ನು ಹಿಡಿದೆಳೆಯುವುದರಲ್ಲಿ ಯಶಸ್ವಿಯಾಗಿದ್ದರು.

ಇದಾದ ನಂತರ ಸುಮಾರು ಒಂದು ಗಂಟೆ ಕಾಲ ಅವರು ಆ ಬಾಲಕಿಯ ಜತೆ ಮಾತನಾಡಿ ಆಕೆಯ ಈ ಕ್ರಮಕ್ಕೆ ಕಾರಣವೇನೆಂದು ತಿಳಿಯಲು ಪ್ರಯತ್ನಿಸಿದಾಗ ಪ್ರಿಯತಮ ಆಕೆಗೆ ಕೈಕೊಟ್ಟ ವಿಚಾರ ಹೊರಬಿದ್ದಿತ್ತು. ನಂತರ ಅವರು ಬಾಲಕಿಯನ್ನು ಆಕೆಯ ಮನೆ ತನಕ ಬಿಟ್ಟರೂ ಆಕೆಯ ಹೆತ್ತವರು ಹೊರಗೆ ಹೋಗಿದ್ದಾರೆಂದು ತಿಳಿದು ನೆರೆಮನೆಯವರಲ್ಲಿ ಬಾಲಕಿಯನ್ನು ಒಪ್ಪಿಸಿ ಹುಸೈನ್ ಅಲ್ಲಿಂದ ಹೊರನಡೆದಿದ್ದರು.

ಆದರೂ ಮನೆಗೆ ತಮ್ಮ ಬೈಕಿನಲ್ಲಿ ಹಿಂದಿರುಗುತ್ತಿದ್ದ ಹುಸೈನ್ ಮನಸ್ಸಿನಲ್ಲಿ ಬಾಲಕಿ ಮತ್ತೇನಾದರೂ ವಿಪರೀತ ಕ್ರಮ ಕೈಗೊಳ್ಳಬಹುದೆಂಬ ಭಯವಿತ್ತು. ಅವರು ಮತ್ತೆ ಬೈಕನ್ನು ಬಾಲಕಿಯ ಮನೆಯತ್ತ ತಿರುಗಿಸಿದ್ದರು. ಅವರ ಊಹೆ ನಿಜವಾಗಿತ್ತು. ಆಕೆ ನೇಣು ಬಿಗಿದು ಸಾಯಲು ಪ್ರಯತ್ನಿಸಿದ್ದಳು. ಈಗಲೂ ಆಕೆಯನ್ನು ಸಮಯಕ್ಕೆ ಸರಿಯಾಗಿ ರಕ್ಷಿಸಿದ ಹುಸೈನ್ ಹತ್ತಿರದ ಆಸ್ಪತ್ರೆಗೆ ಆಕೆಯನ್ನು ದಾಖಲಿಸಿದ್ದರಲ್ಲದೆ ನಂತರ ಆಕೆ ಹೇಗಿದ್ದಾಳೆಂದು ಎರಡು ಬಾರಿ ಅಲ್ಲಿಗೆ ಹೋಗಿ ವಿಚಾರಿಸಿದ್ದರು.

ಬಾಲಕಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ಹಾಗೂ ಉತ್ತಮ ಶಿಕ್ಷಣ ನೀಡಿ ಆಕೆಯನ್ನು ಆತ್ಮವಿಶ್ವಾಸಭರಿತ ಯುವತಿಯನ್ನಾಗಿಸಬೇಕೆಂದು ಹುಸೈನ್ ಆಕೆಯ  ತಂದೆಗೆ ತಿಳಿಸಿದ್ದಾರೆ.

ಬಾಲಕಿಯ ತಂದೆ ಕೂಡ ಹುಸೈನ್ ಅವರಿಗೆ ಅಭಾರಿಯಾಗಿದ್ದಾರೆ. ``ಅವರಿಲ್ಲದೇ ಹೋದರೆ ನನ್ನ ಪುತ್ರಿಯನ್ನು ಕಳೆದುಕೊಳ್ಳುತ್ತಿದ್ದೆ, ಅವರಿಗೆಷ್ಟು ಧನ್ಯವಾದ ಹೇಳಿದರೂ ಸಾಲದು'' ಎಂದು ಅವರು ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News