ಮೂಡಿಗೆರೆ ಗೋಮಾಂಸ ಪ್ರಕರಣ: ಮುಖಂಡರ ಸಭೆಯಲ್ಲಿ ಸುಖಾಂತ್ಯ

Update: 2018-09-25 11:55 GMT

ಮೂಡಿಗೆರೆ, ಸೆ.25: ತಾಲೂಕಿನ ಅಣಜೂರು ಗ್ರಾಮದಲ್ಲಿ ಜಾನುವಾರೊಂದನ್ನು ಕೊಂದು ಮಾಂಸ ಮಾಡಿದ ಯುವಕರಿಬ್ಬ ಕೃತ್ಯದಿಂದ ಗ್ರಾಮದಲ್ಲಿ ಒಂದು ವಾರದಿಂದ ಅಶಾಂತಿ ಉಂಟಾಗಿದ್ದು, ಭಯದ ವಾತಾವರಣ ಮನೆ ಮಾಡಿತ್ತು. ಕೆಲ ಸಂಘ ಸಂಸ್ಥೆಗಳು ಪ್ರತಿಭಟನೆ ನಡೆಸಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಅಂಗಡಿಗಳು ಮತ್ತು ವಾಸಕ್ಕಾಗಿ ನಿರ್ಮಿಸಿರುವ 4 ಗುಡಿಸಲುಗಳ ತೆರವಿಗೆ ಗಡುವು ನೀಡಿದ್ದರು. ಆದರೆ ಇದಕ್ಕೆಲ್ಲಾ ಸೋಮವಾರ ಸಂಜೆ ವೃತ್ತ ನಿರೀಕ್ಷಕರ ಸಮ್ಮುಖದಲ್ಲಿ ವಿವಿಧ ಮುಖಂಡರ ಸಭೆ ನಡೆದು, ಎಲ್ಲಾ ಸಮಸ್ಯೆಗಳಿಗೂ ತೆರೆ ಬಿದ್ದಿದೆ. 

ಕಳೆದ ಗುರುವಾರ ಸ್ಥಳೀಯ ಇಬ್ಬರು ಯುವಕರು ಜಾನುವಾರೊಂದನ್ನು ಶೆಡ್‍ವೊಂದರಲ್ಲಿ ಕತ್ತರಿಸಿ ಮಾಂಸ ಮಾಡುವಾಗ ಪಕ್ಕದ ಗ್ರಾಮದ ಯುವಕನೊಬ್ಬ ನೋಡಿ, ಸ್ಥಳೀಯರಿಗೆ ಹಾಗೂ ಪೊಲೀಸರಿಗೆ ವಿಷಯ ತಿಳಿಸಿದ್ದ. ಈ ಹಿನ್ನಲೆಯಲ್ಲಿ ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು. ಅಂದೇ ರಾತ್ರಿ ಆ ಇಬ್ಬರು ಆರೋಪಿಗಳು ಪೊಲೀಸರಿಗೆ ಶರಣಾಗಿದ್ದರು. ಮರುದಿನ ಶುಕ್ರವಾರ ವಿವಿದ ಹಿಂದೂಪರ ಸಂಘಟನೆಗಳು ಜನ್ನಾಪುರಲ್ಲಿ ಪ್ರತಿಭಟನೆ ನಡೆಸಿದ್ದವು. ಪೊಲೀಸರ ಸಮಯಪ್ರಜ್ಞೆಯಿಂದ ಯಾವುದೇ ಅಹಿತಕರ ಘಟನೆ ನಡೆದಿರಲಿಲ್ಲ. 

ಅಣಜೂರಿನಲ್ಲಿ ಕಳೆದ 3 ವರ್ಷದ ಹಿಂದೆ ಅಂದಿನ ಶಾಸಕ ಬಿ.ಬಿ.ನಿಂಗಯ್ಯ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಅಣಜೂರು ಗ್ರಾಮಕ್ಕೆ ತೆರಳಿ ನಿವೇಶನ ರಹಿತ 4 ಕುಟುಂಬಕ್ಕೆ ವಾಸಕ್ಕಾಗಿ ಗುಡಿಸಲು ನಿರ್ಮಿಸಿಕೊಳ್ಳಲು ಅವಕಾಶ ನೀಡಿದ್ದರು. ಆ ಗುಡಿಸಲುಗಳನ್ನು ಗೋಮಾಂಸದ ವಿಚಾರ ಮುಂದಿಟ್ಟು ತೆರವುಗೊಳಿಸಬೇಕೆಂದು ಮತ್ತು ಹೆದ್ದಾರಿ ಬಳಿ ನಿರ್ಮಿಸಿದ್ದ 2 ಅಂಗಡಿ ಹಾಗೂ ಜನ್ನಾಪುರದಲ್ಲಿರುವ ಕೋಳಿ ಮಾಂಸದ ಅಂಗಡಿಯನ್ನು ಸೋಮವಾರ ಸಂಜೆಯೊಳಗೆ ತೆರವುಗೊಳಿಸಬೇಕು, ಇಲ್ಲವಾದರೆ ಸೆ.26ರಂದು ಜನ್ನಾಪುರದಿಂದ ಹೊರಟು ಮೂಡಿಗೆರೆ ಅರಣ್ಯ ಇಲಾಖೆ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಕೆಲಸ ಸಂಘಟನೆಗಳ ಹೆಸರಿನಲ್ಲಿ, ಜಾಲತಾಣದಲ್ಲಿ ಮಾಹಿತಿ ಹರಿಯಬಿಡಲಾಗಿತ್ತು. 

ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಸೆ.24ರ ಸಂಜೆ ಪ್ರಕರಣವನ್ನು ಬೇಧಿಸುವ ದಾರಿ ಕಂಡು ಹಿಡಿಯುವ ಸಲುವಾಗಿ ಮೂಡಿಗೆರೆ ವೃತ್ತ ನಿರೀಕ್ಷಕರ ಕಚೇರಿಯಲ್ಲಿ ಪಿಎಸ್ಸೈಗಳ ಸಭೆ ನಡೆಸುತ್ತಿದ್ದಾಗ, ಉಭಯ ಪಂಗಡಗಳ ಕೆಲ ಮುಖಂಡರು ವೃತ್ತ ನಿರೀಕ್ಷಕರ ಕಚೇರಿಗೆ ದಿಢೀರ್ ಆಗಮಿಸಿದರು. ಎರಡೂ ಪಂಗಡದ ವಾದವನ್ನು ಆಲಿಸಿದ ಸಿಪಿಐ ಜಗದೀಶ್, ಜಾನುವಾರು ಮಾಂಸದ ವಿಚಾರದಲ್ಲಿ ಸ್ಥಳೀಯ ಇಬ್ಬರು ಯುವಕರನ್ನು ಬಂಧಿಸಲಾಗಿದೆ. ಪ್ರಕರಣ ತನಿಖೆ ಹಂತದಲ್ಲಿದೆ. ಯಾವುದೇ ಪ್ರತಿಭಟನೆ ನಡೆಸಬೇಡಿ. ಅಮಾಯಕ ಗ್ರಾಮಾಸ್ಥರಿಗೆ ತೊಂದರೆ ಕೊಡಲು ಮುಂದಾಗಬೇಡಿ ಎಂದು ಸೂಚಿಸಿದರು. ಇದಕ್ಕೆ ಎರಡೂ ತಂಡದವರು ಒಪ್ಪಿಗೆ ಸೂಚಿಸಿದ್ದರಿಂದ ಪ್ರಕರಣ ಸುಖಾಂತ್ಯಗೊಂಡಿತು. 

ಸಭೆಯಲ್ಲಿ ಸಿಪಿಐ ಎಂ.ಜಗದೀಶ್, ಗೋಣಿಬೀಡು ಪಿಎಸ್‍ಐ ರಾಕೇಶ್, ಮೂಡಿಗೆರೆ ಪಿಎಸ್‍ಈ ಕೆ.ಟಿ.ರಮೇಶ್, ಮಾಜಿ ಜಿ.ಪಂ. ಸದಸ್ಯ ವಿ.ಕೆ.ಶಿವೇಗಗೌಡ, ಬಿಎಸ್‍ಪಿ ರಾಜ್ಯ ಕಾರ್ಯದರ್ಶಿ ಝಾಕೀರ್ ಹುಸೇನ್, ರಾಜ್ಯ ಬ್ಯಾರಿ ಅಕಾಡೆಮಿ ಮಾಜಿ ಸದಸ್ಯ ಕಿರುಗುಂದ ಅಬ್ಬಾಸ್, ಬಿಎಸ್‍ಪಿ ಮುಖಂಡರಾದ ಲೋಕವಳ್ಳಿ ರಮೇಶ್, ಬಿ.ರಾಮು, ಚಂದ್ರಶೇಖರ್ ನಾಯಕ್, ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಕನ್ನಹಳ್ಳಿ ಭರತ್, ಬಜರಂಗದಳ ಅಧ್ಯಕ್ಷ ಅವಿನಾಶ್, ನವಕರ್ನಾಟಕ ಯುವ ಶಕ್ತಿ ಸಂಘದ ಅಧ್ಯಕ್ಷ ಗಜೇಂದ್ರ ಮತ್ತಿತರರಿದ್ದರು. 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News