200ನೇ ಬಾರಿ ಟೀಮ್ ಇಂಡಿಯಾದ ನಾಯಕತ್ವ ವಹಿಸಿಕೊಂಡ ಧೋನಿ

Update: 2018-09-25 12:39 GMT

ಹೊಸದಿಲ್ಲಿ, ಸೆ.25: ಏಶ್ಯಕಪ್‌ನ ತನ್ನ ಕೊನೆಯ ಸೂಪರ್-4 ಪಂದ್ಯದಲ್ಲಿ ಮಂಗಳವಾರ ಅಫ್ಘಾನಿಸ್ತಾನ ವಿರುದ್ಧ ಭಾರತ ಐದು ಬದಲಾವಣೆಯೊಂದಿಗೆ ಕಣಕ್ಕಿಳಿದಿದೆ. ಭಾರತ ಕಂಡ ಅತ್ಯಂತ ಯಶಸ್ವಿ ನಾಯಕ ಎಂಎಸ್ ಧೋನಿ ಸುಮಾರು 2 ವರ್ಷಗಳ ಬಳಿಕ ತಂಡದ ನಾಯಕತ್ವವಹಿಸಿಕೊಂಡಿದ್ದು ಈ ಪಂದ್ಯದ ವಿಶೇಷ.

ಶುಕ್ರವಾರ ನಡೆಯಲಿರುವ ಏಶ್ಯಕಪ್ ಫೈನಲ್ ಪಂದ್ಯಕ್ಕಿಂತ ಮೊದಲು ಹಂಗಾಮಿ ನಾಯಕ ರೋಹಿತ್ ಶರ್ಮಾಗೆ ವಿಶ್ರಾಂತಿ ನೀಡಲಾಗಿದೆ. ಶರ್ಮಾ ಅನುಪಸ್ಥಿತಿಯಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕನಾಗಿ 200ನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸುವ ಅವಕಾಶ ಪಡೆದಿದ್ದಾರೆ. ಟೀಮ್ ಮ್ಯಾನೇಜ್‌ಮೆಂಟ್ ಧೋನಿಗೆ ನಾಯಕತ್ವ ನೀಡಿ ಅಭಿಮಾನಿಗಳನ್ನು ಅಚ್ಚರಿಗೊಳಿಸಿದೆ.

ಅಫ್ಘಾನ್ ವಿರುದ್ಧ ಪಂದ್ಯಕ್ಕೆ ಶಿಖರ್ ಧವನ್, ಭುವನೇಶ್ವರ ಕುಮಾರ್, ಜಸ್‌ಪ್ರಿತ್ ಬುಮ್ರಾ ಹಾಗೂ ಯಜುವೇಂದ್ರ ಚಹಾಲ್‌ಗೆ ವಿಶ್ರಾಂತಿ ನೀಡಲಾಗಿದೆ. ದೀಪಕ್ ಚಹಾರ್ ಏಕದಿನ ಕ್ರಿಕೆಟ್‌ಗೆ ಕಾಲಿಟ್ಟಿದ್ದಾರೆ. ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯ ಕೊನೆಯ ಪಂದ್ಯದಲ್ಲಿ ಶತಕ ಸಿಡಿಸಿರುವ ಕೆ.ಎಲ್. ರಾಹುಲ್ ಅಂತಿಮ-11ರ ಬಳಗದಲ್ಲಿ ಸ್ಥಾನ ಪಡೆದಿದ್ದಾರೆ. ಮನೀಷ್ ಪಾಂಡೆ ಕೂಡ ಪ್ರಸ್ತುತ ಟೂರ್ನಮೆಂಟ್‌ನಲ್ಲಿ ಮೊದಲ ಬಾರಿ ಆಡುವ ಅವಕಾಶ ಪಡೆದಿದ್ದಾರೆ.

200ನೇ ಏಕದಿನ ಪಂದ್ಯದಲ್ಲಿ ತಂಡದ ನೇತೃತ್ವವಹಿಸಿಕೊಂಡಿರುವ ಧೋನಿ ಆಸ್ಟ್ರೇಲಿಯದ ರಿಕಿ ಪಾಂಟಿಂಗ್ ಹಾಗೂ ನ್ಯೂಝಿಲೆಂಡ್‌ನ ಸ್ಟೀಫನ್ ಫ್ಲೆಮಿಂಗ್ ಬಳಿಕ 200 ಹಾಗೂ ಅದಕ್ಕಿಂತ ಹೆಚ್ಚು ಏಕದಿನ ಪಂದ್ಯಗಳಲ್ಲಿ ನಾಯಕತ್ವ ವಹಿಸಿಕೊಂಡ ಸಾಧನೆ ಮಾಡಿದರು.

‘‘ನಾನು 199 ಏಕದಿನ ಪಂದ್ಯಗಳಲ್ಲಿ ನಾಯಕನಾಗಿದ್ದೆ. ಇದೀಗ 200ನೇ ಪಂದ್ಯದಲ್ಲಿ ನಾಯಕತ್ವವಹಿಸಿಕೊಳ್ಳುವ ಅಪೂರ್ವ ಅವಕಾಶ ಲಭಿಸಿದೆ. ಒಂದು ಬಾರಿ ನಾಯಕತ್ವವನ್ನು ತ್ಯಜಿಸಿದ ಬಳಿಕ 200 ಪಂದ್ಯಗಳನ್ನು ಪೂರೈಸುವುದು ಅಸಾಧ್ಯ. ಆದರೆ, ನನ್ನ ಪಾಲಿಗೆ ಇಂದು ಸಾಧ್ಯವಾಗಿದೆ’’ ಎಂದು ಧೋನಿ ಪ್ರತಿಕ್ರಿಯೆ ನೀಡಿದರು.

ಧೋನಿ 2017ರ ಜನವರಿಯಲ್ಲಿ ಸೀಮಿತ ಓವರ್ ಕ್ರಿಕೆಟ್ ನಾಯಕತ್ವವನ್ನು ತ್ಯಜಿಸಿದ್ದರು. 199 ಏಕದಿನ ಪಂದ್ಯಗಳಲ್ಲಿ ಭಾರತ ತಂಡವನ್ನು ನಾಯಕನಾಗಿ ಮುನ್ನಡೆಸಿದ್ದ ಧೋನಿ ಈ ಪೈಕಿ 110ರಲ್ಲಿ ಜಯ ಹಾಗೂ 74 ಪಂದ್ಯಗಳಲ್ಲಿ ಸೋಲು ಕಂಡಿದ್ದರು. 2016ರ ಅಕ್ಟೋಬರ್ 29 ರಂದು ನ್ಯೂಝಿಲೆಂಡ್ ವಿರುದ್ಧ ಕೊನೆಯ ಬಾರಿ ಏಕದಿನ ತಂಡದ ನಾಯಕತ್ವವಹಿಸಿಕೊಂಡಿದ್ದರು. ಆ ಪಂದ್ಯವನ್ನು ಭಾರತ 190 ರನ್‌ಗಳಿಂದ ಸುಲಭವಾಗಿ ಗೆದ್ದುಕೊಂಡಿತ್ತು. ಧೋನಿ 72 ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯಗಳಲ್ಲಿ ನಾಯಕನಾಗಿದ್ದು ಈ ಪೈಕಿ 41ರಲ್ಲಿ ಗೆಲುವು ಹಾಗೂ 28ರಲ್ಲಿ ಸೋಲನುಭವಿಸಿದ್ದಾರೆ.

ಭಾರತದ ಅಂತಿಮ 11ರ ಬಳಗ: ಕೆಎಲ್ ರಾಹುಲ್, ಅಂಬಟಿ ರಾಯುಡು, ಮನೀಷ್ ಪಾಂಡೆ, ಮಹೇಂದ್ರ ಸಿಂಗ್ ಧೋನಿ(ನಾಯಕ), ದಿನೇಶ್ ಕಾರ್ತಿಕ್, ಕೇದಾರ್ ಜಾಧವ್, ರವೀಂದ್ರ ಜಡೇಜ, ದೀಪಕ್ ಚಹಾರ್, ಸಿದ್ದಾರ್ಥ್ ಕೌಲ್, ಕುಲ್‌ದೀಪ್ ಯಾದವ್ ಹಾಗೂ ಖಲೀಲ್ ಅಹ್ಮದ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News