ಕೊಡಗು ಮಳೆಹಾನಿ: ಬುಡಕಟ್ಟು ಜನರ ಸಂಕಷ್ಟಕ್ಕೆ ಸ್ಪಂದಿಸಲು ಆದಿವಾಸಿಗಳ ಸಮನ್ವಯ ಸಮಿತಿ ಒತ್ತಾಯ

Update: 2018-09-25 12:03 GMT

ಮಡಿಕೇರಿ, ಸೆ.25: ಕೊಡಗು ಜಿಲ್ಲೆಯಲ್ಲಿ ಜುಲೈ ಮತ್ತು ಆಗಸ್ಟ್ ತಿಂಗಳಿನಲ್ಲಿ ಸುರಿದ ಧಾರಾಕಾರ ಮಳೆಗೆ ಸಿಲುಕಿದ ಅನೇಕ ಬುಡಕಟ್ಟು ಕುಟುಂಬಗಳು ಸಂಕಷ್ಟವನ್ನು ಎದುರಿಸುತ್ತಿದ್ದು, ಜಿಲ್ಲಾಡಳಿತ ಸಕಾಲದಲ್ಲಿ ಸ್ಪಂದಿಸುವ ಮೂಲಕ ನೊಂದವರಿಗೆ ಅಗತ್ಯ ಪರಿಹಾರವನ್ನು ನೀಡಬೇಕೆಂದು ಕರ್ನಾಟಕ ಆದಿವಾಸಿಗಳ ಸಮನ್ವಯ ಸಮಿತಿ ಒತ್ತಾಯಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಜಿಲ್ಲಾ ಕಾರ್ಯದರ್ಶಿ ವೈ.ಕೆ.ಗಣೇಶ್, ಬುಡಕಟ್ಟು ಜನರು ಅನುಭವಿಸುತ್ತಿರುವ ಕಷ್ಟ, ನಷ್ಟದ ಕುರಿತು ಮಾಹಿತಿ ನೀಡಿದರು. ಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಯ ಕರಡಿಗೋಡು ಚಿಕ್ಕನಹಳ್ಳಿ ರಾಮ್‍ಪುರ ತೋಟದಲ್ಲಿದ್ದ ಪಣಿ ಎರವರ ಕುಟುಂಬದ 8 ಮನೆಗಳಿಗೆ ನೀರುನುಗ್ಗಿ ಮನೆಯ ಸಾಮಾಗ್ರಿಗಳು, ಮೂಲ ದಾಖಲೆಗಳು, ವಿದ್ಯಾರ್ಥಿಗಳ ಸಮವಸ್ತ್ರ ಹಾಗೂ ಪುಸ್ತಕಗಳು ನೀರು ಪಾಲಾಗಿವೆ. ನಷ್ಟದ ಒಟ್ಟು ಹಾನಿ ಸುಮಾರು 50 ಸಾವಿರ ರೂ. ಗಳಿಗಿಂತ ಅಧಿಕವಾಗಿದೆ. 

ತಿತಿಮತಿ ಗ್ರಾ.ಪಂ. ವ್ಯಾಪ್ತಿಯ ಎಡತೊರೆ ಕಾಲೋನಿಯಲ್ಲಿರುವ ಸುಮಾರು 3 ಮನೆಗಳ ಗೋಡೆಗಳು ಮಳೆಯಿಂದ ಬಿರುಕು ಬಿಟ್ಟಿವೆ. ಬೇಟೋಳಿ ಗ್ರಾ.ಪಂ. ವ್ಯಾಪ್ತಿಯ ಪೆರುಂಬಾಡಿಯಲ್ಲಿರುವ ಆದಿವಾಸಿಗಳು ಶೌಚಾಲಯ ಸೇರಿದಂತೆ ಮೂಲಭೂತ ಸೌಲಭ್ಯಗಳ ಕೊರತೆಯನ್ನು ಎದುರಿಸುತ್ತಿದ್ದಾರೆ. ಇಲ್ಲಿ ಅಗತ್ಯವಾಗಿ ಶೌಚಾಲಯಗಳು ಮೊದಲು ನಿರ್ಮಾಣಗೊಳ್ಳಬೇಕಾಗಿದೆ ಎಂದು ತಿಳಿಸಿದ ಗಣೇಶ್, ಎಲ್ಲಾ ಸಂತ್ರಸ್ತ ಕುಟುಂಬಗಳಿಗೆ ಜಿಲ್ಲಾಡಳಿತ ಸೂಕ್ತ ರೀತಿಯಲ್ಲಿ ಪರಿಹಾರವನ್ನು ಒದಗಿಸಬೇಕೆಂದು ಒತ್ತಾಯಿಸಿದರು. ಸ್ವಚ್ಛ ಭಾರತದ ಪರಿಕಲ್ಪನೆ ಆದಿವಾಸಿಗಳ ಹಾಡಿಗಳಲ್ಲಿ ಅನುಷ್ಠಾನಗೊಳ್ಳುವುದು ಬೇಡವೆ ಎಂದು ಪ್ರಶ್ನಿಸಿದರು.

ಕೆಲವು ಗ್ರಾ.ಪಂ.ಗಳಲ್ಲಿ ಪರಿಹಾರದ ಸಾಮಾಗ್ರಿ ಮತ್ತು ಕಿಟ್‍ಗಳನ್ನು ವಿತರಿಸುವ ಸಂದರ್ಭ ಪಕ್ಷಭೇದ ಮಾಡಲಾಗಿದೆ. ಅತಿ ಕಡುಬಡತನದಲ್ಲಿರುವ ಬುಡಕಟ್ಟು ಜನರಿಗೆ ಆಹಾರ ಸಾಮಾಗ್ರಿ ಮತ್ತು ಪರಿಹಾರದ ಕಿಟ್ ನೀಡದೆ ವಂಚಿಸಲಾಗಿದೆ. ಸರ್ಕಾರ ಪರಿಹಾರ ನೀಡುವ ಸಂದರ್ಭ ಯಾವುದೇ ನಿರ್ಬಂಧಗಳನ್ನು ಹೇರದಿದ್ದರು ಗ್ರಾ.ಪಂ.ಗಳು ದುರ್ಬಲರಾದ ಬುಡಕಟ್ಟು ಜನರಿಗೆ ಸರ್ಕಾರದ ಸೌಲಭ್ಯವನ್ನು ನೀಡದೆ ವಂಚಿಸಿದ್ದಾರೆ ಎಂದು ಆರೋಪಿಸಿದರು.

ಸ್ತ್ರೀ ಶಕ್ತಿ ಸಂಘ, ಸ್ವಸಹಾಯ ಸಂಘ, ಧರ್ಮಸ್ಥಳ ಸಂಘ ಸೇರಿದಂತೆ ವಿವಿಧ ಸಂಘ ಸಂಸ್ಥೆ, ಪೈನಾನ್ಸ್ ಗಳಿಂದ ಪಡೆದಿರುವ ಸಾಲವನ್ನು ಮರುಪಾವತಿಸಲು ಸಾಕಷ್ಟು ಕಾಲವಕಾಶ ನೀಡಬೇಕಾಗಿದೆ. ಕನಿಷ್ಟ 6 ತಿಂಗಳವರೆಗೆ ಬಲವಂತದ ಸಾಲ ವಸೂಲಾತಿ ಮಾಡದಂತೆ ಸರಕಾರ ಸೂಚನೆ ನೀಡಬೇಕು. ಗೋಣಿಕೊಪ್ಪದ ಹಾತೂರು ಗ್ರಾಮದ ಸಂಸ್ಥೆಯೊಂದು ಬಲವಂತದ ಸಾಲ ವಸೂಲಾತಿಗೆ ಮುಂದಾಗಿದ್ದು, ಬಡ ಸಾಲಗಾರರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಲಾಗುತ್ತಿದೆ. ಇದರಿಂದ ಸಾಲ ಪಡೆದಿರುವ ಬುಡಕಟ್ಟು ಸಮುದಾಯ ಆತಂಕಗೊಂಡಿದ್ದು, ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗಣೇಶ್ ಒತ್ತಾಯಿಸಿದರು.

ಶ್ರೀಮಂಗಲ ಹೋಬಳಿ ಕೆ.ಬಾಡಗ ಗ್ರಾಮದ ಪಿ.ಎಂ.ತಮ್ಮು ಮಾತನಾಡಿ, ಕೆ.ಬಾಡಗ ಗ್ರಾ.ಪಂ ವ್ಯಾಪ್ತಿಯ ತಿರುನಾಡ ಹಾಡಿಯಲ್ಲಿ ಸುಮಾರು 27 ಪಂಜರಿಯರವ ಆದಿವಾಸಿ ಕುಟುಂಬಗಳು ವಾಸವಿದ್ದು, ಸೂಕ್ತ ರಸ್ತೆ ವ್ಯವಸ್ಥೆಯಿಲ್ಲದೆ ನರಕಯಾತನೆ ಅನುಭವಿಸುತ್ತಿದ್ದಾರೆ. ರಸ್ತೆಯ ಮಧ್ಯೆಯಿದ್ದ ಸೇತುವೆಯು ಕೊಚ್ಚಿ ಹೋಗಿರುವ ಕುರಿತಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ಸಲ್ಲಿಸಿದರೂ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ. ಸೇತುವೆ ಮತ್ತು ರಸ್ತೆ ನಿರ್ಮಾಣಕ್ಕೆ ಈಗಾಗಲೇ ಸರಕಾರದಿಂದ 12 ಲಕ್ಷ ರೂ.ಗಳು ಮಂಜೂರಾಗಿದ್ದು, ಇದುವರೆಗೂ ಯಾವುದೇ ರೀತಿಯ ಕಾಮಗಾರಿಯನ್ನು ಕೈಗೆತ್ತಿಕೊಂಡಿಲ್ಲವೆಂದು ಆರೋಪಿಸಿದರು. ಸೂಕ್ತ ಸಂಪರ್ಕದ ವ್ಯವಸ್ಥೆ ಇಲ್ಲದೆ ಆದಿವಾಸಿ ಮಕ್ಕಳ ವಿದ್ಯಾಭ್ಯಾಸ ಕುಂಟಿತವಾಗುತ್ತಿದೆ ಎಂದು ತಮ್ಮು ಬೇಸರ ವ್ಯಕ್ತಪಡಿಸಿದರು.

ಬಿ.ಶೆಟ್ಟಿಗೇರಿ ಪಂ. ನ ಕುಟ್ಟಂದಿ ಗ್ರಾಮದ ನಿವಾಸಿ ಮಣಿ ಮಾತನಾಡಿ ಗುಡ್ಡಮಾಡು ಪೈಸಾರಿಯಲ್ಲಿ ಸುಮಾರು 20 ವರ್ಷಗಳ ಹಿಂದೆ ನಿರ್ಮಾಣಗೊಂಡ 21 ಮನೆಗಳಿದ್ದು, ಇಲ್ಲಿಯವರೆಗೆ ಹಕ್ಕು ಪತ್ರವನ್ನು ನೀಡಿಲ್ಲ ಮತ್ತು ಇಲ್ಲಿನ ನಿವಾಸಿಗಳ ಸಂಕಷ್ಟಕ್ಕೆ ಸ್ಪಂದನೆ ದೊರೆಯುತ್ತಿಲ್ಲವೆಂದು ಆರೋಪಿಸಿದರು. 

ಬೇಡಿಕೆಗಳು
ಬುಡಕಟ್ಟು ಜನಾಂಗದ ಶೇ.70ರಷ್ಟು ಮಂದಿಗೆ ಮೂಲ ದಾಖಲಾತಿಗಳಿಲ್ಲ. ಮತದಾರರ ಗುರುತಿನ ಚೀಟಿ, ಪಡಿತರ ಚೀಟಿ, ಆಧಾರ್ ಕಾರ್ಡ್, ಜಾತಿ ಪ್ರಮಾಣ ಪತ್ರ ಸೇರಿದಂತೆ ಹಲವಾರು ಮೂಲ ದಾಖಲಾತಿಗಳನ್ನು ಅದಾಲತ್ ಮೂಲಕ ನೀಡಬೇಕು. ಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಯ ಕರಡಿಗೋಡು ಚಿಕ್ಕನಹಳ್ಳಿ ರಾಮ್‍ಪುರ ತೋಟದಲ್ಲಿ ಸಂಕಷ್ಟದಲ್ಲಿರುವ 8 ಬಡ ಕುಟುಂಬಗಳಿಗೆ ತಕ್ಷಣ ಪರಿಹಾರ ಒದಗಿಸಬೇಕು. ಎಡತೊರೆ ಕಾಲೋನಿಯ ಮೂರು ಕುಟುಂಬಗಳ ಮನೆಗಳನ್ನು ದುರಸ್ತಿಪಡಿಸಲು ತಕ್ಷಣ ಕ್ರಮಕೈಗೊಳ್ಳಬೇಕು. ಮಳೆಹಾನಿ ಸಂತ್ರಸ್ತ ಬುಡಕಟ್ಟು ಜನಾಂಗಕ್ಕೆ ಆಹಾರದ ಕಿಟ್‍ಗಳನ್ನು ಮುಂದಿನ ಆರು ತಿಂಗಳವರೆಗೆ ವಿತರಿಸಬೇಕು. ಪೆರುಬಂಡಿಯಲ್ಲಿರುವ ಆದಿವಾಸಿಗಳಿಗೆ ಶೌಚಾಲಯ ನಿರ್ಮಿಸಿಕೊಡಬೇಕು.

ಧಾರಕಾರ ಮಳೆಯಿಂದಾಗಿ ಕೆಲಸ ಇಲ್ಲದೆ ಊಟಕ್ಕಾಗಿ ಇತರರಿಂದ ಪಡೆದಿರುವ ಸಾಲದ ಮೊತ್ತವನ್ನು ಸರಕಾರವೇ ಭರಿಸಬೇಕು. ಬ್ಯಾಂಕುಗಳು, ಸಹಕಾರ ಸಂಘಗಳು, ವಿವಿಧ ಸಂಘ ಸಂಸ್ಥೆಗಳು, ಫೈನಾನ್ಸ್ ಗಳು ಮುಂದಿನ ಆರು ತಿಂಗಳವರೆಗೆ ಬಲವಂತದಿಂದ ಸಾಲ ವಸೂಲಿ ಮಾಡದಂತೆ ಸರಕಾರ ಕ್ರಮಕೈಗೊಳ್ಳಬೇಕು. ಯಾವುದೇ ನಿಬಂಧನೆಗಳನ್ನು ವಿಧಿಸದೆ ಮಳೆಹಾನಿ ಸಂತ್ರಸ್ತ ಆದಿವಾಸಿಗಳಿಗೆ ಆಹಾರ ಸಾಮಾಗ್ರಿ ಮತ್ತು ಕಿಟ್‍ನ್ನು ವಿತರಿಸಬೇಕು. ಗ್ರಾ.ಪಂ. ಅಧಿಕಾರಿಗಳು ಪಕ್ಷಪಾತ ಮಾಡದೆ ಎಲ್ಲಾ ಬುಡಕಟ್ಟು ಸಮುದಾಯದವರಿಗೆ ಮಳೆಹಾನಿ ಕಿಟ್ ವಿತರಿಸಬೇಕು.

ಜಿಲ್ಲಾಧಿಕಾರಿಗಳು ಬುಡಕಟ್ಟು ಜನರು ವಾಸವಿರುವ ಪ್ರದೇಶಗಳಿಗೆ ಭೇಟಿ ನೀಡಿ ಸಂತ್ರಸ್ತ ಕುಟುಂಬಗಳ ಸಮಸ್ಯೆಗಳಿಗೆ ಸ್ಪಂದಿಸಬೇಕೆಂದು ಸಮಿತಿ ಒತ್ತಾಯಿಸಿದೆ. ಮನವಿ ಪತ್ರವನ್ನು ಜಿಲ್ಲಾಡಳಿತಕ್ಕೆ ನೀಡುವುದಾಗಿ ಗಣೇಶ್ ಇದೇ ಸಂದರ್ಭ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕರಡಿಗೋಡು ಗ್ರಾಮದ ನಿವಾಸಿ ಕಾಕು, ಕುಟ್ಟಂದಿಯ ಲಲಿತ ಹಾಗೂ ತಿತಿಮತಿಯ ಅಶೋಕ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News