ಹೋರಾಟಗಳ ಮೂಲಕ ಜನ ಜಾಗೃತಿ ಮೂಡಿಸಲಾಗುತ್ತಿದೆ: ಪಿಎಫ್‍ಐ ಮುಖಂಡ ಶಾಫಿ ಬೆಳ್ಳಾರೆ

Update: 2018-09-25 12:29 GMT

ಮಡಿಕೇರಿ, ಸೆ.25: ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಸಂವಿಧಾನಾತ್ಮಕ ಹೋರಾಟಗಳ ಮೂಲಕ ದೇಶದ ಆಗು, ಹೋಗುಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆ ಯಾವುದೇ ರಾಜಕೀಯ ಪಕ್ಷಗಳ ಹಿಡಿತದಲ್ಲಿಲ್ಲವೆಂದು ಸಂಘಟನೆಯ ರಾಜ್ಯ ಸಮಿತಿ ಸದಸ್ಯ ಶಾಫಿ ಬೆಳ್ಳಾರೆ ಸ್ಪಷ್ಟಪಡಿಸಿದ್ದಾರೆ.

ಪಿಎಫ್‍ಐ ವತಿಯಿಂದ ನಗರದ ಲೀ ಕೂರ್ಗ್ ಹೋಟೆಲ್ ಸಭಾಂಗಣದಲ್ಲಿ ನಡೆದ ಸಂವಾದದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸಂಘಟನೆ ದೇಶದ ಸಂವಿಧಾನವನ್ನು ಗೌರವಿಸುವುದರೊಂದಿಗೆ ನ್ಯಾಯಯುತ ಹಕ್ಕುಗಳನ್ನು ಪಡೆಯುವ ಸಲುವಾಗಿ ಕಳೆದ 10 ವರ್ಷಗಳಿಂದ ಹೋರಾಟ ನಡೆಸುತ್ತಾ ಬರುತ್ತಿದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಕೆಲವರು ನಮ್ಮ ಸಂಘಟನೆಯನ್ನು ಭಯೋತ್ಪಾದಕ ಸಂಘಟನೆಯೆಂದು ಬಿಂಬಿಸುವ ಪ್ರಯತ್ನ ಮಾಡುತ್ತಲೇ ಇದ್ದಾರೆ. ಆದರೆ ಸಂಘಟನೆ ಸಾಮಾಜಿಕ ಸಿದ್ದಾಂತದಡಿ ಹೋರಾಟಗಳನ್ನು ಹಮ್ಮಿಕೊಳ್ಳುತ್ತಿದೆ ಎಂದು ಸ್ಪಷ್ಟಪಡಿಸಿದರು.

ಪ್ರಜಾಪ್ರಭುತ್ವದಲ್ಲಿ ಸಂವಿಧಾನದ ರಕ್ಷಣೆ ಎಲ್ಲರ ಹೊಣೆಯಾಗಿದೆ. ಭಾರತದ ಸಂವಿಧಾನ ಬದಲಾದರೆ ದೇಶದ ಐಕ್ಯತೆಗೆ ಹೊಡೆತ ಬೀಳುತ್ತದೆ. ದೇಶದಲ್ಲಿ ದಲಿತರು ಹಾಗೂ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ಸಂಘಟನೆ ಪ್ರಶ್ನಿಸಿದೆ, ಈ ಕಾರಣಗಳಿಂದಲೇ ನಮ್ಮನ್ನು ಭಯೋತ್ಪದಕ ಸಂಘಟನೆ ಎಂದು ಬಿಂಬಿಸುತ್ತಿದ್ದಾರೆ. ಸಂಘಟನೆ ವಿರುದ್ಧ ಲವ್ ಜಿಹಾದ್ ಮತ್ತು ಮತಾಂತರದ ಆರೋಪಗಳನ್ನು ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. 

ಹಿಂದುತ್ವದ ಹೆಸರಿನಲ್ಲಿ ದೇಶದಲ್ಲಿ ದೌರ್ಜನ್ಯ ಮಿತಿ ಮೀರುತ್ತಿದೆ, ಆರೆಸ್ಸೆಸ್ ನ ಸಿದ್ಧಾಂತಗಳನ್ನು ನಾವು ವಿರೋಧಿಸುತ್ತೇವೆ ಹೊರತು ಧರ್ಮವನ್ನಲ್ಲ. ಕೇಂದ್ರ ಸರ್ಕಾರದ ಜನ ವಿರೋಧಿ ನಡೆಯನ್ನು ಖಂಡಿಸಿದರೆ ಸಂಘಟನೆಗೆ ದೇಶ ದ್ರೋಹಿ ಪಟ್ಟ ಕಟ್ಟುತ್ತಿದ್ದಾರೆ. ಸಂಘಟನೆಯನ್ನು ದೇಶ ವೀರೋಧಿ ಎನ್ನುವುದಕ್ಕೂ ಮೊದಲು ಸರಿಯಾದ ಸಾಕ್ಷಿಯನ್ನು ನೀಡಲಿ ಎಂದು ಶಾಫಿ ಬೆಳ್ಳಾರೆ ಒತ್ತಾಯಿಸಿದರು.

ಪಿಎಫ್‍ಐ ಸಂಘಟನೆ ಸಮಾಜಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ಮುಖ್ಯವಾಗಿ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ, ಪ್ರಸಕ್ತ ಸಾಲಿನಲ್ಲಿ 1.50 ಕೋಟಿ ರೂ. ಗಳಷ್ಟು ವಿದ್ಯಾರ್ಥಿ ವೇತನವನ್ನು ಶಾಲಾ ಮಕ್ಕಳಿಗೆ ನೀಡಿದೆ. ರೂ.59 ಲಕ್ಷ ಶಾಲಾ ಪಠ್ಯ ಪುಸ್ತಕಗಳನ್ನು ಸೇರಿದಂತೆ ದೇಶದಲ್ಲಿ 32 ಗ್ರಾಮಗಳ ಪ್ರಾಥಮಿಕ ಶಾಲೆಗಳನ್ನು ದತ್ತು ಪಡೆದುಕೊಂಡು ಶಿಕ್ಷಣವನ್ನು ಉಚಿತವಾಗಿ ನೀಡಲಾಗಿದೆ. ಜಿಲ್ಲೆಯಲ್ಲಿಯೂ ರಕ್ತದಾನ ಶಿಬಿರಗಳು, ವೈದ್ಯಕೀಯ ಶಿಬಿರಗಳು ಸೇರಿದಂತೆ ಭೂಕುಸಿತದಿಂದ ಉಂಟಾದ ನಿರಾಶ್ರಿತರ ಪುನರ್ವಸತಿಗಾಗಿ ಸಂಘಟನೆ ಶ್ರಮಿಸುತ್ತಿದೆ ಎಂದು ಶಾಫಿ ವಿವರಿಸಿದರು.

ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಚುನಾವಣೆ ಪೂರ್ವ ನೀಡಿದ ಭರವಸೆಗಳನ್ನು ಇಲ್ಲಿಯವರೆಗೆ ಈಡೇರಿಸಿಲ್ಲ. ಉದ್ಯೋಗ ಸೃಷ್ಟಿಯ ಯೋಜನೆಗಳು ಇನ್ನೂ ಕೂಡ ಅನುಷ್ಠಾನಗೊಂಡಿಲ್ಲ. ದೇಶದ ಆರ್ಥಿಕ ಮುಗ್ಗಟ್ಟನ್ನು ನಿಭಾಯಿಸುವಲ್ಲಿ ಕೇಂದ್ರ ಸರ್ಕಾರ ವಿಫಲಗೊಂಡಿದೆ ಎಂದು ಟೀಕಿಸಿದರು.

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಕಳೆದ 10 ವರ್ಷಗಳಿಂದ ಕೋಮುಗಲಭೆ ಕಡಿಮೆಯಾಗಿದೆ. ಇದಕ್ಕೆ ಮುಖ್ಯ ಕಾರಣ ಪಿಎಫ್‍ಐ ವತಿಯಿಂದ  ಮುಸ್ಲಿಂ ಸಮುದಾಯದ ಯುವಕರಲ್ಲಿ ಜಾಗೃತಿ ಮೂಡಿಸಲಾಗುತ್ತಿರುವುದು ಮತ್ತು ಕಾನೂನಾತ್ಮಕ ಹೋರಾಟ ನಡೆಸುವ ಮೂಲಕ ಸಮಾಜದಲ್ಲಿ ಶಾಂತಿ ಕಾಪಾಡುವ ಕಾರ್ಯ ಮಾಡಲಾಗುತ್ತಿದೆ ಎಂದು ಶಾಫಿ ಬೆಳ್ಳಾರೆ ಹೇಳಿದರು.

ಸಂವಾದದಲ್ಲಿ ಪಿಎಫ್‍ಐ ಕೊಡಗು ಜಿಲ್ಲಾಧ್ಯಕ್ಷ ಹಾರೀಸ್ ಹಾಗೂ ಎಸ್‍ಡಿಪಿಐ ರಾಜ್ಯ ಸಮಿತಿ ಸದಸ್ಯ ಅಮೀನ್ ಮೊಹಿಸಿನ್ ಹಾಜರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News