84ನೆ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಡಾ.ಚಂದ್ರಶೇಖರ ಕಂಬಾರ ಆಯ್ಕೆ

Update: 2018-09-27 11:17 GMT

ಬೆಂಗಳೂರು, ಸೆ. 27: ಧಾರವಾಡದಲ್ಲಿ ಡಿಸೆಂಬರ್‌ನಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ, ಖ್ಯಾತ ನಾಟಕಕಾರ ಡಾ.ಚಂದ್ರಶೇಖರ ಕಂಬಾರ ಅವರನ್ನು ಆಯ್ಕೆ ಮಾಡಲಾಗಿದೆ.

ಗುರುವಾರ ಗದಗದಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಮತ್ತು ಪದಾಧಿಕಾರಿಗಳ ಸಭೆಯಲ್ಲಿ ಡಾ.ಚಂದ್ರಶೇಖರ ಕಂಬಾರ ಅವರನ್ನು ಅಖಿಲ ಭಾರತ ಕನ್ನಡ ಸಮ್ಮೇಳನದ ಅಧ್ಯಕ್ಷರನ್ನಾಗಿ ಒಮ್ಮತದ ಆಯ್ಕೆ ಮಾಡಲಾಗಿದೆ ಎಂದು ತಿಳಿಸಲಾಗಿದೆ.

ಸಮ್ಮೇಳನ ಅಧ್ಯಕ್ಷರ ಆಯ್ಕೆ ಸಂಬಂಧ ಈ ಹಿಂದೆ ಧಾರವಾಡದಲ್ಲಿ ನಡೆದ ಕಸಾಪ ಪದಾಧಿಕಾರಿಗಳ ಸಭೆಯಲ್ಲಿ ಸಾಹಿತಿಗಳಾದ ಜಿ.ಎಸ್.ಆಮೂರ, ಗುರುಲಿಂಗ ಕಾಪಸೆ, ಸಿದ್ದಲಿಂಗ ಪಟ್ಟಣಶೆಟ್ಟಿ, ವೀಣಾಶಾಂತೇಶ್ವರ, ಡಾ.ಚೆನ್ನಣ್ಣ ವಾಲೀಕಾರ, ಪಂಚಾಕ್ಷರಿ ಹಿರೇಮಠ, ಎಚ್.ಎಸ್.ವೆಂಕಟೇಶಮೂರ್ತಿಯವರ ಹೆಸರುಗಳು ಕೇಳಿಬಂದಿದ್ದವು.

ಅಂತಿಮವಾಗಿ ಡಾ.ಚಂದ್ರಶೇಖರ ಕಂಬಾರ ಅವರನ್ನು ಆಯ್ಕೆ ಮಾಡಲಾಗಿದೆ. ಡಿಸೆಂಬರ್ 7, 8 ಮತ್ತು 9ರಂದು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಧಾರವಾಡದಲ್ಲಿ ನಡೆಸಲು 2016ರ ನವೆಂಬರ್‌ನಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತು ಎಂದು ತಿಳಿಸಲಾಗಿದೆ.

ಈ ಹಿಂದೆ 1918, 1940 ಮತ್ತು 1957ರಲ್ಲಿ ಧಾರವಾಡದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿದ್ದು, 1918ರಲ್ಲಿ ಆರ್.ನರಸಿಂಹಾಚಾರ್, 1940ರಲ್ಲಿ ವೈ. ಚಂದ್ರಶೇಖರಶಾಸ್ತ್ರಿ ಮತ್ತು 1957ರಲ್ಲಿ ಕುವೆಂಪು ಅವರು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

ಚಂದ್ರಶೇಖರ ಕಂಬಾರ ಅವರು 1937ರ ಜನವರಿ 2ರಂದು ಬೆಳಗಾವಿ ಜಿಲ್ಲೆಯ ಘೊಡಗೇರಿ ಗ್ರಾಮದ ಬಸವಣ್ಣೆಪ್ಪ ಮತ್ತು ಚೆನ್ನಮ್ಮ ಕಂಬಾರ ದಂಪತಿಯ ಪುತ್ರರಾಗಿ ಜನಿಸಿದ್ದು, ಬೆಳಗಾವಿಯ ಲಿಂಗರಾಜ ಕಾಲೇಜಿನಲ್ಲಿ ಬಿಎ, ಕರ್ನಾಟಕ ವಿವಿಯಿಂದ ಎಂಎ ಪದವಿ ಮತ್ತು ಪಿಎಚ್‌ಡಿ ಪಡೆದ ಅವರು ಬೆಂಗಳೂರು ವಿವಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.

ಜಾನಪದ ಅಕಾಡೆಮಿ ಅಧ್ಯಕ್ಷರಾಗಿ, ರಾಷ್ಟ್ರೀಯ ನಾಟಕ ಶಾಲೆ ನಿರ್ದೇಶಕರಾಗಿ, ಹಂಪಿ ಕನ್ನಡ ವಿ.ವಿ.ಯ ಮೊದಲ ಕುಲಪತಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಚಂದ್ರಶೇಖರ ಕಂಬಾರ, ತಾವೇ ಬರೆದ ಕರಿಮಾಯಿ, ಸಂಗೀತಾ, ಕಾಡುಕುದುರೆ ಕಾದಂಬರಿಗಳನ್ನು ಚಲನಚಿತ್ರಗಳಾಗಿಸಿದ್ದಾರೆ. ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಸಿರಿಸಂಪಿಗೆ ನಾಟಕಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 2001ರಲ್ಲಿ ಪದ್ಮಶ್ರೀ, 2004ರಲ್ಲಿ ಕನ್ನಡ ವಿಶ್ವವಿದ್ಯಾಲಯದಿಂದ ನಾಡೋಜ ಪ್ರಶಸ್ತಿ, ಕೇರಳದ ಕುಮಾರನ್ ಆಶಾನ್ ಪ್ರಶಸ್ತಿ, ಠಾಗೋರ್ ಪ್ರಶಸ್ತಿ ಹಾಗೂ 2010ರಲ್ಲಿ ಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿ ಚಂದ್ರಶೇಖರ ಕಂಬಾರರ ಮುಡಿಗೇರಿದೆ.

ಕನ್ನಡಿಗರ ಅಕ್ಷರ ಜಾತ್ರೆಯೆಂಬ ಹಿರಿಮೆ-ಹೆಗ್ಗಳಿಕೆಗೆ ಪಾತ್ರವಾಗಿರುವ 84ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಮನು ಬಳಿಗಾರ್ ಅಧಿಕೃತವಾಗಿ ಗದಗದಲ್ಲಿ ಪ್ರಕಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News