ಮಾಜಿ ಶಾಸಕಿ ಪರಿಮಳ ನಾಗಪ್ಪ ಅವರ ಹೇಳಿಕೆ ಸತ್ಯಕ್ಕೆ ದೂರ: ಶಾಸಕ ಆರ್.ನರೇಂದ್ರ

Update: 2018-09-27 17:25 GMT

ಹನೂರು,ಸೆ.27: ಬಡಜನರಿಗಾಗಿ ನೀಡುವ ಅಕ್ಕಿಯಲ್ಲಿ ದುರುಪಯೋಗ ಸೇರಿದಂತೆ ಯಾವುದೇ ಯೋಜನೆಗಳಲ್ಲಿ ದುರುಪಯೋಗ ಕಂಡುಬಂದರೂ ಅಂತಹ ಪ್ರಕರಣಗಳನ್ನು ಮುಚ್ಚಿಟ್ಟು ಅವರನ್ನು ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ. ಟಿಎಪಿಸಿಎಂಎಸ್ ಹಗರಣವನ್ನು ಮುಚ್ಚಿಹಾಕಲು ಪ್ರಯತ್ನಪಡಲಾಗುತ್ತಿದೆ ಎಂಬ ಮಾಜಿ ಶಾಸಕಿ ಪರಿಮಳ ನಾಗಪ್ಪ ಅವರ ಹೇಳಿಕೆ ಸತ್ಯಕ್ಕೆ ದೂರವಾದದ್ದು ಎಂದು ಶಾಸಕ ಆರ್.ನರೇಂದ್ರರಾಜುಗೌಡ ಸ್ಪಷ್ಟಪಡಿಸಿದರು.

ಹನೂರು ಪಟ್ಟಣದ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಆರ್.ನರೇಂದ್ರ ಸಮರ್ಪಕವಾಗಿ ಪಡಿತರ ವಿತರಣೆಯಾಗುತ್ತಿಲ್ಲ ಎಂದು ಕೆಲ ಗ್ರಾಮಸ್ಥರು ನನ್ನ ಗಮನಕ್ಕೆ ತಂದಿದ್ದರು ಮತ್ತು ಉಪವಿಭಾಗ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದ್ದರು. ಈ ವೇಳೆಯೇ ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಮತ್ತು ಉಪವಿಭಾಗಾಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು. ಈ ಸಂಬಂಧ ಉಪವಿಭಾಗಾದಿಕಾರಿಗಳು ಮತ್ತು ಆಹಾರ ಇಲಾಖೆಯ ಉಪನಿರ್ದೇಶಕರು ಮತ್ತು ಆಹಾರ ನಿರೀಕ್ಷಕರು ತನಿಖೆ ನಡೆಸಿ ಕಡತ ಮತ್ತು ಉಗ್ರಾಣ ಪರಿಶೀಲನೆ ನಡೆಸಿದಾಗ ಅಕ್ಕಿ, ಬೇಳೆ, ಸಕ್ಕರೆ ದಾಸ್ತಾನಿನಲ್ಲಿ ವ್ಯತ್ಯಾಸ ಕಂಡುಬಂದಿರುವ ಬಗ್ಗೆ ಮತ್ತು ದುರುಪಯೋಗವಾಗಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಉಗ್ರಾಣವನ್ನು ವಶಕ್ಕೆ ಪಡೆದು ಬೀಗಮುದ್ರೆ ಹಾಕಲಾಯಿತು. ಬಳಿಕ ಅಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿ ಸಿದ್ಧರಾಜುವಿನ ವಿರುದ್ಧ ಕ್ರಿಮಿನಲ್ ಪ್ರಕರಣವನ್ನೂ ದಾಖಲಿಸಲಾಗಿದೆ ಎಂದು ತಿಳಿಸಿದರು.

ಕೆಎಸ್‍ಎಫ್‍ಸಿ ಯಿಂದ ವಿತರಿಸಲು ಕ್ರಮ: ತಾಲ್ಲೂಕು ವ್ಯಾಪ್ತಿಯಲ್ಲಿ ಕಳೆದ 2 ತಿಂಗಳುಗಳಿಂದ ವಿತರಣೆಯಾಗಿರದ ಪಡಿತರ ವಿತರಣೆ ಮಾಡಲು ಮತ್ತು ಮುಂದಿನ ದಿನಗಳಲ್ಲಿ ನಿಗದಿತ ವೇಳೆಯಲ್ಲಿ ಪಡಿತರ ವಿತರಿಸಲು ಈಗಾಗಲೇ ಕ್ರಮವಹಿಸಲಾಗಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪ.ಪಂ ಅಧ್ಯಕ್ಷೆ ಮಮತಾ ಮಹಾದೇವು, ಮುಖಂಡರುಗಳಾದ ಜಯಪ್ರಕಾಶ್‍ಗುಪ್ತ, ಚಿಕ್ಕತಮ್ಮಯ್ಯ, ಮಾದೇಶ್, ರಮೇಶ್‍ನಾಯ್ಡು ಇನ್ನಿರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News