ಕೇವಲ ಕಾನೂನು ತಯಾರಿಸಿದರಷ್ಟೇ ಸಾಕೇ?

Update: 2018-09-27 18:32 GMT

ಭಾಗ -2

ಪ್ರಧಾನ ಮಂಡಲವು ವಿದೇಶ ವ್ಯವಹಾರ ಸಮಿತಿ, ಮೊದಲಾದ ಮಹತ್ವದ ಸಮಿತಿಗಳನ್ನು ನೇಮಿಸುತ್ತದೆ. ಆದರೆ ನನ್ನನ್ನು ಅಂಥ ಯಾವುದೇ ಸಮಿತಿಯಲ್ಲಿ ನೇಮಿಸಲಾಗಲಿಲ್ಲ. ನಾನು ಅರ್ಥಶಾಸ್ತ್ರ ಹಾಗೂ ಹಣಕಾಸಿನ ವ್ಯವಹಾರದ ವಿಷಯಗಳನ್ನು ಆಳವಾಗಿ ಅಭ್ಯಸಿಸಿದವನಾದ ಕಾರಣ ಆರ್ಥಿಕ ವ್ಯವಹಾರ ಸಮಿತಿಯನ್ನು ನಿರ್ಮಿಸಲಾದಾಗ, ನನ್ನ ನೇಮಕ ಆ ಸಮಿತಿಯಲ್ಲಿ ನಡೆದೀತೆಂದು ಲೆಕ್ಕ ಹಾಕಿದ್ದೆ. ಆದರೆ ಆ ಸಲವೂ ನನ್ನನ್ನು ತಪ್ಪಿಸಲಾಯಿತು. ಪ್ರಧಾನಮಂತ್ರಿಗಳು ವಿದೇಶಕ್ಕೆ ಹೋದಾಗ ನನ್ನನ್ನು ಈ ಸಮಿತಿಯಲ್ಲಿ ನೇಮಿಸಲಾಯಿತು. ಆದರೆ ಅವರು ವಿದೇಶದಿಂದ ಮರಳಿ ಬಂದ ಕೂಡಲೇ ಪ್ರಧಾನ ಮಂಡಲವನ್ನು ಪುನರ್ರಚಿಸಲೆಂದು ಅವರು ಕೈಗೊಂಡ ಯೋಜನೆಗಳ ಫಲವಾಗಿ ನನ್ನನ್ನು ಆ ಸಮಿತಿಯಿಂದ ಕೈಬಿಡಲಾಯಿತು. ಪ್ರಧಾನಮಂತ್ರಿಯವರು ಪ್ರಧಾನ ಮಂಡಲವನ್ನು ಪುನರ್ರಚಿಸಿದ ಬಳಿಕ ನನ್ನನ್ನು ಮತ್ತೆ ಆ ಸಮಿತಿಯಲ್ಲಿ ನೇಮಕ ಮಾಡಿದರು. ಮುಖ್ಯ ಪ್ರಧಾನರ ನನ್ನ ಬಗೆಗಿನ ನಡತೆಯನ್ನು ಅವರೆದುರು ಪ್ರತಿಭಟಿಸಿದಾಗ ಅವರ ಕಣ್ಣುಗಳು ತೆರೆದುಕೊಂಡು, ಅವರು ನನ್ನನ್ನು ಆ ಸಮಿತಿಯಲ್ಲಿ ನೇಮಿಸಿದರು.

ನನ್ನ ಬಗೆಗೆ ಬೇಕೆಂದೇ ತಾರತಮ್ಯವನ್ನು ಮಾಡಲಾಗುತ್ತಿತ್ತು. ಅದನ್ನು ಕುರಿತು ನಾನು ಮುಖ್ಯ ಪ್ರಧಾನರ ಬಳಿ ದೂರಿಕೊಳ್ಳಲಿಲ್ಲ. ಈ ಬಗೆಗೆ ಮುಖ್ಯ ಪ್ರಧಾನರೇ ಸಾಕ್ಷ ನೀಡುವರೆಂಬ ಭರವಸೆ ನನಗಿದೆ. ಸತ್ತೆಯ ರಾಜಕೀಯ ಮಾಡಲೆಂದು ಇಲ್ಲವೇ ಯಾವೊಬ್ಬ ಸಚಿವನ ಪದ ಬರಿದಾದಾಗ ಅದನ್ನು ತಮ್ಮತ್ತ ಸೆಳೆದುಕೊಳ್ಳಲೆಂದು ಪ್ರಧಾನ ಮಂಡಲದ ಸದಸ್ಯರು ಜೀವದ ಹಂಗುದೊರೆದು ಹೆಣಗುತ್ತಿದ್ದರು. ನಾನು ಅದರಿಂದ ಅಲಿಪ್ತನಾಗಿರುತ್ತಿದ್ದೆ. ವೌನ ತಳೆದು, ಸೇವೆಯನ್ನು ಮಾಡುವುದೇ ಶ್ರೇಷ್ಠ ಕರ್ತವ್ಯವೆಂಬ ವಿಶ್ವಾಸ ನನ್ನದು. ಆ ರೀತಿಯಾಗಿ ಪ್ರಧಾನಮಂತ್ರಿಯವರು ನನಗೆ ಒಪ್ಪಿಸಿದ ಇಲಾಖೆಯ ಸೇವೆಯನ್ನು ಮನಸಾರೆ ಮಾಡಿದೆ. ಇಂಥ ಪರಿಸ್ಥಿತಿಯಲ್ಲೂ ನನ್ನ ಮೇಲೆ ಅನ್ಯಾಯವಾದುದು ನನಗೆ ಕಾಣಿಸಲಿಲ್ಲ ಎಂದು ನಾನೆಂದಿದ್ದರೆ ಅದು ಮನುಷ್ಯ ಸ್ವಭಾವಕ್ಕೆ ಹೊರತಾಗುತ್ತಿತ್ತು.

ನಮ್ಮ ಸರಕಾರದ ಬಗೆಗೆ ನಾನೇಕೆ ಅಸಮಾಧಾನಿಯಾದೆ ಎನ್ನಲು ಎರಡನೆಯ ಇನ್ನೊಂದು ಬದಿಯಿದೆ. ಅದೆಂದರೆ ಹಿಂದುಳಿದ ವರ್ಗ ಹಾಗೂ ವರ್ಗೀಕೃತ ವರ್ಗಗಳ ಹಿತದ ಬಗೆಗೆ ಸರಕಾರವು ತೋರಿದ ಅನಾಸ್ಥೆ. ಸಂವಿಧಾನದಲ್ಲಿ ಹಿಂದುಳಿದ ವರ್ಗಗಳ ಹಿತದ ಬಗೆಗೆ ಯಾವುದೇ ಬಗೆಯ ಏರ್ಪಾಡನ್ನು ಮಾಡಲಾಗಿಲ್ಲ ಎಂಬ ಸಂಗತಿಯಿಂದ ನನಗೆ ತುಂಬ ದುಃಖವಾಗುತ್ತದೆ. ರಾಷ್ಟ್ರಾಧ್ಯಕ್ಷರು ನೇಮಕ ಮಾಡಬೇಕಿದ್ದ ಮಂಡಲಿಯು ಈ ಬಗೆಗೆ ಮಾಡಬೇಕಿದ್ದ ಉಪಾಯ ಯೋಜನೆಗಳನ್ನು ಸೂಚಿಸಬೇಕು ಮತ್ತು ಮುಂದೆ ಅವುಗಳ ಅನುಷ್ಠಾನ ಆಗಬೇಕೆಂದು ಸಂವಿಧಾನವನ್ನು ತಯಾರಿಸುವಾಗ ತೀರ್ಮಾನಿಸಲಾಗಿತ್ತು. ನಾವು ಸಂವಿಧಾನವನ್ನು ಮಂಜೂರು ಮಾಡಿ ಒಂದು ವರ್ಷ ಕಳೆದು ಹೋಯಿತು. ಆದರೆ ಈ ಮಂಡಲವನ್ನು ನೇಮಿಸುವ ಆವಶ್ಯಕತೆಯು ಈಗಲೂ ಸರಕಾರಕ್ಕೆ ಕಾಣುತ್ತಿಲ್ಲ. ನಾನು 1948ರಲ್ಲಿ ಸಚಿವ ಸಂಪುಟದಲ್ಲಿ ಇರಲಿಲ್ಲ. ನಾನು ಹಾಗೂ ದಲಿತ ವರ್ಗದ ಪ್ರಮುಖ ಸಮಾಜಸೇವಕರು ತುಂಬ ಚಿಂತಾಕ್ರಾಂತ ಮನಸ್ಥಿತಿಯಲ್ಲಿ ಈ ವರ್ಷವನ್ನು ಕಳೆದೆವು.

ಬ್ರಿಟಿಷ್ ರಾಜ್ಯಕರ್ತರು ದಲಿತ ವರ್ಗಗಳ ಹಿತಾಸಕ್ತಿಗಳನ್ನು ಕಾಪಾಡುವ ಬಗೆಗಿನ ಭರವಸೆಯನ್ನು ಸಂವಿಧಾನದಲ್ಲಿ ನಮೂದಿಸಿದ್ದರು. ಆದರೆ ಸತ್ತೆಯನ್ನು ತ್ಯಜಿಸಿದ ಬಳಿಕ ಅವರ ಹೊಣೆ ಮುಗಿಯಿತು. ಭಾರತೀಯ ಸಂವಿಧಾನ ಪರಿಷತ್ತು ಈ ಬಗೆಗೆ ಯಾವ ನೀತಿಯನ್ನು ಅವಲಂಬಿಸಲಿದೆ ಎನ್ನುವ ಬಗ್ಗೆ ದಲಿತ ವರ್ಗಕ್ಕೆ ಬಲು ದೊಡ್ಡ ಚಿಂತೆಯಾಗಿತ್ತು. ಇಂಥ ಚಿಂತಾಗ್ರಸ್ತ ಮನಸ್ಥಿತಿಯಲ್ಲಿರುವಾಗಲೇ ದಲಿತ ವರ್ಗದ ಅನುಕಂಪದ ಪರಿಸ್ಥಿತಿಯನ್ನು ಪರಿಶೀಲಿಸಿ ನಾನೊಂದು ವರದಿಯನ್ನು ತಯಾರಿಸಿ ಸಂಯುಕ್ತ ರಾಷ್ಟ್ರ ಸಂಘಕ್ಕೆ ಕಳಿಸಬೇಕೆಂದು ಯೋಚಿಸಿದೆ. ಆದರೆ ನಾನು ಆ ವರದಿಯನ್ನು ಸಂಯುಕ್ತ ರಾಷ್ಟ್ರ ಸಂಘಕ್ಕೆ ಕಳಿಸಿಕೊಡಲಿಲ್ಲ. ಇದಕ್ಕೆ ಕಾರಣವೇನೆಂದರೆ, ಸಂವಿಧಾನ ಪರಿಷತ್ತು ಹಾಗೂ ಲೋಕಸಭೆ ಎಂಬ ಸಂಸ್ಥೆಗಳು ದಲಿತ ವರ್ಗಗಳ ಹಿತಾಸಕ್ತಿಯನ್ನು ಕಾಪಾಡಲು ಹಾಗೂ ಅವರ ಪ್ರಗತಿಗಾಗಿ ಯಾವ ನೀತಿಯನ್ನು ಸ್ವೀಕರಿಸಲಿವೆ, ಯಾವ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳಲಿವೆ ಎನ್ನುವುದನ್ನು ಮೊದಲು ಕಂಡುಕೊಳ್ಳುವುದು ಸೂಕ್ತವೆಂದು ನನಗೆ ಅನ್ನಿಸಿತು.

ದಲಿತ ವರ್ಗಗಳ ಕುರಿತು ಸಂವಿಧಾನದಲ್ಲಿ ಮಾಡಿದ ಏರ್ಪಾಡು ಏನೇನೂ ಸಾಲವೆಂಬುದು ನನ್ನ ಅಭಿಪ್ರಾಯ. ಸಮಾಧಾನಕರವಿದ್ದೂ ಅದಕ್ಕೆ ಒಪ್ಪಿಗೆಯನ್ನು ನೀಡಿದೆನು. ಸರಕಾರವು ಈ ಏರ್ಪಾಡುಗಳನ್ನು ಮನಃಪೂರ್ವಕವಾಗಿ ಅನುಷ್ಠಾನಕ್ಕೆ ತಂದರೆ, ದಲಿತ ವರ್ಗಗಳ ಉನ್ನತಿಯ ಕೆಲಸವು ಅಷ್ಟಾಗಿ ಆಗದಿದ್ದರೂ ಅ ಕಾರ್ಯದ ಅಡಿಗಲ್ಲನ್ನಾದರೂ ಇರಿಸಲಾಗುವುದೆಂಬುದು ನನ್ನ ಉದ್ದೇಶವಾಗಿತ್ತು. ಸದ್ಯಕ್ಕೆ ದಲಿತ ವರ್ಗಗಳ ಅವಸ್ಥೆ ಹೇಗಿದೆ? ಎನ್ನುವುದನ್ನು ಕುರಿತು ನನಗೆ ತಿಳಿದಿರುವ ಮಟ್ಟಿಗೆ ಹೇಳುವುದಾದರೆ, ಅವರ ಅವಸ್ಥೆಯು 1946ರಲ್ಲಿದ್ದ ಹಾಗೆಯೇ ಇಂದಿಗೂ ಇದೆ. ಅದರಲ್ಲಿ ಯಾವುದೇ ಬಗೆಯ ವ್ಯತ್ಯಾಸ ಉಂಟಾಗಿಲ್ಲ. ಮೇಲ್ವರ್ಗಗಳವರಿಂದ ದಲಿತ ವರ್ಗಗಳ ಮೇಲೆ ಮೊದಲು ನಡೆದಿರುವಂಥ ಹಿಂಸೆ, ದೌರ್ಜನ್ಯ, ಭಯೋತ್ಪಾದನೆಗಳು ತೀರ ಅಮಾನವೀಯ ಸ್ವರೂಪದಲ್ಲಿ ಇಂದಿಗೂ ನಡೆಯುತ್ತಿವೆ. ಈ ಬಗೆಗಿನ ನೂರಾರು ಉದಾಹರಣೆಗಳನ್ನು ಕೊಡಬಲ್ಲೆ. ದಿಲ್ಲಿಯ ಸುತ್ತಲಿನ ಸಾವಿರಾರು ಜನ ದಲಿತ ವರ್ಗದವರು ತಮ್ಮ ದುಃಖಕರ ಪರಿಸ್ಥಿತಿ ವಾರ್ತೆಗಳನ್ನು ಹೇಳಲು ನನ್ನಲ್ಲಿಗೆ ಬರುತ್ತಾರೆ. ಸವರ್ಣೀಯ ಹಿಂದೂಗಳು ಹೊತ್ತುಹೊತ್ತಿಗೆ ನಮ್ಮ ಮೇಲೆ ದೌರ್ಜನ್ಯಗಳನ್ನು ಮಾಡುತ್ತಾರೆ, ನಾವು ಅವರ ವಿರುದ್ಧ ಪೊಲೀಸರಿಗೆ ದೂರು ಸಲ್ಲಿಸಿದರೂ ಅವರು ಅವುಗಳನ್ನು ನೋಂದಾಯಿಸಿಕೊಳ್ಳುವುದಿಲ್ಲ. ಹೀಗಾಗಿ ಬವಣೆ ಸಾರ್ವಜನಿಕವಾಗುವುದಿಲ್ಲ. ನಮಗೆ ಪೊಲೀಸರಿಂದ ರಕ್ಷಣೆ ದೊರೆಯುತ್ತಿಲ್ಲ ಎನ್ನುವ ದೈನ್ಯದ ಕಥೆಗಳನ್ನು ನನಗೆ ಹೇಳುತ್ತಾರೆ.

ಭಾರತದ ದಲಿತ ವರ್ಗಗಳ ಶೋಚನೀಯ ಹಾಗೂ ದಯನೀಯ ಪರಿಸ್ಥಿತಿಯನ್ನು ಭೋಗಿಸುವಂಥ ಇನ್ನೊಂದು ಮಾನವ ಜನಾಂಗವು ಈ ಪೃಥ್ವಿಯ ಮೇಲಿದೆಯೋ ಇಲ್ಲವೋ ಎಂದು ಹೇಳುವುದು ಕಷ್ಟ. ನಾನಂತೂ ಈವರೆಗೂ ಇಂಥ ಒಂದು ವರ್ಗವನ್ನು ಕಂಡಿಲ್ಲ. ಹೀಗಿರುವಲ್ಲಿ ಸರಕಾರವು ದಲಿತ ವರ್ಗಗಳ ದುಃಖವನ್ನು ಕಡಿಮೆ ಮಾಡಲು ಏಕೆ ಸಿದ್ಧವಾಗುತ್ತಿಲ್ಲ? ಸರಕಾರವು ವರ್ಗೀಕೃತ ಜನರ ಹಿತಾಸಕ್ತಿಗಳನ್ನು ಕಾಪಾಡುವಲ್ಲಿ ತೋರಿದ ಅನಾಸ್ಥೆಯಿಂದ ನಾನು ತುಂಬ ಕೆರಳಿದ್ದೆ. ನಾನು ಕುದಿಯುವ ಈ ಕೋಪವನ್ನು ಮನದಲ್ಲಿ ಹಾಗೆಯೇ ಉಳಿಸಿಕೊಂಡಿದ್ದೆ. ಕೆಲವು ದಿನಗಳ ಕೆಳಗೆ ವರ್ಗೀಕೃತ ಜನರ ಸಭೆಯನ್ನು ಕರೆಯಲಾಗಿತ್ತು. ಬಹಳ ದಿನಗಳ ತರುವಾಯ ಅದರಲ್ಲಿ ಈ ನನ್ನ ಪ್ರಚಂಡ ಕೋಪವನ್ನು ಹೊರಗೆಡಹಿದೆ. ಸರಕಾರಿ ನಿಯಮದಂತೆ ವರ್ಗೀಕೃತ ಜನರಿಗಾಗಿ ಕಾದಿರಿಸಲಾದ ಶೇ. ಹನ್ನೆರಡೂವರೆ ಸ್ಥಾನಗಳಿಂದ ಅವರಿಗೆ ಅಂಥ ಲಾಭವೇನೂ ಆಗಿಲ್ಲವೆಂದು ಯಾವಾಗಲೂ ಸರಕಾರವನ್ನು ದೂರುತ್ತೇನೆ. ಈ ಅಪಾದನೆಯಲ್ಲಿ ಏನಾದರೂ ನಿಜಾಂಶ ಇದೆಯೇ, ಎಂದು ಯಾರೋ ಸರಕಾರವನ್ನು ಕೇಳಿದರು.

ಅದರ ಉತ್ತರವೆಂದು ಗೃಹಸಚಿವ ಮಹಾಶಯರು ಈ ಅಪಾದನೆಯು ನಿರಾಧಾರವಾದುದು ಎಂದರು. ಈ ಪ್ರಶ್ನೆಗೆ ತಾವು ನೀಡಿದ ಉತ್ತರದ ಪುರಾವೆಗಳನ್ನು ಕಲೆಹಾಕಲೆಂದಾಗಲಿ ಇಲ್ಲವೇ ತಾವು ನೀಡಿದ ಹಾರಿಕೆಯ ಉತ್ತರದಿಂದ ಅವರ ಸದ್ವಿವೇಕ ಬುದ್ಧಿಯು ಅವರ ಮನಸ್ಸನ್ನು ಒಂದೇ ಸಮನೆ ಇರಿಯುತ್ತಿತ್ತೆಂದಾಗಲಿ, ಗೃಹಸಚಿವ ಮಹಾಶಯರು ಒಂದು ಸರ್ಕ್ಯುಲರ್‌ನ್ನು ಹೊರಡಿಸಿ, ಇತ್ತೀಚೆಗೆ ಸರಕಾರಿ ನೌಕರಿಗಾಗಿ ವರ್ಗೀಕೃತರ ಅದೆಷ್ಟು ಜನ ಅಭ್ಯರ್ಥಿಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಕೇಳಿದ್ದರು. ‘‘ಪ್ರತಿಯೊಂದು ಇಲಾಖೆಯಿಂದ ನಮ್ಮಲ್ಲಿ ಒಂದಿಬ್ಬರು ಅಭ್ಯರ್ಥಿಗಳನ್ನು ಯಾವುದಾದರೂ ಒಂದು ಆಫೀಸಿನಲ್ಲಿ ತೆಗೆದುಕೊಂಡಿದ್ದೇವೆ, ಆದರೆ ಒಟ್ಟಿನಲ್ಲಿ ಹೆಚ್ಚಿನ ಅಭ್ಯರ್ಥಿಗಳನ್ನು ಖಂಡಿತ ಸೇರಿಸಿಕೊಂಡಿಲ್ಲ’’ವೆಂದು ಸರ್ಕ್ಯುಲರ್‌ಗೆ ಬಂದ ಉತ್ತರ ವನ್ನು ಕುರಿತು ನನಗೆ ಲಭ್ಯವಾದ ಮಾಹಿತಿಯನ್ನಾಧರಿಸಿ ನಾನು ಹೀಗೆ ಪ್ರತಿಪಾದಿಸಬಲ್ಲೆ. ನನಗೆ ದೊರೆತ ಮಾಹಿತಿಯು ನಿಜವಾಗಿದ್ದರೆ, ಗೃಹಸಚಿವರು ಪ್ರಶ್ನೆಯನ್ನು ಕೇಳುವವನಿಗೆ ನೀಡಿದ ಉತ್ತರವನ್ನು ಕುರಿತು ಯಾವುದೇ ಬಗೆಯ ಭಾಷ್ಯವನ್ನು ಮಾಡುವ ಆವಶ್ಯಕತೆಯು ನನಗಿಲ್ಲ.

ನಾನು ವರ್ಗೀಕೃತ ಜನರಲ್ಲಿ ಹುಟ್ಟಿದವನಾದ್ದರಿಂದ ಆ ಜನರ ಪ್ರಗತಿಯನ್ನು ಸಾಧಿಸಲು ನನ್ನ ಆಯುಷ್ಯವನ್ನು ವ್ಯಯಿಸುವೆನೆಂದು ಚಿಕ್ಕಂದಿನಲ್ಲಿಯೇ ಪ್ರತಿಜ್ಞೆಯನ್ನು ಮಾಡಿದ್ದೇನೆ. ನನ್ನ ಈ ಪ್ರತಿಜ್ಞೆಯಿಂದ ದೂರಕ್ಕೆ ಸರಿಯಬಹುದಾದ ಹಲವು ಸನ್ನಿವೇಶಗಳು ನನ್ನ ಬಳಿ ಬಂದು ಹೋದವು. ಚಿಕ್ಕಂದಿನಲ್ಲಿ ನಾನು ಸ್ವಂತದ ಏಳಿಗೆಯನ್ನಷ್ಟೇ ಬಯಸಿದ್ದರೆ ನನಗೆ ಬೇಕಿದ್ದ ಯಾವುದೇ ಪ್ರತಿಷ್ಠೆಯ ಪದದ ಮೇಲೆ ವಿರಾಜಮಾನನಾಗಬಹುದಿತ್ತು. ನಾನು ಕಾಂಗ್ರೆಸ್‌ನ್ನು ಸೇರಿಕೊಂಡಿದ್ದರೆ ಅಲ್ಲಿಯ ಎಲ್ಲಕ್ಕೂ ಮೇಲಿನ ಹುದ್ದೆಯನ್ನು ಉಪಭೋಗಿಸಬಹುದಿತ್ತು. ಆದರೆ ವರ್ಗೀಕೃತ ಜನರ ಉನ್ನತಿಗಾಗಿ ನನ್ನ ಇಡಿಯ ಆಯುಷ್ಯವನ್ನು ಮುಡುಪಾಗಿಸಲು ನಿರ್ಧರಿಸಿ, ಆ ಗುರಿಯನ್ನು ಕಣ್ಣುಮುಂದೆ ಇರಿಸಿಕೊಂಡು, ಅದಕ್ಕಾಗಿ ಒಂದು ತತ್ತ್ವವನ್ನು ಅವಲಂಬಿಸುತ್ತ ಬಂದಿದ್ದೇನೆ. ಯಾವೊಬ್ಬನಿಗೆ ಯಾವೊಂದು ಕೆಲಸವನ್ನು ಸಫಲಗೊಳಿಸಬೇಕೆನ್ನುವ ತುಂಬು ಉತ್ಸಾಹವಿದ್ದು, ಆ ಕಾರ್ಯವನ್ನು ಪೂರ್ತಿಗೊಳಿಸುವುದೇ ಅವನ ಮನಸ್ಸಿಗೆ ಒಂದೇ ಸಮನೆ ಹತ್ತಿದ ಧ್ಯಾನವಾಗಿದ್ದು, ಆ ಕಾರ್ಯವನ್ನು ಪೂರ್ತಿಗೊಳಿಸಲೆಂದು ಅವನು ಆಕುಂಚಿತ ವಿಚಾರಸರಣಿ ಹಾಗೂ ಕೃತಿಯನ್ನು ಅವಲಂಬಿಸಿದರೂ ಶ್ಲಾಘ್ಯವೇ ಸರಿ, ಎಂಬುದು ಈ ತತ್ತ್ವ. ಸರಕಾರವು ಬಹಳ ದಿನಗಳಿಂದ ವರ್ಗೀಕೃತ ಜನರ ಹಿತಾಹಿತಗಳ ಪ್ರಶ್ನೆಯನ್ನು ಹಾಗೆಯೇ ನೇತು ಬಿಟ್ಟಿರುವ ಕಾರಣ ಅದನ್ನು ಕಂಡು ನನ್ನ ಮನಸ್ಸಿಗೆ ಅದೆಷ್ಟು ಯಾತನೆ ಆಗುತ್ತಿರಬಹುದೆಂಬುದರ ಸ್ಪಷ್ಟ ಕಲ್ಪನೆಯು ಮೇಲಿನ ಸಂಗತಿಯಿಂದ ನಿಮಗೆ ಬಂದಿರಲೂ ಸಾಕು.

ಮೂರನೆಯ ಸಂಗತಿ. ಸರಕಾರದ, ವಿದೇಶಗಳನ್ನು ಕುರಿತಾದ ನೀತಿಯು ನನ್ನನ್ನು ಅಸಮಾಧಾನಕ್ಕೆ ಈಡುಮಾಡಿದೆ. ಅದು ನನ್ನನ್ನು ಚಿಂತೆ ಹಾಗೂ ಮಾನಸಿಕ ಯಾತನೆಗಳ ಕಂದರಕ್ಕೂ ತಳ್ಳಿದೆ. ಉಳಿದ ದೇಶಗಳು ಭಾರತದೊಡನೆ ಇರಿಸಿಕೊಂಡಿದ್ದ ಸಂಬಂಧಗಳಲ್ಲಿ ಒಮ್ಮೆಲೆ ಬದಲಾವಣೆಗಳನ್ನು ಮಾಡಿವೆ. ಈ ಸಂಗತಿಯು ಈ ನೀತಿಯನ್ನು ಕುರಿತು ಆಳವಾಗಿ ಯೋಚಿಸುವವನಿಗೆ ಹಾಗೂ ಬೇರೆ ದೇಶಗಳು ಭಾರತದೊಡನೆ ಇರಿಸಿಕೊಂಡ ಸಂಬಂಧಗಳನ್ನು ಕುರಿತು ಹೆಚ್ಚಿನ ಮಾಹಿತಿಯನ್ನು ಕಲೆಹಾಕುವವನಿಗೆ ಕಂಡು ಬಂದೀತು. ನಾವು 15 ಆಗಸ್ಟ್ 1947ರಿಂದ ಒಂದು ಸ್ವತಂತ್ರ ದೇಶವಾಗಿ ನಡೆದುಕೊಳ್ಳತೊಡಗಿದೆವು. ಆಗ ಒಂದು ದೇಶವೂ ನಮಗೆ ಕೇಡು ಬಗೆಯುವಂತೆ ಇರಲಿಲ್ಲ. ಪ್ರಪಂಚದ ಪ್ರತಿಯೊಂದು ದೇಶವು ನಮ್ಮತ್ತ ಸ್ನೇಹಭಾವನೆಯಿಂದ ನೋಡುತ್ತಿತ್ತು. ನಾಲ್ಕು ವರ್ಷಗಳ ತರುವಾಯ ಇಂದು ಆ ಸ್ನೇಹಿತರೆಲ್ಲರೂ ನಮ್ಮನ್ನು ಬಿಟ್ಟು ದೂರ ಹೋಗಿರುವರು. ಈಗ ಪ್ರಪಂಚದ ಒಂದು ದೇಶವೂ ನಮ್ಮ ದೇಶವಾಗಿ ಉಳಿದಿಲ್ಲ. ನಾವು ನಮ್ಮ ಕೃತಿಯಿಂದಲೇ ಇನ್ನೊಬ್ಬರೊಂದಿಗಿನ ಸಂಬಂಧಗಳನ್ನು ಕಡಿದುಕೊಂಡೆವು. ನಾವು ಸಂಯುಕ್ತ ರಾಷ್ಟ್ರ ಸಂಘದಲ್ಲೂ ಜಂಭದಿಂದ ಮೆರೆಯುತ್ತಿದ್ದೇವೆ. ಅಲ್ಲಿ ನಾವೊಂದು ಮಸೂದೆಯನ್ನು ಮಂಡಿಸಿದರೆ ಅದಕ್ಕೆ ಅನುಮೋದನೆ ನೀಡಲು ಒಬ್ಬನೂ ಮುಂದೆ ಬರುವುದಿಲ್ಲ. ನಮ್ಮ ವಿದೇಶ ನೀತಿಯ ಅವಸ್ಥೆ ಹೀಗಿದೆ.

(ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿತ ಅಂಬೇಡ್ಕರ್ ಭಾಷಣ-ಬರಹಗಳ ಸಂಪುಟ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News