ವ್ಯಂಗ್ಯ ತೀಕ್ಷ್ಣತೆಯ ವೇಮನನ ವಚನಗಳು

Update: 2018-09-27 18:33 GMT

ಚನವೆನ್ನುವ ಪದವೇ ಅದರ ಸರಳತೆಯನ್ನು ಹೇಳುತ್ತದೆ. ವೇದಾಂತಗಳು ಜಟಿಲ ಭಾಷೆಯಲ್ಲಿ ಜನರನ್ನು ಗೊಂದಲಗೊಳಿಸುತ್ತಾ, ಭಯಗೊಳಿಸುತ್ತಾ ಅವರನ್ನು ತನ್ನ ಗುಲಾಮನನ್ನಾಗಿಸುತ್ತಿದ್ದಾಗ ಶ್ರೀಸಾಮಾನ್ಯರ ನಡುವಿನಿಂದಲೇ ವಚನಗಳು ಹುಟ್ಟಿದವು. ತನ್ನ ಸರಳತೆಯಿಂದ ಜನರನ್ನು ತಲುಪಿದವು. ಜನರನ್ನು ಎಚ್ಚರಗೊಳಿಸುತ್ತಾ ಅವರನ್ನು ಭಯದಿಂದ, ಗುಲಾಮತನದಿಂದ ಬಿಡುಗಡೆಗೊಳಿಸತೊಡಗಿದವು. ರಾಜ್ಯದಲ್ಲಂತೂ ಬಸವಣ್ಣನರಂತಹ ಶರಣ ಶ್ರೇಷ್ಠರ ವಚನಗಳು ಇಂದಿಗೂ ಶ್ರೀಸಾಮಾನ್ಯ ಕೈದೀವಿಗೆಗಳಾಗಿವೆ. ಇಂತಹದ್ದೇ ವಚನ ಚಳವಳಿಗಳು ಬೇರೆ ಬೇರೆ ಭಾಷೆಗಳಲ್ಲಿ ಸಂಭವಿಸಿವೆ. ತೆಲುಗಿನಲ್ಲಿ ಇಂತಹದೊಂದು ಕ್ರಾಂತಿ ಕವಿ ವೇಮನನ ಮೂಲಕ ನಡೆಯಿತು.

   ಸಾಮಾಜಿಕ ಅಸಮಾನತೆ ಮತ್ತು ಅವಲಕ್ಷಣಗಳ ಮೇಲೆ ಬಂಡಾಯ ಹೂಡಿದ ವೈಚಾರಿಕ ತೀಕ್ಷ್ಣತೆಯಿರುವ ತೆಲುಗಿನ ಮೊದಲ ಕವಿ ವೇಮನ ಎಂದು ಗುರುತಿಸಲಾಗಿದೆ. ವೇಮನನಿಗೂ ಮೊದಲಿದ್ದ ಕವಿಗಳು ಬಹುಪಾಲು ಮೇಲ್ಜಾತಿಯಿಂದ ಅಂದರೆ ಬ್ರಾಹ್ಮಣ ಸಮುದಾಯದಿಂದ ಬಂದವರು. ಜನರ ದುಃಖದುಮ್ಮಾನಗಳಿಂದ ದೂರವಿದ್ದವರು. ಜೊತೆಗೆ ರಾಜಾಶ್ರಯವನ್ನು ಹೊಂದಿದವರು. ಅವರದೆಲ್ಲ ಭಟ್ಟಂಗಿ ಕವಿತೆಗಳು. ವೇಮ ಸಾಮಾನ್ಯ ಜನಜೀವನದ ಅತಿಸಾಮಾನ್ಯ ವಿಷಯಗಳನ್ನು ವಸ್ತುವಾಗಿಟ್ಟುಕೊಂಡು ವಚನಗಳನ್ನು ಬರೆದ. ವರ್ಣಸಿದ್ಧಾಂತಗಳನ್ನು, ಮೂಢನಂಬಿಕೆಗಳನ್ನು, ಕಂದಾಚಾರ, ಅಸ್ಪಶ್ಯತೆ, ಜಾತಿ ಪದ್ಧತಿಯನ್ನು ಪ್ರಖರವಾಗಿ ಖಂಡಿಸಿದ. ವೈಚಾರಿಕ ದೃಷ್ಟಿಕೋನದಿಂದ ಸಮಕಾಲೀನ ಸಮಾಜವನ್ನು ದರ್ಶಿಸಿ, ಸರಳ ನುಡಿಗಟ್ಟಿನಲ್ಲಿ ಕವಿತೆಯನ್ನು ಕಟ್ಟಿದ ಅನುಭಾವಿ ಕವಿ ಎಂದು ಅವನನ್ನು ಗುರುತಿಸಲಾಗಿದೆ. ವೇಮನನ ವಚನಗಳ ವ್ಯಾಖ್ಯಾನಗಳನ್ನು ‘ಉರಿಯ ನೆಳಲು’ ಹೆಸರಿನಲ್ಲಿ ಇಲ್ಲಿ ನೀಡಲಾಗಿದೆ. ತೆಲುಗಿನ ಡಾ. ಎನ್. ಗೋಪಿ ಅವರು ಬರೆದ ಕೃತಿಯನ್ನು ಬಿ. ಸುಜ್ಞಾನ ಮೂರ್ತಿಯವರು ಕ್ನಡಕ್ಕೆ ತಂದಿದ್ದಾರೆ.
ಮೊದಲ ಭಾಗದಲ್ಲಿ ವೇಮನನ ವಚನಗಳ ಹಿನ್ನೆಲೆಗಳನ್ನು ವಿವರಿಸಲಾಗಿದೆ. ವೇಮನನ ಕಾಲದ ಸಾಮಾಜಿಕ ಬದುಕು, ಆತ ಬದುಕಿದ್ದ ಪರಿಸರ ಮತ್ತು ಆತನ ವಚನಗಳನ್ನು ರೂಪಿಸಿದ ಅಂದಿನ ಸಾಮಾಜಿಕ ಪರಿಸ್ಥಿತಿಗಳನ್ನು ಸಂಕ್ಷಿಪ್ತವಾಗಿ ಕಟ್ಟಿಕೊಡಲಾಗಿದೆ. ಉಳಿದಂತೆ, ಆತನ ವಚನಗಳನ್ನು, ರಾಜಪ್ರಭುತ್ವ, ಆರ್ಥಿಕ ಚಿಂತನೆ, ಸಾಮಾಜಿಕ ಚಿಂತನೆಗಳ ನೆಲೆಯಲ್ಲಿ ಲೇಖಕರು ವ್ಯಾಖ್ಯಾನಿಸಿದ್ದಾರೆ. ಹಾಗೆಯೇ ವಚನದಲ್ಲಿರುವ ಸಾಮಾಜಿಕ ವೌಲ್ಯಗಳನ್ನೂ ವಿಶ್ಲೇಷಿಸಿದ್ದಾರೆ.
‘‘ಲೋಭಿಯನ್ನು ಕೊಲ್ಲಲು ಈ ಲೋಕದಲಿ
ವಿಷವಿಡುವುದು ಬೇಡ, ಬೇರೆ ದಾರಿಯುಂಟು
ಹಣ ಕೇಳಿದಾಕ್ಷಣ ಥಟ್ಟನೆ ಬಿದ್ದು ಸಾಯುವನು
ವಿಶ್ವದಾಭಿರಾಮ ಕೇಳು ವೇಮ’’ ಈ ನಾಲ್ಕು ಸಾಲುಗಳಲ್ಲೇ ಜಿಪುಣನನ್ನು ಕವಿ ವ್ಯಂಗ್ಯ ಮಾಡುತ್ತಾನೆ. ಶ್ರೀಮಂತರನ್ನು ಮತ್ತು ಡಂಭಾಚಾರಿಗಳನ್ನು ಪದೇ ಪದೇ ತನ್ನ ವಚನಗಳಲ್ಲಿ ವೇಮನ ವ್ಯಂಗ್ಯ ಮಾಡುತ್ತಾ ಸಾಗುತ್ತಾನೆ. ಆತನ ವಚನಗಳ ಪ್ರಧಾನ ಗುಣವೇ ವ್ಯಂಗ್ಯವಾಗಿದೆ.

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News