ರಫೇಲ್ ಕುರಿತಂತೆ ಪ್ರಧಾನಿ ಬೆಂಬಲಿಸಿ ಪವಾರ್ ಹೇಳಿಕೆ ವಿರೋಧಿಸಿ ಎನ್‍ಸಿಪಿಗೆ ತಾರಿಖ್ ಅನ್ವರ್ ರಾಜೀನಾಮೆ

Update: 2018-09-28 09:00 GMT

ಹೊಸದಿಲ್ಲಿ,ಸೆ.28 : ರಫೇಲ್ ಒಪ್ಪಂದದ ಕುರಿತಂತೆ ಪ್ರಧಾನಿ ನರೇಂದ್ರ ಮೋದಿಯನ್ನು ಬೆಂಬಲಿಸಿ ಹೇಳಿಕೆ ನೀಡಿದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿಯ ಅಧ್ಯಕ್ಷ ಶರದ್ ಪವಾರ್ ಅವರ ನಡೆಯನ್ನು ವಿರೋಧಿಸಿ ಎನ್‍ಸಿಪಿಯ ಸಂಸದ ತಾರಿಖ್ ಅನ್ವರ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.

“ಪವಾರ್ ಸಾಹೇಬ್ ಅವರ ಹೇಳಿಕೆಯಿಂದ ನೋವುಂಟಾಗಿ ರಾಜೀನಾಮೆ ನೀಡಿದ್ದೇನೆ. ರಫೇಲ್ ಹೆಸರಿನಲ್ಲಿ ನಡೆದಿರುವ ಭ್ರಷ್ಟಾಚಾರದ ತನಿಖೆ ನಡೆಯಬೇಕು,'' ಎಂದು ಅನ್ವರ್ ಹೇಳಿದ್ದಾರೆ.

ಬಿಹಾರದ ಕತಿಹಾರ್ ಕ್ಷೇತ್ರದ ಸಂಸರಾಗಿರುವ ಅನ್ವರ್ ಅವರು ಪವಾರ್ ಅವರ ಸಮೀಪವರ್ತಿಯೆಂದೇ ಗುರುತಿಸಲ್ಪಟ್ಟವರು  ಮಾಜಿ ಲೋಕಸಭಾ ಸ್ಪೀಕರ್ ಪಿ ಎ ಸಂಗ್ಮಾ ಜತೆಗೆ ದಶಕಗಳ ಹಿಂದೆ ಸೋನಿಯಾ ಗಾಂಧಿಯ ವಿದೇಶಿ ಮೂಲದ ವಿಚಾರದಲ್ಲಿ ಕಾಂಗ್ರೆಸ್ ತೊರೆದು ಎನ್‍ಸಿಪಿ ರಚಿಸುವಲ್ಲಿ ಪ್ರಮುಖ ಪಾತ್ರವನ್ನು ಅವರು ವಹಿಸಿದ್ದರು.

ಇತ್ತೀಚೆಗೆ ಮರಾಠಿ ಸುದ್ದಿ ಸಂಸ್ಥೆಯೊಂದರ ಜತೆ ಮಾತನಾಡಿದ್ದ ಶರದ್ ಪವಾರ್ ತಮಗೆ ರಫೇಲ್ ಒಪ್ಪಂದದ ಕುರಿತಂತೆ ಪ್ರಧಾನಿಯ ಉದ್ದೇಶಗಳ ಬಗ್ಗೆ ಯಾವುದೇ ಸಂಶಯಗಳಿಲ್ಲ ಎಂದು ಹೇಳಿದ್ದರು.

ಪವಾರ್ ಅವರ ಈ ಹೇಳಿಕೆ ಸಾಕಷ್ಟು ಸುದ್ದಿಯಾಗಿತ್ತಲ್ಲದೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಸಹಿತ ಹಲವಾರು ಬಿಜೆಪಿ ನಾಯಕರು ಈ ವಿಚಾರವನ್ನೇ ಕೈಗೆತ್ತಿಕೊಂಡು ರಫೇಲ್ ವಿಚಾರದಲ್ಲಿ ಕಾಂಗ್ರೆಸ್ ಎಲ್ಲಾ ವಿಪಕ್ಷಗಳನ್ನೂ ವಿಶ್ವಾಸಕ್ಕೆ ಪಡೆಯಲು ವಿಫಲವಾಗಿದೆ ಎಂದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News