ನೀರವ್ ಮೋದಿ ವಿರುದ್ಧ ಹಾಂಕಾಂಗ್ ನ್ಯಾಯಾಲಯದಲ್ಲಿ ವಂಚನೆ ಪ್ರಕರಣ ದಾಖಲು

Update: 2018-09-28 11:14 GMT

ಬೀಜಿಂಗ್, ಸೆ.28: ಭಾರತದ ಬ್ಯಾಂಕ್‌ಗಳಲ್ಲಿ ಕೋಟ್ಯಂತರ ರೂ. ಬಾಕಿ ಇಟ್ಟು ವಿದೇಶಕ್ಕೆ ಪರಾರಿಯಾಗಿರುವ ಆಭರಣ ಉದ್ಯಮಿ ನೀರವ್ ಮೋದಿ ವಿರುದ್ಧ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಹಾಂಕಾಂಗ್ ನ್ಯಾಯಾಲಯದಲ್ಲಿ ವಂಚನೆ ಮೊಕದ್ದಮೆ ದಾಖಲಿಸಿದೆ.

ಮೋದಿ ಅವರಿಗೆ ಸೇರಿರುವ ಎರಡು ಕಂಪೆನಿಗಳು ಬ್ಯಾಂಕಿಗೆ ಸುಮಾರು 5.49 ಮಿಲಿಯನ್ ಡಾಲರ್(ಸುಮಾರು 40 ಕೋ.ರೂ.)ಸಾಲವನ್ನು ಮರು ಪಾವತಿಸಿಲ್ಲ ಎಂದು ಆರೋಪಿಸಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಹಾಂಕಾಂಗ್ ಕೋರ್ಟಿನ ಮೆಟ್ಟಿಲೇರಿದೆ.

  ಮುಂಬೈ ಮೂಲದ ಉದ್ಯಮಿ ನೀರವ್ ಮೋದಿ ಭಾರತದಲ್ಲಿ ನಡೆದಿರುವ ದೊಡ್ಡ ಹಣಕಾಸು ಅವ್ಯವಹಾರದಲ್ಲಿ ಅತ್ಯಂತ ಬೇಕಾಗಿರುವ ವ್ಯಕ್ತಿಯಾಗಿದ್ದು, 2011ರ ಅಕ್ಟೋಬರ್‌ನಲ್ಲಿ ಫೈರ್‌ಸ್ಟೋನ್ ಟ್ರೇಡಿಂಗ್ ಪ್ರೈವೇಟ್ ಹಾಗೂ 2011ರ ನವೆಂಬರ್‌ನಲ್ಲಿ ಫೈರ್‌ಸ್ಟಾರ್ ಡೈಮಂಡ್ ಕಂಪೆನಿಗಳು ಪಡೆದಿರುವ ಸಾಲಗಳಿಗೆ ಗ್ಯಾರಂಟಿ ನೀಡಿದ್ದರು ಎಂದು ಬುಧವಾರ ಹೈಕೋರ್ಟಿಗೆ ಸಲ್ಲಿಸಿರುವ ರಿಟ್ ಅರ್ಜಿಯಲ್ಲಿ ಬ್ಯಾಂಕ್ ತಿಳಿಸಿದೆ ಎಂದು ‘ಸೌತ್ ಚೀನಾ ಮಾರ್ನಿಂಗ್ ಪೋಸ್ಟ್’ವರದಿ ಮಾಡಿದೆ.

ಹಾಂಕಾಂಗ್‌ನಿಂದ ನ್ಯೂಯಾರ್ಕ್ ತನಕ ಹಲವು ಆಭರಣದ ಮಳಿಗೆ ಹೊಂದಿರುವ ಮೋದಿಯಿಂದ ಯೂನಿಯನ್ ಬ್ಯಾಂಕ್ ಬಡ್ಡಿಯಲ್ಲದೆ 5.49 ಮಿಲಿಯನ್ ಡಾಲರ್‌ಗೂ ಅಧಿಕ ಬಾಕಿ ಮೊತ್ತ ಪಾವತಿಯನ್ನು ನಿರೀಕ್ಷಿಸುತ್ತಿದೆ ಎಂದು ವರದಿಯಾಗಿದೆ.

 47ರ ಹರೆಯದ ಮೋದಿ ಸರಕಾರಿ ಸ್ವಾಮ್ಯದ ಪಂಜಾಬ್ ನ್ಯಾಶನಲ್ ಬ್ಯಾಂಕ್(ಪಿಎನ್‌ಬಿ)ನಲ್ಲಿ 13,400 ಕೋ.ರೂ. ಸಾಲ ಬಾಕಿ ಇಟ್ಟು ವಿದೇಶಕ್ಕೆ ಪರಾರಿಯಾಗಿದ್ದು, ಮೋದಿ ವಿರುದ್ಧ ಭಾರತದ ತನಿಖಾ ಸಂಸ್ಥೆಗಳು ತನಿಖೆ ಕೈಗೆತ್ತಿಕೊಂಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News