ಶಿಕ್ಷಕರ ವರ್ಗಾವಣೆ ಆಕ್ಷೇಪಣೆ ಸಲ್ಲಿಕೆಗೆ 3 ದಿನಗಳ ಕಾಲಾವಕಾಶ: ಸಚಿವ ಎನ್.ಮಹೇಶ್

Update: 2018-09-29 14:57 GMT

ಬೆಂಗಳೂರು, ಸೆ.29: ಶಿಕ್ಷಕರ ವರ್ಗಾವಣೆ ಒಂದು ಸಾಮಾನ್ಯ ಪ್ರಕ್ರಿಯೆ. ನಮ್ಮಲ್ಲಿ 2.80 ಲಕ್ಷ ಶಿಕ್ಷಕರಿದ್ದು, 17-18 ಸಾವಿರ ಶಿಕ್ಷಕರು ವರ್ಗಾವಣೆಯಾಗುತ್ತಾರೆ. ಯಾರಿಗಾದರೂ ಈ ವರ್ಗಾವಣೆ ಪ್ರಕ್ರಿಯೆಯಲ್ಲಿ ಅನ್ಯಾಯವಾಗಿದ್ದರೆ ಅವರು ಮನವಿ ಸಲ್ಲಿಸಲು ಇಂದಿನಿಂದ ಮೂರು ದಿನಗಳ ಕಾಲಾವಕಾಶ ನೀಡಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್.ಮಹೇಶ್ ತಿಳಿಸಿದರು.

ಶನಿವಾರ ನಗರದ ಶಿಕ್ಷಕರ ಸದನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿಕ್ಷಕರ ವರ್ಗಾವಣೆಗೆ ಸಂಬಂಧಿಸಿದಂತೆ 2007ರಲ್ಲಿ ಜಾರಿಗೆ ತಂದ ಕಾಯ್ದೆ ಅನ್ವಯ ಕ್ರಮ ಕೈಗೊಳ್ಳಲಾಗಿದೆ. ವರ್ಗಾವಣೆಯ ಕೌನ್ಸಿಲ್ ಪ್ರಕ್ರಿಯೆಗೆ ಅಡೆತಡೆಗಳು ಎದುರಾಗುತ್ತಿರುವುದರಿಂದ ಎರಡು ದಿನ ಕಾದು ನೋಡುವಂತೆ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಸೂಚನೆ ನೀಡಿದ್ದೆ ಎಂದರು.

ಯಾವುದಾದರೂ ಒಂದು ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇದ್ದು, ಶಿಕ್ಷಕರ ಸಂಖ್ಯೆ ಹೆಚ್ಚಾಗಿದ್ದರೆ, ಹೆಚ್ಚುವರಿ ಶಿಕ್ಷಕರನ್ನು ಶಿಕ್ಷಕರ ಕೊರತೆ ಇರುವ ಶಾಲೆಗಳಿಗೆ ವರ್ಗಾವಣೆ ಮಾಡುವುದು ನಮ್ಮ ಆದ್ಯತೆಯಾಗಿದೆ. ಎರಡನೆಯದಾಗಿ ‘ಎ’ ವಲಯ(ಪಟ್ಟಣ ಪಂಚಾಯಿತಿ, ನಗರ ಸಭೆ, ಪಾಲಿಕೆ ಹಾಗೂ ಬಿಬಿಎಂಪಿ ವ್ಯಾಪ್ತಿ)ದಲ್ಲಿ 10 ವರ್ಷ ಸೇವೆ ಸಲ್ಲಿಸಿರುವವರು ಕಡ್ಡಾಯವಾಗಿ ‘ಸಿ’ ವಲಯ(ಗ್ರಾಮೀಣ ಪ್ರದೇಶ)ಕ್ಕೆ ಹೋಗಲೇಬೇಕು ಎಂದು ಅವರು ಹೇಳಿದರು.

ಮೂರನೆಯದಾಗಿ ಕೋರಿಕೆ ವರ್ಗಾವಣೆಗೆ ಆದ್ಯತೆ ನೀಡಲಾಗುವುದು. ಹೆಚ್ಚುವರಿ ಶಿಕ್ಷಕರ ಹಾಗೂ ಕಡ್ಡಾಯ ವರ್ಗಾವಣೆ ವಿಚಾರದಲ್ಲಿ ಕಾನೂನು ಅಡ್ಡಿಯಿದೆ. ಕೋರಿಕೆ ವರ್ಗಾವಣೆಯನ್ನು ಮಾನವೀಯತೆ ಆಧಾರದ ಮೇಲೆ ಮಾಡಬಹುದೇ ಎಂದು ಎರಡು ದಿನಗಳಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಇಲಾಖೆಯೊಂದಿಗೆ ಚರ್ಚಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೆ. ಅದರಂತೆ, ಕಾನೂನು ಪ್ರಕಾರ ನಾವು ಮಾನವೀಯತೆ ಆಧಾರದ ಮೇಲೆ ಮಾಡಲು ಸಾಧ್ಯವಾಗುವುದಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ ಎಂದು ಅವರು ತಿಳಿಸಿದರು.

2.80 ಲಕ್ಷ ಶಿಕ್ಷಕರು ಇದ್ದು, ವರ್ಗಾವಣೆ ಪ್ರಕ್ರಿಯೆಯಲ್ಲಿ ಯಾವುದೇ ರೀತಿಯ ಕಾನೂನು ಉಲ್ಲಂಘನೆಯಾಗುವುದು ಬೇಡ ಎಂಬುದು ನಮ್ಮ ಉದ್ದೇಶ. ಕಾನೂನು ರೀತಿಯಲ್ಲಿ ತನಗೆ ಅನ್ಯಾಯವಾಗಿದೆ ಎಂದು ಯಾರಾದರೂ ಶಿಕ್ಷಕರು ಆಕ್ಷೇಪ ವ್ಯಕ್ತಪಡಿಸುವುದಾದರೆ ಇಂದಿನಿಂದ ಮೂರು ದಿನಗಳ ಕಾಲ ಅವಕಾಶ ಕಲ್ಪಿಸಲಾಗಿದೆ ಎಂದು ಮಹೇಶ್ ಹೇಳಿದರು.

ಹೆಚ್ಚುವರಿ ಮತ್ತು ಕಡ್ಡಾಯ ವರ್ಗಾವಣೆಯಲ್ಲಿ ತೊಂದರೆಯಾಗಿರುವವರು ಆಕ್ಷೇಪ ಸಲ್ಲಿಸಿದರೆ, ಸೂಕ್ತ ಪ್ರಕರಣವೇ ಇಲ್ಲವೇ ಎಂಬುದನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳು ಪರಿಶೀಲಿಸಿ ನಮಗೆ ತಿಳಿಸಬೇಕು. ಈ ಪ್ರಕ್ರಿಯೆಯಲ್ಲಿ ಯಾವುದಾದರೂ ಲೋಪಗಳಾದರೆ ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಯನ್ನೆ ಅಮಾನತ್ತಿನಲ್ಲಿಡಲಾಗುವುದು ಎಂದು ಮಹೇಶ್ ಎಚ್ಚರಿಕೆ ನೀಡಿದರು.

ಆಧಾರ್ ಜೋಡಣೆ ಎಲ್ಲದಕ್ಕೂ ಕಡ್ಡಾಯ ಮಾಡುವಂತಿಲ್ಲ ಎಂದು ಸುಪ್ರೀಂಕೋರ್ಟ್ ಆದೇಶ ನೀಡಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಆಧಾರ್ ಜೋಡಣೆಯಿಂದ ನಮಗೆ ವ್ಯವಸ್ಥೆಯನ್ನು ಸರಿಪಡಿಸಲು ಸಹಕಾರಿಯಾಗುತ್ತದೆ. ನ್ಯಾಯಾಲಯ ಹೇಳಿದ್ದರೂ ಅನೇಕ ಯೋಜನೆಗಳಿಗೆ ಆಧಾರ್ ಜೋಡಣೆ ಮಾಡಲಾಗಿದೆ. ವಸತಿ ಯೋಜನೆಗಳಲ್ಲಿ ವಂಚನೆಯಾಗಬಾರದೆಂದು ಆಧಾರ್ ಜೋಡಣೆ ಮಾಡಲಾಗುತ್ತಿದೆ. ಇದರಿಂದ ಮಕ್ಕಳಿಗೆ ಯಾವುದಾದರೂ ತೊಂದರೆಯಾದರೆ ಅದನ್ನು ಸರಿಪಡಿಸೋಣ ಎಂದರು.

ಖಾಸಗಿ ಶಾಲೆಯ ಶಿಕ್ಷಕರನ್ನು ನಾನು ದಡ್ಡರು ಎಂದು ಹೇಳಿಲ್ಲ. ಅವರಿಗಿಂತ ಸರಕಾರಿ ಶಾಲೆಯ ಶಿಕ್ಷಕರು ಬುದ್ಧಿವಂತರಿರುತ್ತಾರೆ. ನಾವು ಆ ರೀತಿಯ ತರಬೇತಿಯನ್ನು ಅವರಿಗೆ ನೀಡಿರುತ್ತೇವೆ. ಖಾಸಗಿ ಶಾಲೆಗಳಲ್ಲಿ ತುಂಬಾ ಶಿಸ್ತಿನ ವಾತಾವರಣ ಇರುತ್ತದೆ ಎಂದು ಮಹೇಶ್ ಹೇಳಿದರು.

ದಿಲ್ಲಿಗೆ ಹೋಗಲಿದ್ದೇನೆ
ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ.ಪುಟ್ಟರಂಗ ಶೆಟ್ಟಿ ಹಾಗೂ ನನ್ನ ನಡುವೆ ನಡೆದಿರುವ ಮಾತು ಮುಗಿದ ಅಧ್ಯಾಯ. ಖಾತೆ ಬದಲಾವಣೆ ಕೋರಿ ನಾನು ಮುಖ್ಯಮಂತ್ರಿಗೆ ಮನವಿ ಮಾಡಿಲ್ಲ. ಹೊಸದಿಲ್ಲಿಯಲ್ಲಿರುವ ಸರಕಾರಿ ಶಾಲೆಗಳು ಖಾಸಗಿ ಶಾಲೆಗಳಿಗಿಂತ ಉತ್ತಮ ಗುಣಮಟ್ಟವನ್ನು ಹೊಂದಿವೆ ಎಂಬ ಸುದ್ದಿಗಳ ಆಧಾರದಲ್ಲಿ ಸಚಿವ ಬಂಡೆಪ್ಪ ಕಾಶೆಂಪೂರ್ ಹೋಗಿದ್ದಾರೆ. ದಸರಾ ಮುಗಿದ ನಂತರ ನಾನೂ ಹೊಸದಿಲ್ಲಿಗೆ ಹೋಗುತ್ತೇನೆ ಎಂದು ಮಹೇಶ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News