ಸಾಮಾನ್ಯ ಜನರ ಜ್ಞಾನ ಪರಂಪರೆ ಸಂಗ್ರಹಿಸುವಲ್ಲಿ ಸಂಶೋಧಕರು ವಿಫಲ: ಪ್ರೊ.ಪುರುಷೋತ್ತಮ ಬಿಳಿಮಲೆ

Update: 2018-09-29 17:41 GMT

ಧಾರವಾಡ, ಸೆ.29: ಕನ್ನಡದ ಜ್ಞಾನ ಪರಂಪರೆಯನ್ನು ಆಮೂಲಾಗ್ರವಾಗಿ ಸಂಗ್ರಹಿಸಿ, ರಾಷ್ಟ್ರೀಯ ಮತ್ತು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಹರಡುವಲ್ಲಿ ವಿದ್ವಾಂಸರು ಹಾಗೂ ಸಂಶೋಧಕರು ವಿಫಲರಾಗಿದ್ದಾರೆ ಎಂದು ಜವಾಹಾರ್‌ಲಾಲ್ ನೆಹರು ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ಭಾಷಾ ಪೀಠಾಧ್ಯಕ್ಷ ಪ್ರೊ.ಪುರುಷೋತ್ತಮ ಬಿಳಿಮಲೆ ವಿಷಾದ ವ್ಯಕ್ತಪಡಿಸಿದರು.

ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಾಮಾನ್ಯ ಜನರ ಜ್ಞಾನವನ್ನು ರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗೊಳಿಸುವ ಕಾರ್ಯವನ್ನು ಸರಕಾರ, ವಿಶ್ವವಿದ್ಯಾಲಯಗಳು ಹಾಗೂ ಕನ್ನಡದ ವಿದ್ವಾಂಸರು ಮಾಡಬೇಕಾದ ಅನಿವಾರ್ಯತೆ ಇದೆ ಎಂದು ಪ್ರತಿಪಾದಿಸಿದರು.

ಜನಪದ ಪ್ರದರ್ಶನ ಕಲೆಗಳನ್ನು ವ್ಯವಸ್ಥಿತವಾಗಿ ದಾಖಲೀಕರಣಗೊಳಿಸಿ ಡಿಜಿಟಲೀಕರಣ ಮಾಡುವ ಕಾರ್ಯ ಆಗಬೇಕಿದೆ. ಮೌಖಿಕ ರೂಪದ ಜಾನಪದ ಜ್ಞಾನ ಸಂಕೇತಗಳಾಗಿ ಬದಲಾಗುತ್ತಿವೆ. ಜನಪದದ ಮೂಲ ಉದ್ದೇಶಗಳು ತೀವ್ರಗತಿಯಲ್ಲಿ ಬದಲಾಗುತ್ತಿದ್ದು, ಅವುಗಳ ಸೂಕ್ಷ್ಮತೆಗಳನ್ನು ಅರಿತು ವೈಜ್ಞಾನಿಕವಾದ ಪರಿಭಾಷೆಗಳ ಮೂಲಕ ಕಟ್ಟಿಕೊಡಬೇಕಾಗಿದೆ ಎಂದು ಅವರು ಆಶಿಸಿದರು.

ಸಂಶೋಧನೆ ಮತ್ತು ಸಂಗ್ರಹ ಸಂದರ್ಭದಲ್ಲಿ ಕ್ಷೇತ್ರಕಾರ್ಯದ ಟಿಪ್ಪಣಿಗಳು, ಸಂದರ್ಶನಗಳು, ಮಾಹಿತಿಗಳು ಡಿಜಿಟಲೀಕರಣ ಆಗುವ ಮೂಲಕ ಅಂತರ್‌ರಾಷ್ಟ್ರೀಯ ಪ್ರೇಕ್ಷಕರಿಗೆ ಮತ್ತು ಮಾಹಿತಿದಾರರಿಗೆ ತಲುಪಿಸುವ ಕಾರ್ಯ ವ್ಯವಸ್ಥಿತವಾಗಿ ಆಗಬೇಕಾಗಿದೆ. ಯುನೆಸ್ಕೋದ ಮಾನದಂಡಗಳಡಿಯಲ್ಲಿ ಕರ್ನಾಟಕದ ಜನಪದ ಕಲೆಗಳನ್ನು ಗುರುತಿಸಿಕೊಳ್ಳುವಲ್ಲಿ ಇನ್ನು ನಾವು ಸಫಲರಾಗಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಪುಸ್ತಕಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಶಂಕರನಾರಾಯಣ, ಐತಿಹಾಸಿಕ ಪ್ರಜ್ಞೆ, ದಾಖಲೀಕರಣ ಹಾಗೂ ದಾಖಲೆಗಳ ಸಂರಕ್ಷಣೆಯ ಕ್ರಮವನ್ನು ನಾವು ಪಾಶ್ಚಾತ್ಯರಿಂದ ಕಲಿಯಬೇಕಾಗಿದೆ. ಸಾಂಸ್ಕೃತಿಕವಾಗಿ ಶ್ರೀಮಂತಿಕೆ ಹಾಗೂ ಸಮೃದ್ಧವಾಗಿರುವ ಕನ್ನಡ ಜನಪದ ಕಲೆ ಮತ್ತು ಜ್ಞಾನವನ್ನು ಸಂಪೂರ್ಣವಾಗಿ ಗಮನಹರಿಸುವಲ್ಲಿ ವಿಫಲರಾಗಿದ್ದೇವೆ. ವೈವಿಧ್ಯಮಯವಾದ ಹಾಗೂ ವೈಭವಯುತವಾದ ಕಲೆಗಳು ಯಥೇಚ್ಚವಾಗಿರುವುದೇ ಇದಕ್ಕೆ ಕಾರಣವಾಗಿರಬಹುದು. ಅನ್ಯಭಾಷೆ ಭಿನ್ನ ರಾಜ್ಯಗಳ ಸಂಸ್ಕೃತಿ ಪರಿಚಯದಿಂದ ಸಂಶೋಧಕನ ವೈಚಾರಿಕ ಮನೋಭಾವ ಬೆಳೆಯಲು ಸಾಧ್ಯ ಎಂದು ಹೇಳಿದರು.

ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಡಿ.ಬಿ.ನಾಯಕ್ ಮಾತನಾಡಿ, ಕಲೆ ಮತ್ತು ಕಲಾವಿದನ ಕುರಿತು ಅಧ್ಯಯನ ಮಾಡುವ ಮೂಲಕ ಅವರ ಜ್ಞಾನವನ್ನು ಶೋಧಿಸಿ, ಪರಿಷ್ಕರಿಸಿ ಅದನ್ನು ಅಭಿವೃದ್ಧಿಗೆ ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ಅರಿಯುವ ಜ್ಞಾನದ ಸೃಷ್ಟಿಯ ಉದ್ದೇಶದೊಂದಿಗೆ ಜಾನಪದ ವಿಶ್ವವಿದ್ಯಾಲಯ ಕಾರ್ಯನಿರ್ವಹಿಸುತ್ತಿದೆ. ಈ ಕಾರ್ಯದಲ್ಲಿ ಸಾಕಷ್ಟು ಸಮಸ್ಯೆ-ಸವಾಲುಗಳು ಆಡಳಿತ ಹಿನ್ನೆಲೆಯಲ್ಲಿ ಎದುರಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಲಾವಿದರ ಸಮಸ್ಯೆಗಳು ಕೂಡ ದೊಡ್ಡ ಸವಾಲಾಗಿದೆ. ಇದನ್ನು ಕಾಲಕಾಲಕ್ಕೆ ಬಗೆಹರಿಸುವ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.

ಪುಸ್ತಕ ಬಿಡುಗಡೆ: ಡಾ.ಹಾ.ತಿ.ಕೃಷ್ಣೇಗೌಡ ಹಾಗೂ ಡಾ.ಮೈಲಹಳ್ಳಿ ರೇವಣ್ಣ ಸಂಪಾದಕತ್ವದ ಜಾನಪದ ಬೆಡಗು, ಪ್ರೊ.ಸ.ಚಿ.ರಮೇಶ ಅವರ ದಕ್ಷಿಣ ಭಾರತೀಯ ದೇಸಿ ಕೃಷಿ ಜ್ಞಾನ ಕೋಶ, ಸಂಪುಟ-1, 2 (ಮರು ಮುದ್ರಣ), ಡಾ. ಸಿದ್ದೇಶ್ವರಿ ಅವರ ನಮ್ಮೂರ ಅಮಕುಂದಿ, ಬಾಗೂರು ನಾಗರಾಜಪ್ಪಅವರ ನಮ್ಮೂರ ಸಣ್ಣಕ್ಕಿ ಬಾಗೂರು, ಡಾ.ಬಸವರಾಜ್ ನಾಯ್ಕರ್ ಅವರ ಶ್ರೀಕೃಷ್ಣ ಪಾರಿಜಾತ, ಡಾ.ಎಸ್. ಎಂ.ಮುತ್ತಯ್ಯ ಅವರ ಚಿತ್ರದುರ್ಗ ಜಿಲ್ಲೆಯ ಪಶುಪಾಲನಾ ಸಂಸ್ಕೃತಿ, ಡಾ. ಹನುಮಪ್ಪ ಎಸ್.ಘಂಟಿ ಅವರ ಶಹನಾಯಿ ಮಾಂತ್ರಿಕ ಬಸವರಾಜ ಭಜಂತ್ರಿ, ಡಾ.ಬಸವರಾಜ ಎಸ್.ಜಿ ಅವರ ಕರಕುಶಲ ಕಲೆ ಮತ್ತು ಆಧುನಿಕತೆ, ಸಣ್ಣಯ್ಯ ಜಿ.ಎಸ್ ಅವರ ಮೂಡಲಪಾಯ ಬಾಗವತ ವಿದ್ವಾನ್ ಕ.ನ.ದಾಸಾಚಾರ್ ಹಾಗೂ ಮಹೇಶ ಯಮೋಜಿ ಅವರ ಪಕ್ಷಿನೋಟ ಕೃತಿಗಳು ಈ ಸಮಯದಲ್ಲಿ ಬಿಡುಗಡೆಗೊಳಿಸಲಾಯಿತು.

ಕಾರ್ಯಕ್ರಮದಲ್ಲಿ ಜಾನಪದ ವಿವಿ ಕುಲಸಚಿವ ಪ್ರೊ.ಚಂದ್ರಶೇಖರ್, ಮೌಲ್ಯಮಾಪನ ಕುಲಸಚಿವ ಡಾ. ಎಂ.ಎನ್.ವೆಂಕಟೇಶ, ಸಹಾಯಕ ಪ್ರಾಧ್ಯಾಪಕರುಗಳಾದ ಡಾ. ಚಂದ್ರಪ್ಪ ಸೊಬಟಿ ಹಾಗೂ ಡಾ. ಜಯಲಕ್ಷ್ಮಿ ಗೇಟಿಯವರು ಕಾರ್ಯಕ್ರಮ ನಿರ್ವಸಿದರು. ಸಹಾಯಕ ಕುಲಸಚಿವ ಶಹಜಹಾನ್ ಎಚ್.ಮುದಕ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News