ರಕ್ಷಣೆಗಿಂತ ಶಿಕ್ಷಣಕ್ಕೆ ಹೆಚ್ಚಿನ ಅನುದಾನ ಅಗತ್ಯ : ಎನ್.ಮಹೇಶ್

Update: 2018-09-29 18:41 GMT

ಬೆಂಗಳೂರು, ಸೆ.29: ದೇಶದ ರಕ್ಷಣಾ ಇಲಾಖೆಗಿಂತ ಶಿಕ್ಷಣ ಇಲಾಖೆಗೆ ಹೆಚ್ಚಿನ ಅನುದಾನ ಒದಗಿಸುವ ಅಗತ್ಯವಿದೆ. ಆದರೆ, ನಮ್ಮ ದೇಶದಲ್ಲಿ ರಕ್ಷಣಾ ಇಲಾಖೆಗೆ ದೇಶದ ಒಟ್ಟು ಜಿಡಿಪಿಯಲ್ಲಿ ಶೇ.26ರಷ್ಟು ವಿನಿಯೋಗಿಸುತ್ತಿದ್ದರೆ, ಶಿಕ್ಷಣ ಇಲಾಖೆಗೆ ಲಭಿಸುತ್ತಿರುವುದು ಕೇವಲ ಶೇ.3ರಷ್ಟು ಮಾತ್ರ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್.ಮಹೇಶ್ ತಿಳಿಸಿದರು.

ಶನಿವಾರ ಶಿಕ್ಷಕರ ಸದನದಲ್ಲಿ ಆಯೋಜಿಸಿದ್ದ ‘ಸರಕಾರಿ ಶಾಲೆಗಳ ಸಬಲೀಕರಣಕ್ಕಾಗಿ ಹಳೆಯ ವಿದ್ಯಾರ್ಥಿಗಳ ಸಂಘದ ರಾಯಭಾರಿಗಳ ಸಮಾವೇಶ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಯೂನಿಸೆಫ್ ಸೇರಿದಂತೆ ಅನೇಕ ಪ್ರತಿಷಿ ಸಂಸ್ಥೆಗಳ ಪ್ರಕಾರ ಶಿಕ್ಷಣ ಕ್ಷೇತ್ರಕ್ಕೆ ಜಿಡಿಪಿಯ ಶೇ.12ರಷ್ಟು ಅನುದಾನವನ್ನು ನೀಡಬೇಕು. ಅಮೆರಿಕಾದಲ್ಲಿ ಶೇ.6, ಪಾಕಿಸ್ತಾನದಲ್ಲಿ ಶೇ.5ರಷ್ಟು ಪ್ರಮಾಣವನ್ನು ಒದಗಿಸುತ್ತಿದ್ದರೆ, ನಮ್ಮ ದೇಶದಲ್ಲಿ ಮಾತ್ರ ಶೇ.3ರಷ್ಟು ಅನುದಾನ ಮಾತ್ರ ನೀಡಲಾಗುತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ನಮ್ಮ ದೇಶದಲ್ಲಿ ವಿನಾಶಕಾರಿ ಅಂಶಗಳಾದ ಮದ್ದುಗುಂಡು, ಬಾಂಬ್ ಮತ್ತು ಪಿಸ್ತೂಲುಗಳು, ಶಸ್ತ್ರಾಸ್ತ್ರಗಳಿಗೆ ಹೆಚ್ಚಿನ ಅನುದಾನ ದೊರೆಯುತ್ತಿದೆ. ಆದರೆ, ದೇಶವನ್ನು ಅಭಿವೃದ್ಧಿ ಪಡಿಸುವ ಸಂಪನ್ಮೂಲವಾಗಿರುವ ಶಿಕ್ಷಣದ ಕಡೆ ಹೆಚ್ಚಿನ ಗಮನ ಹರಿಸದಿರುವುದು ವಿಷಾದನೀಯ ಎಂದು ಮಹೇಶ್ ಹೇಳಿದರು.

ಖಾಸಗಿ ಸಂಸ್ಥೆಗಳಾದ ಲಯನ್ಸ್‌ಕ್ಲಬ್, ರೋಟರಿ ಹಾಗೂ ಹಳೆಯ ವಿದ್ಯಾರ್ಥಿಗಳ ಸಂಘ ಸೇರಿದಂತೆ ಎಲ್ಲರೂ ಪರಸ್ಪರ ಕೈ ಜೋಡಿಸಿದಾಗ ಮಾತ್ರ ಸರಕಾರಿ ಶಾಲೆಗಳ ಅಭಿವೃದ್ಧಿ ಸಾಧ್ಯ. ಸರಕಾರಿ ಶಾಲೆಗಳ ಸಬಲೀಕರಣಕ್ಕಾಗಿ ಈ ಸಂಸ್ಥೆಗಳು ಹಾಗೂ ಸಂಘಟನೆಗಳು ಪಡುತ್ತಿರುವ ಶ್ರಮ ಶ್ಲಾಘನೀಯ ಎಂದು ಅವರು ತಿಳಿಸಿದರು.

ಖಾಸಗಿ ಶಾಲೆಗಳಲ್ಲಿ ಅಧ್ಯಯನ ನಡೆಸುವ ಮಕ್ಕಳು ಗಿಳಿಗಳಂತೆ, ಸರಕಾರಿ ಶಾಲೆಯ ಮಕ್ಕಳು ಗರುಡಗಳು ಇದ್ದಂತೆ. ಸರಕಾರಿ ಶಾಲೆಯ ಮಕ್ಕಳು ಖಾಸಗಿ ಶಾಲೆ ಮಕ್ಕಳಿಗಿಂತ ಹೆಚ್ಚು ಬುದ್ಧಿವಂತರಾಗಿರುತ್ತಾರೆ ಎಂದು ಮಹೇಶ್ ಹೇಳಿದರು.

ಸಾಮಾನ್ಯವಾಗಿ ಖಾಸಗಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುವ ಮಕ್ಕಳು ವಿದೇಶಗಳಿಗೆ ಹೋಗಿ ಬೇರೆ ದೇಶಗಳನ್ನು ಉದ್ಧಾರ ಮಾಡುತ್ತಾರೆ. ಆದರೆ, ಸರಕಾರಿ ಶಾಲೆಯಲ್ಲಿ ಓದಿದ ಮಕ್ಕಳು ಇಲ್ಲಿಯೇ ಉದ್ಯೋಗ ಮಾಡಿಕೊಂಡು ಈ ದೇಶದ ಸೇವೆ ಮಾಡುತ್ತಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಸರಕಾರಿ ಶಾಲೆಯ ವಿದ್ಯಾರ್ಥಿಗಳಂತೆ, ಸರಕಾರಿ ಶಾಲೆಯ ಶಿಕ್ಷಕರೂ ಸಹ ಖಾಸಗಿ ಶಾಲೆಯ ಶಿಕ್ಷಕರಿಗಿಂತ ಹೆಚ್ಚು ಬುದ್ಧಿವಂತರಾಗಿರುತ್ತಾರೆ. ಪೋಷಕರು ಖಾಸಗಿ ಶಾಲೆಯ ಕಟ್ಟಡಗಳು, ಅಲ್ಲಿನ ಸೌಲಭ್ಯಗಳನ್ನು ನೋಡಿ ತಮ್ಮ ಮಕ್ಕಳನ್ನು ಸರಕಾರಿ ಶಾಲೆಯ ಬದಲು ಖಾಸಗಿ ಶಾಲೆಗಳಿಗೆ ಸೇರಿಸಲು ಮುಂದಾಗುತ್ತಿದ್ದಾರೆ ಎಂದು ಮಹೇಶ್ ಹೇಳಿದರು.

ರಾಜ್ಯದಲ್ಲಿ ಒಟ್ಟು 48,481 ಸರಕಾರಿ ಶಾಲೆಗಳಿವೆ. ಈ ಪೈಕಿ 6 ಸಾವಿರ ಶಾಲೆಗಳು ಅನುದಾನಕ್ಕೆ ಒಳಪಟ್ಟಿವೆ. 17 ಸಾವಿರ ಶಾಲೆಗಳು ಅನುದಾನ ರಹಿತವಾಗಿ ಕಾರ್ಯನಿರ್ವಹಿಸುತ್ತಿವೆ. ರಾಜ್ಯದಲ್ಲಿ ಶೇ.60 ರಿಂದ 65ರಷ್ಟು ಶಿಕ್ಷಣ ನೀಡುತ್ತಿರುವುದು ಸರಕಾರಿ ಶಾಲೆಗಳು ಎಂದು ಅವರು ತಿಳಿಸಿದರು.

ಬಜೆಟ್‌ನಲ್ಲಿ ಶಿಕ್ಷಣ ಇಲಾಖೆಗೆ 22.36 ಸಾವಿರ ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಈ ಪೈಕಿ 21.5 ಸಾವಿರ ಕೋಟಿ ರೂ.ಶಿಕ್ಷಕರ ವೇತನಕ್ಕೆ ಖರ್ಚಾಗುತ್ತದೆ. ಆಟದ ಮೈದಾನ, ಕುಡಿಯುವ ನೀರು, ಪೀಠೋಪಕರಣ ಸೇರಿದಂತೆ ಇನ್ನಿತರ ಮೂಲಸೌಕರ್ಯಗಳಿಗೆ 4.2 ಸಾವಿರ ಕೋಟಿ ರೂ.ಗಳ ಅಗತ್ಯವಿದೆ. ಆದರೆ, ಕಳೆದ ಸಾಲಿನಲ್ಲಿ ಇದಕ್ಕಾಗಿ ನಮಗೆ ಸಿಕ್ಕಿರುವುದು 150 ಕೋಟಿ ರೂ.ಗಳು ಮಾತ್ರ. ಕುಮಾರಸ್ವಾಮಿ ಮುಖ್ಯಮಂತ್ರಿಯಾದ ಬಳಿಕ ಇದಕ್ಕಾಗಿ 450 ಕೋಟಿ ರೂ.ಗಳು ಲಭ್ಯವಾಗುತ್ತಿದೆ ಎಂದು ಮಹೇಶ್ ಹೇಳಿದರು.

ಕಾರ್ಯಕ್ರಮದಲ್ಲಿ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ ವೈ.ಮರಿಸ್ವಾಮಿ, ನಿಕಟಪೂರ್ವ ಅಧ್ಯಕ್ಷೆ ಡಾ.ಕೃಪಾ ಆಳ್ವ, ಸದಸ್ಯೆ ಅಪರ್ಣಾ ಎಂ.ಕೊಳ್ಳ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News