ಕೊಡಗಿನ ಪ್ರತಿಯೊಂದು ನಿರಾಶ್ರಿತ ಕುಟುಂಬಕ್ಕೂ ವಸತಿ ಸೌಲಭ್ಯ: ಸಚಿವ ಯು.ಟಿ.ಖಾದರ್ ಭರವಸೆ

Update: 2018-09-30 18:30 GMT

ಮಡಿಕೇರಿ, ಸೆ.30 : ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಮನೆ ಕಳೆದುಕೊಂಡು ಸಂತ್ರಸ್ತರಾದ ಪ್ರತಿ ಕುಟುಂಬಕ್ಕೆ ರಾಜ್ಯ ಸರ್ಕಾರ ಮನೆ ನಿರ್ಮಿಸಿ ಕೊಡಲಿದೆ ಎಂದು ರಾಜ್ಯ ವಸತಿ ಸಚಿವ ಯು.ಟಿ.ಖಾದರ್ ಸ್ಪಷ್ಟ ಪಡಿಸಿದ್ದಾರೆ.

ಪ್ರಕೃತಿ ವಿಕೋಪದಿಂದ ತತ್ತರಿಸಿದ ಜೋಡುಪಾಲ, ಅರೆಕಲ್ಲು, ಮೊಣ್ಣಂಗೇರಿ ಗ್ರಾಮಗಳಿಗೆ ಭೇಟಿ ನೀಡಿದ ವಸತಿ ಸಚಿವ ಯು.ಟಿ.ಖಾದರ್, ಸ್ಥಳೀಯ ನಿವಾಸಿಗಳು ಮತ್ತು ಪ್ರಕೃತಿ ವಿಕೋಪದಿಂದ ಸಂತ್ರಸ್ತರ ಅಹವಾಲು ಆಲಿಸಿದರು. ಸರಕಾರದ ಪರಿಹಾರ ಕಾರ್ಯವನ್ನು ಶೀಘ್ರವೇ ಅನುಷ್ಠಾನಕ್ಕೆ ತರುವಂತೆ ಆಗ್ರಹಿಸಿದ ಸಂತ್ರಸ್ಥರು, ಭೂಕುಸಿತ ಪ್ರವಾಹದಿಂದ ಗ್ರಾಮಗಳಲ್ಲಿ ಉಂಟಾದ ಸಮಸ್ಯೆಗಳನ್ನು ಸಚಿವರ ಗಮನಕ್ಕೆ ತಂದರು. ಮನೆ ಕಳೆದುಕೊಂಡವರಿಗೆ ಮನೆ ನಿರ್ಮಿಸಿ ಕೊಡಬೇಕು, ವಾಸದ ಮನೆಗಳಿಗೆ ಹಾನಿ  ಸಂಭವಿಸಿದ್ದು ಮನೆಗಳ ದುರಸ್ಥಿಗೂ ಆರ್ಥಿಕ ಸಹಾಯ ಒದಗಿಸಬೇಕು. ನಿರಾಶ್ರಿತರ ಕೇಂದ್ರದಲ್ಲಿ ಉಳಿದುಕೊಂಡು ಗುರುತಿನ ಚೀಟಿ  ಹೊಂದಿರುವ ಕುಟುಂಬಗಳಿಗೂ ಬದುಕು ಕಟ್ಟಿಕೊಳ್ಳಲು ತಲಾ 50 ಸಾವಿರ ರೂ. ಅನುದಾನ ನೀಡುವಂತೆ ಗ್ರಾಮಸ್ಥರು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಯು.ಟಿ.ಖಾದರ್, ಪ್ರಕೃತಿ ವಕೋಪಕ್ಕೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಪ್ರತ್ಯೇಕ ಮಾನದಂಡಗಳಿವೆ. ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪವನ್ನು ರಾಜ್ಯ ವಿಪತ್ತು ಎಂದು ಪರಿಗಣಿಸಿರುವ ಹಿನ್ನಲೆಯಲ್ಲಿ ರಾಜ್ಯ ಸರಕಾರವೇ ಮಾನವೀಯತೆ ನೆಲೆಯಲ್ಲಿ ಸಂತ್ರಸ್ಥರಿಗೆ ನೆರವು ನೀಡಲಿದೆ. ಸಂಪೂರ್ಣ ನಾಶ ಮತ್ತು ಬಹುತೇಕ ನಾಶವಾದ ಮನೆಗಳಿಗೂ ಒಂದೇ ನಿಯಮದ ಅಡಿಯಲ್ಲಿ ಪರಿಹಾರ ವಿತರಿಸಲು ಕ್ರಮಕೈಗೊಳ್ಳಲಾಗುತ್ತಿದೆ. ಮಳೆಹಾನಿಯಿಂದ ಸಂತ್ರಸ್ಥರಾದವರಿಗೆ ಬದುಕು ಕಟ್ಟಿಕೊಳ್ಳಲು ಹಂತ-ಹಂತವಾಗಿ ನೆರವು ನೀಡಲಾಗುತ್ತದೆ ಎಂದು ಗ್ರಾಮಸ್ಥರಿಗೆ ವಿವರಿಸಿದರು.

ಬಳಿಕ ಭೂಕುಸಿತ  ಮತ್ತು ಪ್ರವಾಹ ಪರಿಸ್ಥಿತಿಯಿಂದ ಹಾನಿಗೀಡಾದ ಸ್ಥಳಗಳು ಮತ್ತು ರಸ್ತೆಗಳ ಸ್ಥಿತಿಗತಿಗಳನ್ನು ಸಚಿವ ಯು.ಟಿ.ಖಾದರ್ ವೀಕ್ಷಿಸಿದರು. ಮಡಿಕೇರಿ –ಜೋಡುಪಾಲ ರಸ್ತೆ ದುರಸ್ಥಿಯನ್ನು ಪರಿಶೀಲಿಸಿದ ಸಚಿವ ಖಾದರ್ ಸ್ಥಳದಲ್ಲಿದ್ದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮತ್ತು ಗುತ್ತಿಗೆದಾರದಿಂದ ಮಾಹಿತಿ ಪಡೆದುಕೊಂಡರು. ಮಾತ್ರವಲ್ಲದೆ ತಿರುವುಗಳು, ದುರಸ್ಥಿಪಡಿಸಿದ ರಸ್ತೆಗಳ ಎರಡೂ ಬದಿಯಲ್ಲಿ ವೇಗದ ಮಿತಿ, ಅಪಾಯ ಸ್ಥಳಗಳ ಸೂಚನಾ ಫಲಕ ಅಳವಡಿಸಬೇಕೆಂದು ಸೂಚಿಸಿದರು.

ಬಳಿಕ ‘ಮೈಸೂರು ಮಿತ್ರ’ನೊಂದಿಗೆ ಮಾತನಾಡಿದ ವಸತಿ ಸಚಿವ ಯು.ಟಿ.ಖಾದರ್, ಪ್ರಕೃತಿ ವಿಕೋಪದಿಂದ ಮನೆ ಕಳೆದುಕೊಂಡ ಕುಟುಂಬಗಳಿಗೆ ಮನೆ ನಿರ್ಮಿಸಿಕೊಡುವ ಕಾರ್ಯಕ್ಕೆ ರಾಜ್ಯ ಸರ್ಕಾರವೇ ಮುಂದಾಗಿದೆ. ಈಗಾಗಲೇ ಮಾದರಿ ಮನೆಗಳನ್ನು ನಿರ್ಮಿಸಲಾಗುತ್ತಿದ್ದು ಕೊಡಗು ಜಿಲ್ಲಾಡಳಿತ ಮತ್ತು  ಸಂತ್ರಸ್ಥರ ಅಭಿಪ್ರಾಯ ಪಡೆದು ಅಂತಿವಾಗಿ ಅಂತಹ ಮನೆಗಳನ್ನು ನಿರ್ಮಿಸಿ ಕೊಡಲಾಗುವುದೆಂದು ತಿಳಿಸಿದರು.

ಜಿಲ್ಲಾಡಳಿತ ಮನೆ ಕಳೆದುಕೊಂಡ ಅರ್ಹನ್ನು ಗುರುತಿಸಿದೆ. ಅಂತಹ  ಕುಟುಂಬಗಳಿಗೆ ಮಾತ್ರ ಮನೆ ನೀಡಲಾಗುತ್ತದೆ. ಆಶ್ರಯ ಮನೆ ಯೋಜನೆಯನ್ನು ದುರುಪಯೋಗ ಮಾಡಲು ಹವಣಿಸಿದರೆ, ಅಂತಹ ವ್ಯಕ್ತಿಗಳ ವಿರುದ್ದ ಜಿಲ್ಲಾಡಳಿತ ಮತ್ತು ರಾಜ್ಯ ಸರಕಾರವೇ ಸೂಕ್ತ ಕ್ರಮಕೈಗೊಳ್ಳುತ್ತದೆ. ಇದರಲ್ಲಿ ಯಾವುದೇ ಸಂಶಯ ಬೇಡ ಎಂದು ಸ್ಪಷ್ಟಪಡಿಸಿದರು. ವಾಸಕ್ಕೆ ಯೋಗ್ಯವಿರುವ ಮತ್ತು ಯೋಗ್ಯವಲ್ಲದ ಪ್ರದೇಶಗಳನ್ನು ಗುರುತಿಸುವ ಕಾರ್ಯವೂ ಕೊಡಗು  ಜಿಲ್ಲಾಡಳಿತದಿಂದ ನಡೆಯುತ್ತಿದೆ. ಅಪಾಯಕಾರಿ ಪ್ರದೇಶಗಳ ನಿವಾಸಿಗಳಿಗೂ ಬೇರೆ  ಕಡೆ ಮನೆ ನಿರ್ಮಿಸಿಕೊಡುವ ಕಾರ್ಯವೂ  ಆಗಲಿದೆ ಎಂದು ಸಚಿವ ಯು.ಟಿ.ಖಾದರ್ ತಿಳಿಸಿದರು. 

ಮಡಿಕೇರಿ - ಮಂಗಳೂರು ಹೆದ್ದಾರಿಯನ್ನು ಎಲ್ಲಾ ವಾಹನಗಳ ಸಂಚಾರಕ್ಕೆ ಮುಕ್ತಗೊಳಿಸುವ ಕುರಿತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಿದ ಅಧಿಕಾರಿಗಳು  ಮತ್ತು ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಅವರೊಂದಿಗೆ ಚರ್ಚಸಲಾಗಿದೆ. ಶಿರಾಡಿಘಾಟ್ ಮತ್ತು ಚಾರ್ಮುಡಿಘಾಟ್ ರಸ್ತೆಯಲ್ಲೂ ಅಗತ್ಯ ಮುಂಜಾಗ್ರತ ಕ್ರಮಕೈಗೊಂಡು ಪ್ರಯಾಣಿಕರ ವಾಹನ ಸಂಚಾರಕ್ಕೆ ಅನುವು ಮಾಡುವ ಕುರಿತು ಹಾಸನ ಮತ್ತು ಮಂಗಳೂರು ಜಿಲ್ಲಾಧಿಕಾರಿಗಳೊಂದಿಗೂ ಚರ್ಚಸಲಾಗಿದೆ ಎಂದು ವಸತಿ ಸಚಿವ ಯು.ಟಿಖಾದರ್ ತಿಳಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News