ಇಂಡೋನೇಶ್ಯ ಭೂ ಕಂಪನದ ತೀವ್ರತೆ: ಗಾಳಿಬೀಡು ಸಿಸ್ಮೋಗ್ರಾಫ್ ಮೀಟರ್ ನಲ್ಲಿ ದಾಖಲು

Update: 2018-09-30 18:34 GMT

ಮಡಿಕೇರಿ, ಸೆ.30: ಗಾಳಿಬೀಡುವಿನ ನವೋದಯ ವಿದ್ಯಾಲಯದಲ್ಲಿ ಅಳವಡಿಸಿರುವ ‘ಸಿಸ್ಮೋಗ್ರಾಫ್’ ಮೀಟರ್ ಇಂಡೋನೇಷಿಯದಲ್ಲಿ ಸಂಭವಿಸಿದ ಭೂ ಕಂಪವನ್ನು ದಾಖಲಿಸಿದೆ. ಇಂಡೋನೇಷಿಯಾದ ಸುಲಾವೆಸಿ ದ್ವೀಪದಲ್ಲಿ ಸೆ.28ರಂದು 7.5 ರಿಕ್ಟರ್ ಮಾಪನಾಂಕದ ಭೂಕಂಪ ಸಂಭವಿಸಿದೆ ಎಂದು ಹೈದರಾಬಾದ್‍ನಲ್ಲಿರುವ ನ್ಯಾಷನಲ್ ಜಿಯೋ ಫಿಸಿಕ್ ರಿಸರ್ಚ್ ಇನ್ಸ್‍ಸ್ಟಿಟ್ಯೂಟ್‍ಗೆ ಗಾಳಿಬೀಡುವಿನಲ್ಲಿರುವ ಸಿಸ್ಮೋಗ್ರಾಫ್ ಮೀಟರ್ ಮಾಹಿತಿ ರವಾನಿಸಿದೆ. 

ಇಂಡೋನೇಷಿಯಾದ ಸೆಂಟ್ರಲ್ ಸುವಾವೆಸಿ ಪಟ್ಟಣದಿಂದ ಈಶಾನ್ಯ ಭಾಗದ 56 ಕಿ.ಮಿ. ದೂರದಲ್ಲಿ, ಭೂ ಗರ್ಭದ 10 ಕಿ.ಮಿ. ಆಳದಲ್ಲಿ ಭೂ ಕಂಪನದ ಕೇಂದ್ರ ಬಿಂದುವನ್ನು ನವೋದಯ ಶಾಲೆಯಲ್ಲಿರುವ ಸಿಸ್ಮೋಗ್ರಾಫ್ ಮೀಟರ್ ಪತ್ತೆ ಹಚ್ಚಿದ್ದು, ಅದರ ದತ್ತಾಂಶಗಳನ್ನು ಹೈದರಾಬಾದ್‍ನ ಎನ್‍ಜಿಆರ್‍ಐ ರಿಸೀವ್ ಸೆಂಟರ್ ಸ್ವೀಕರಿಸಿಕೊಂಡಿದೆ. ಈ ಕುರಿತು ಹಿರಿಯ ಭೂ ವಿಜ್ಞಾನಿ ಡಾ.ರಾಘವನ್ ಖಚಿತಪಡಿಸಿದ್ದಾರೆ.

ಕೊಡಗು ಜಿಲ್ಲೆಯ ಕೆಲ ಭಾಗಗಳಲ್ಲಿ ಜುಲೈ 9ರಂದು 3.4 ರಿಕ್ಟರ್ ಮಾಪನಾಂಕದ ಲಘು ಭೂ ಕಂಪ ಸಂಭವಿಸಿತ್ತು. ಆ ಬಳಿಕ ಆಗಸ್ಟ್ 16 ರಂದು ಜಿಲ್ಲೆಯ ವಿವಿಧ ಕಡೆಗಳಲ್ಲಿ ಭಾರಿ ಭೂ ಕುಸಿತ ಮತ್ತು ಪ್ರವಾಹ ಪರಿಸ್ಥಿತಿ ತಲೆದೋರಿತ್ತು. ಈ ಸಂದರ್ಭ ಬೆಟ್ಟ ಶ್ರೇಣಿಗಳು ಕುಸಿಯಲು ಭೂ ಕಂಪವೇ ಕಾರಣ ಎಂದು ಅಭಿಪ್ರಾಯಗಳು ವ್ಯಕ್ತಗೊಂಡಿದ್ದವು. ಹಿಂದೆಂದೂ ಕಂಡು ಕೇಳರಿಯದ ಪ್ರಕೃತಿ ವಿಕೋಪಕ್ಕೆ ಸಾಕ್ಷಿಯಾದ ಕೊಡಗು ಜಿಲ್ಲೆಯ ಘಟನೆಗಳನ್ನು ಅಧ್ಯಯನ ನಡೆಸಲು ಹೈದರಾಬಾದ್‍ನಿಂದ ಎನ್‍ಜಿಆರ್‍ಐನ ಹಿರಿಯ ಭೂವಿಜ್ಞಾನಿಗಳು ಆಗಮಿಸಿದ್ದರು.

ಹಿರಿಯ ಭೂ ವಿಜ್ಞಾನಿ ಡಾ.ರಾಘವನ್ ನೇತೃತ್ವದ 3 ಮಂದಿ ವಿಜ್ಞಾನಿಗಳು ಭೂ ಕುಸಿದ ಪ್ರದೇಶಗಳಿಗೆ ತೆರಳಿ ಪರಿಶೀಲನೆ ನಡೆಸಿದ್ದರು. ಆ ಬಳಿಕ ಭೂಕುಸಿತಕ್ಕೆ ಲಘು ಭೂಕಂಪನ ಕಾರಣವಲ್ಲ ಎಂದು ಸ್ಪಷ್ಟಪಡಿಸಿದ್ದರು. ಮಾತ್ರವಲ್ಲದೆ, ಭೂ ಕಂಪನದ ಹೆಚ್ಚಿನ ಅಧ್ಯಯನಕ್ಕಾಗಿ ಅಮೇರಿಕಾದಿಂದ ಖರೀದಿಸಿ ತರಲಾದ ಅತ್ಯಾಧುನಿಕ ಸಿಸ್ಮೋಗ್ರಾಫ್ ಮೀಟರ್‍ಅನ್ನು ಗಾಳಿಬೀಡು ನವೋದಯ ಶಾಲೆಯಲ್ಲಿ ಅಳವಡಿಸಲಾಗಿತ್ತು. ಪ್ರಪಂಚದ ಯಾವುದೇ ಭಾಗದಲ್ಲಿ ರಿಕ್ಟರ್ ಮಾಪನದ 5 ಮತ್ತು ಭಾರತ ದೇಶದ ಯಾವುದೇ ಭಾಗದಲ್ಲಿ 3 ರಿಕ್ಟರ್ ಪ್ರಮಾಣದ ಭೂ ಗರ್ಭ ಕಂಪನ ಸಂಭವಿಸಿದರೂ, ಈ ಸಿಸ್ಮೋಗ್ರಾಫ್ ಮೀಟರ್ ಅದರ ದತ್ತಾಂಶಗಳನ್ನು ಸಂಗ್ರಹಿಸಿ ಕ್ಷಣಾರ್ಧದಲ್ಲೇ ಹೈದರಾಬಾದ್‍ನಲ್ಲಿರುವ ರಿಸೀವ್ ಸೆಂಟರ್ ಗೆ ಮಾಹಿತಿ ರವಾನಿಸುತ್ತದೆ. 
ಇಂಡೋನೇಷಿಯಾದಲ್ಲಿ ಸಂಭವಿಸಿದ ಭೂ ಕಂಪದ ತರಂಗಾಂತರಗಳು ಗಾಳಿಬೀಡುವಿನಲ್ಲಿ ಅಳವಡಿಸಿರುವ ಸಿಸ್ಮೋಗ್ರಾಫ್ ಮೀಟರ್ ನಲ್ಲೂ ದಾಖಲಾಗಿದೆ. ಪ್ರಪಂಚದ ಯಾವುದೆ ಮೂಲೆಯಲ್ಲೂ 5 ರಿಕ್ಟರ್ ಪ್ರಮಾಣದ ಭೂಮಿ ಕಂಪಿಸಿದರೆ ಅದರ ಮಾಹಿತಿ ಎನ್‍ಜಿಆರ್‍ಐ ರಿಸೀವ್ ಸೆಂಟರ್ ಗೆ ರವಾನೆಯಾಗುತ್ತದೆ ಎಂದು ಡಾ.ರಾಘವನ್ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News