ಸಾರಿಗೆ ಸಂಸ್ಥೆಯ ನಷ್ಟ ಕಡಿಮೆ ಮಾಡಿ ಆದಾಯ ಹೆಚ್ಚಿಸಲು ಕ್ರಮ: ಸಚಿವ ಡಿ.ಸಿ.ತಮ್ಮಣ್ಣ

Update: 2018-09-30 18:41 GMT

ಸೊರಬ,ಸೆ.30: ಸಾರಿಗೆ ಸಂಸ್ಥೆಯಲ್ಲಿನ ನಷ್ಟವನ್ನು ಕಡಿಮೆ ಮಾಡಿ ಆದಾಯ ಹೆಚ್ಚಿಸುವಲ್ಲಿ ಎಲ್ಲಾ ರೀತಿಯಲ್ಲಿಯೂ ಪ್ರಯತ್ನಿಸಲಾಗುತ್ತಿದೆ ಎಂದು ಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸಿ.ತಮ್ಮಣ್ಣ ತಿಳಿಸಿದರು.

ರವಿವಾರ ಪಟ್ಟದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನವೀಕೃತ ಬಸ್ ನಿಲ್ದಾಣ ಹಾಗು ಬಸ್ ನಿಲ್ದಾಣದ ಮೊದಲನೆ ಅಂತಸ್ತಿನಲ್ಲಿ ಸರ್ಕಾರಿ ಕಚೇರಿಗಳ ಕಾರ್ಯಾರಂಭದ ಸಮಾರಂಭ ಮತ್ತು ಹೊಸ ಮಾರ್ಗಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ನಾನು ಸಾರಿಗೆ ಮಂತ್ರಿಯಾಗಿ ಅಧಿಕಾರ ಪಡೆದು ನಾಲ್ಕು ತಿಂಗಳು ಕಳೆದಿವೆ. ಸಂಸ್ಥೆ 600 ಕೊಟಿ ನಷ್ಟದಲ್ಲಿತ್ತು. 1 ಲಕ್ಷದ 20 ಸಾವಿರ ನೌಕರರಿದ್ದಾರೆ. ಎಲ್ಲಾ ನೌಕರರು ನಮ್ಮ ರಾಜ್ಯದವರೇ ಆಗಿದ್ದು, ಇದರಲ್ಲಿ ಗ್ರಾಮೀಣ ಭಾಗದ ಹಲವರು ಸೇವೆ ಸಲ್ಲಿಸುತ್ತಿದ್ದಾರೆ. 6 ಲಕ್ಷ ಜನರ ಭವಿಷ್ಯ ಸಾರಿಗೆ ಸಂಸ್ಥೆಯ ಮೇಲಿದೆ. ಇಲಾಖೆಗೆ ಸೇರಿದ ಭೂಮಿ ಹಾಗು ಸೊತ್ತಿನ ಮಾಹಿತಿಗಳೆಲ್ಲವನ್ನೂ ಸರ್ವೆ ನಡೆಸಿ, ಗಣಕೀಕರಣ ಮಾಡಲಾಗುತ್ತಿದೆ. ಸಂಸ್ಥೆಗೆ ಸಂಬಂಧ ಪಟ್ಟ ಮಾಹಿತಿಗಳನ್ನು ಸಾರ್ವಜನಿಕರು ಕ್ಷಣಾರ್ಧದಲ್ಲಿ ಪಡೆಯಬಹುದಾಗಿದೆ. ರಾಜ್ಯದ ಅನೇಕ ತಾಲೂಕುಗಳಲ್ಲಿ ಸರ್ಕಾರಿ ಕಚೇರಿಗಳು ಖಾಸಗಿ ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿರುವುದರಿಂದ ಸರ್ಕಾರದ ಕೊಟ್ಯಾಂತರ ರೂಪಾಯಿಗಳು ವ್ಯಯವಾಗುತ್ತಿದ್ದು, ಇದನ್ನು ತಪ್ಪಿಸುವ ಉದ್ದೇಶದಿಂದ ಸಾರಿಗೆ ಬಸ್ ನಿಲ್ದಾಣಗಳ ಕಟ್ಟಡಗಳಲ್ಲಿ ಸರ್ಕಾರದ ವಿವಿಧ ಇಲಾಖೆಗಳ ಕಚೇರಿಗಳನ್ನು ಪ್ರಾರಂಭಿಸಲು ಚಿಂತಿಸಲಾಗಿದೆ. ಕಚೇರಿಗಳ ಸಂಕೀರ್ಣ ಪ್ರಾರಂಭದಿಂದಾಗಿ ಖಾಸಗಿಯವರಿಗೆ ಸರ್ಕಾರದಿಂದ ಭರಿಸುತ್ತಿದ್ದ ಬಾಡಿಗೆ ಹಣ ಸಾರಿಗೆ ಇಲಾಖೆಗೆ ಸೇರುವುದರಿಂದ ಆದಾಯ ಹೆಚ್ಚಿಸಿಕೊಳ್ಳಲು ಅನುಕೂಲವಾಗುತ್ತದೆ ಎಂದರು. 

ಗ್ರಾಮೀಣ ಮತ್ತು ನಗರ ಸಾರಿಗೆಗಳಲ್ಲಿ ನಷ್ಟ ಕಾಣುತ್ತಿದ್ದೇವೆ. ರೈತರಿಗೆ ಸಮರ್ಪಕ ಸಾರಿಗೆ ಸೌಲಭ್ಯ ಒದಗಿಸಲು ಬದ್ಧನಾಗಿದ್ದೇನೆ. ಸಾರಿಗೆ ಸಂಸ್ಥೆಯನ್ನು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ. ಅನೇಕ ಒತ್ತಡಗಳ ಮಧ್ಯೆ ಕಾರ್ಯ ನಿರ್ವಹಿಸುವ ಡ್ರೈವರ್ ಗಳು ಮತ್ತು ಕಂಡಕ್ಟರ್ ಗಳನ್ನು ಅನಾವಶ್ಯಕ ಕಿರುಕುಳ ನೀಡುವ ಕೆಲಸಕ್ಕೆ ಮೇಲಧಿಕಾರಿಗಳು ಕೈಹಾಕಬಾರದು. ಸಿಬ್ಬಂದಿಗಳ ಬೆಂಬಲಕ್ಕೆ ಸದಾ ಬದ್ಧನಾಗಿದ್ದು, ಪ್ರತಿಷ್ಠಿತ ಕಂಪನಿಗಳ ಮೂಲಕ ಆರೋಗ್ಯವಿಮೆ ಮಾಡಿಸಲು ಚಿಂತಿಸಲಾಗಿದ್ದು, ಇದರಿಂದ ಸಿಬ್ಬಂದಿಯ ಕುಟುಂಬದವರಿಗೆ ರೂ 5ಲಕ್ಷದವರೆಗೂ ವೈದ್ಯಕೀಯ ಸೌಲಭ್ಯ ದೊರೆಯಲಿದೆ ಎಂದರು. 

ಶಾಸಕ ಕುಮಾರ್‍ಬಂಗಾರಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಪಟ್ಟಣಕ್ಕೆ ಸುಸಜ್ಜಿತ ಬಸ್ ನಿಲ್ದಾಣದ ಅನೇಕ ವರ್ಷಗಳಿಂದ ತಾಲೂಕಿನ ಹಿರಿಯರ ಬೇಡಿಕೆಯಾಗಿತ್ತು. ಇಂದು ಪಟ್ಟಣದಲ್ಲಿ ನವೀಕರಣಗೊಂಡ ಸುಸಜ್ಜಿತ ಬಸ್‍ನಿಲ್ದಾಣ ಸಾರ್ವಜನಿಕರ ಸೇವೆಗಾಗಿ ಸಮರ್ಪಿಸುತ್ತಿರುವುದು ಅತ್ಯಂತ ಸಂತೋಷದಾಯಕವಾಗಿದೆ. ಸಾರಿಗೆ ಸಂಸ್ಥೆಯ ಸೇವೆಯನ್ನು ಸಮರ್ಪಕವಾಗಿ ಬಳಸಿಕೊಳ್ಳುವಲ್ಲಿ ಎಲ್ಲರೂ ಮುಂದಾಗಬೇಕು. ಬಸ್‍ಗಳು ಸಾರ್ವಜನಿಕ ಸೊತ್ತಾಗಿದ್ದು, ಅವುಗಳಿಗೆ ಹಾನಿಯುಂಟಾಗದಂತೆ ಹಾಗು ಬಸ್‍ ನಿಲ್ದಾಣ ಸ್ವಚ್ಚವಾಗಿಟ್ಟುಕೊಳ್ಳುವಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

ತಾಪಂ ಅಧ್ಕಕ್ಷೆ ನಯನ ಶ್ರೀಪಾದ ಹೆಗಡೆ, ಪಪಂ ಅಧ್ಯಕ್ಷೆ ಬೀಬಿ ಝುಲೇಖಾ, ಜಿಪಂ ಸದಸ್ಯ ಸತೀಶ್, ತಾಪಂ ಸದಸ್ಯ ನಾಗರಾಜ್ ಚಿಕ್ಕಸವಿ ಪಪಂ ಸದಸ್ಯರಾದ ಎಂ.ಡಿ.ಉಮೇಶ್, ಮಹೇಶ ಗೌಳಿ, ಶ್ರೀರಂಜಿನಿ, ಜಿಲ್ಲಾಧಿಕಾರಿ ಕೆ,ಎ.ದಯಾನಂದ, ಜಿಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಕೆ.ಶಿವರಾಮೇ ಗೌಡ, ಗ್ರೇಡ್-2 ತಹಶೀಲ್ದಾರ್ ರಶ್ಮಿ, ಶಿವಾರಾಜ್ ಪಟೇಲ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News