ಸೊರಬ: ಬಗರ್ ಹುಕುಂ ಮಂಜೂರಾತಿ ಪಡೆದ ರೈತರಿಗೆ ನೊಟೀಸ್; ಜೆಡಿಎಸ್‍ನಿಂದ ಧರಣಿ

Update: 2018-10-01 12:03 GMT

ಸೊರಬ,ಅ.1: ಬಗರ್ ಹುಕುಂ ಮಂಜೂರಾತಿ ಪಡೆದ ರೈತರಿಗೆ ಹಕ್ಕುಪತ್ರ ವಜಾ ಮಾಡಲು ನೀಡಿರುವ ನೊಟೀಸ್‍ಅನ್ನು ಹಿಂಪಡೆಯುವಂತೆ ಒತ್ತಾಯಿಸಿ ತಾಲೂಕು ಜೆಡಿಎಸ್‍ನಿಂದ ಪಟ್ಟಣದಲ್ಲಿ ಸೊಮವಾರ ಸಾವಿರಾರು ಸಂಖ್ಯೆಯಲ್ಲಿ ರೈತರು ಶ್ರೀರಂಗನಾಥ ಸ್ವಾಮಿ ದೇವಾಲಯದಿಂದ ಮುಖ್ಯರಸ್ತೆಯ ಮಾರ್ಗವಾಗಿ ತಾಲೂಕು ಕಚೇರಿಗೆ ತೆರಳಿ ಧರಣಿ ನಡೆಸಿ ತಹಶೀಲ್ದಾರ್ ಕೈಕಶನ್‍ರವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. 

ತಾಲೂಕಿನಲ್ಲಿ 40-50 ವರ್ಷಗಳಿಂದ ಬಡರೈತರು ತಮ್ಮ ಜೀವನೋಪಾಯಕ್ಕಾಗಿ ಸರ್ಕಾರದ ವಿವಿಧ ಜಮೀನುಗಳಲ್ಲಿ ಬೇಸಾಯ ಮಾಡಿಕೊಂಡು ಬದುಕುತ್ತಿದ್ದಾರೆ. ಸರ್ಕಾರ ಬಗರ್ ಹುಕುಂ ರೈತರಿಗೆ ಕಾನೂನು ರೀತಿಯ ಅನುಕೂಲ ಕಲ್ಪಿಸಿದ್ದರಿಂದ ಬಗರ್ ಹುಕುಂ ಭೂಮಿಯಲ್ಲಿ ಬೇಸಾಯ ಮಾಡುತ್ತಿದ್ದ ರೈತರು ಭೂಮಿಗೆ ಸ್ವಂತ ಒಡೆತನ ಪಡೆಯಲು ಗೋಮಾಳ, ದನಗಳ ಮುಫತ್ತು, ಖರಾಬು ಕಾನು, ಸೊಪ್ಪಿನಬೆಟ್ಟ, ಸರ್ಕಾರಿ ಪಡ ಇತ್ಯಾದಿ ಕಂದಾಯ ಜಮೀನುಗಳ ಮಂಜೂರಾತಿಗಾಗಿ ಫಾರಂ 50, 53 ಅಡಿಯಲ್ಲಿ ಅರ್ಜಿ ಸಲ್ಲಿಸಿರುತ್ತಾರೆ. ಅರ್ಜಿ ಸಲ್ಲಿಸಿದ ಬಗರ್ ಹುಕುಂ ರೈತರಿಗೆ ನಿಯಮಾನುಸಾರ ಸರ್ಕಾರ ನೇಮಿಸಿದ್ದ ಈ ಹಿಂದಿನ ಬಗರ್ ಹುಕುಂ ಸಮಿತಿಯು ಅರ್ಜಿಗಳನ್ನು ಪರಿಶೀಲಿಸಿ ಸೂಕ್ತ ದಾಖಲಾತಿಗಳನ್ನು ಪಡೆದು ಅರ್ಹ ರೈತರಿಗೆ ಭೂ ಒಡೆತನದ ಹಕ್ಕುಪತ್ರ ನೀಡಿರುತ್ತಾರೆ.

ಹಕ್ಕುಪತ್ರಗಳ ಆಧಾರದ ಮೇಲೆ ಸಾವಿರಾರು ರೈತರಿಗೆ ಪಹಣಿ ಮತ್ತು ಖಾತೆ ನಮೂದಾಗಿದ್ದು, ಜಮೀನಿನ ಅಭಿವೃದ್ಧಿಗಾಗಿ ಹಲವು ಬ್ಯಾಂಕ್‍ಗಳಿಂದ ಸಾಲ ಸಹ ಪಡೆದಿದ್ದಾರೆ. ನಿಯಮಾನುಸಾರ ಭೂ ಒಡೆತನದ ಹಕ್ಕುಪತ್ರ ಪಡೆದಿದ್ದ ಬಡ ರೈತರಿಗೆ ಕೆಲ ಪಟ್ಟಭದ್ರ ಹಿತಾಸಕ್ತಿಗಳ ಚಿತಾವಣೆಯಿಂದ ಸಾಗರ ಉಪವಿಭಾಗಾಧಿಕಾರಿಗಳು ಹಕ್ಕುಪತ್ರ ರದ್ದತಿಗೆ ತಿಳುವಳಿಕೆ ನೀಡಿರುವುದರಿಂದ ರೈತರು ಕಂಗಾಲಾಗುವಂತಾಗಿದೆ. ನೀಡಿರುವ ಹಕ್ಕುಪತ್ರ ರದ್ದತಿ ತಿಳುವಳಿಕೆ ಪತ್ರವನ್ನು ಹಿಂಪಡೆದು ರೈತರು ಅನಾಹುತ ಮಾಡಿಕೊಳ್ಳುವುದನ್ನು ತಪ್ಪಿಸಿ ನೆಮ್ಮದಿಯ ಜೀವನ ಮಾಡಲು ಸಹಕರಿಸುವಂತೆ ತಮ್ಮಲ್ಲಿ ಕೋರುತ್ತೇವೆ ಎಂದು ಮನವಿ ಮಾಡಿದ್ದಾರೆ.   

ಹಲವು ವರ್ಷಗಳಿಂದ ಅರಣ್ಯ ಭೂಮಿ ಸಾಗುವಳಿ ಮಾಡಿ ಬದುಕು ಸಾಗಿಸುತ್ತಿರುವ ರೈತರಿಗೆ ಅರಣ್ಯ ಅಕ್ರಮ ಒತ್ತುವರಿ ಕಾಯ್ದೆಯಡಿ ಅರಣ್ಯ ಇಲಾಖೆಯವರು ಒತ್ತುವರಿಗೆ ಸಂಬಂಧಿಸಿದಂತೆ ವರದಿಯನ್ನು ರಾಜ್ಯ ಉಚ್ಛ ನ್ಯಾಯಾಲಯಕ್ಕೆ ಸಲ್ಲಿಸಿದ ಪರಿಣಾಮ ವಿಶೇಷ ಅರಣ್ಯ ಟ್ರಿಬ್ಯೂನಲ್ ನ್ಯಾಯಾಲಯದಿಂದ ಸೊರಬ ತಾಲೂಕು ಸೇರಿದಂತೆ ಜಿಲ್ಲೆಯಾದ್ಯಂತ ಸಾವಿರಾರು ರೈತರಿಗೆ ಕ್ರಿಮಿನಲ್ ಪ್ರಕರಣಗಳನ್ನು ನೋಂದಾಯಿಸಿ ನೋಟೀಸ್ ನೀಡಿದ್ದು, ಇದರಿಂದಾಗಿ ಹಳ್ಳಿಯ ಬಡ ರೈತರು ಬೆಂಗಳೂರಿಗೆ ತೆರಳಿ ಕನಿಷ್ಠ 25-30 ಸಾವಿರ ರೂಪಾಯಿಗಳನ್ನು ವ್ಯಯಿಸಿ ಸೂಕ್ತ ಅರ್ಜಿ ಸಲ್ಲಿಸಿ ಜಾಮೀನು ಪಡೆಯಬೇಕಾದ ಪರಿಸ್ಥಿತಿ ಬಂದೊದಗಿದೆ. ಜಾಮೀನು ಪಡೆಯದಿದ್ದಲ್ಲಿ ರೈತರನ್ನು ಬಂಧಿಸಿ ಜೈಲಿಗಟ್ಟುವ ಸಂಭವವಿದೆ. ರೈತರ ಪರವಾಗಿ ಅನೇಕ ಕಾಯ್ದೆಗಳಿದ್ದು ಆಪ್ರಕಾರ ರೈತರು ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಗಳು ವಿಲೇವಾರಿಯಾಗುವ ಮುನ್ನವೇ ರೈತರ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಿರುವುದು ಖೇದಕರ ಸಂಗತಿ. ಈಗಾಗಲೇ ಮಂಜೂರಾತಿಯಾಗಿ ಹಕ್ಕುಪತ್ರ ಪಡೆದು ಖಾತೆ ಪಹಣೆ ನಮೂದಾಗಿರುವ ರೈತರಿಗೆ ಸಾಗರ ಉಪವಿಭಾಗಾಧಿಕಾರಿಗಳು ನೀಡಿರುವ ನೋಟೀಸ್‍ನ್ನು ಹಿಂಪಡೆಯುವಂತೆ ಮತ್ತು ಯಾವುದೇ ರೈತರ ಹಕ್ಕುಪತ್ರ ಮತ್ತು ಖಾತೆ-ಪಹಣೆಯನ್ನು ರದ್ದುಪಡಿಸದಂತೆ ಹಾಗೂ ರೈತರನ್ನು ಸಾಗುವಳಿಯಿಂದ ಒಕ್ಕಲೆಬ್ಬಿಸದಂತೆ ಮನವಿ ತಿಳಿಸಿದ್ದಾರೆ.

ಪ್ರತಿಭಟನೆಯಲ್ಲಿ ಜೆಡಿಎಸ್ ಬ್ಲಾಕ್ ಅಧ್ಯಕ್ಷ ಎಚ್.ಗಣಪತಿ, ಕೆ.ಪಿ.ರುದ್ರಗೌಡ, ಜಿಪಂ ಸದಸ್ಯರಾದ ಶಿವಲಿಂಗೇಗೌಡ, ರಾಜೇಶ್ವರಿ, ತಾರಾಶಿವಾನಂದ, ತಾಪಂ ಉಪಾಧ್ಯಕ್ಷ ಸುರೇಶ್ ಹಾವಣ್ಣನವರ್, ಸದಸ್ಯರಾದ ಸುನೀಲ್ ಗೌಡ, ನಾಗರಾಜ್ ಚಂದ್ರಗುತ್ತಿ, ಎಪಿಎಂಸಿ ಅಧ್ಯಕ್ಷ ರಾಜು ಕುಪ್ಪಗಡ್ಡೆ, ಉಪಾಧ್ಯಕ್ಷ ಜಯಶೀಲ ಗೌಡ, ಪಪಂ ಉಪಾಧ್ಯಕ್ಷೆ ರತ್ನಮ್ಮ, ಸದಸ್ಯರಾದ ಮಂಚಿ ಹನುಮಂತಪ್ಪ, ಪ್ರಶಾಂತ ಮೇಸ್ತ್ರಿ, ಮೆಹಬೂಬ್‍, ನೇತ್ರಾವತಿ, ವಕ್ತಾರ ಎಂ.ಡಿ.ಶೇಖರ್, ಕಾಂಗ್ರೇಸ್ ಮುಖಂಡ ಕೆ.ಮಂಜುನಾಥ್, ಪ್ರಮುಖರಾದ ಮಾಕೊಪ್ಪ ಪಕೀರಪ್ಪ,  ಕೆ.ಅಜ್ಜಪ್ಪ, ಜಯಶೀಲಪ್ಪ, ಸಂಜೀವ್ ಲಕ್ಕವಳ್ಳಿ, ಯು.ಫಯಾಜ್ ಅಹ್ಮದ್, ಸಣ್ಣಬೈಲ್ ಪರಶುರಾಮ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News