​ಐಎಂಎಫ್ ಮುಖ್ಯ ಅರ್ಥಶಾಸ್ತ್ರಜ್ಞೆಯಾಗಿ ಗೀತಾ ಗೋಪಿನಾಥ್

Update: 2018-10-02 03:25 GMT

ಹೊಸದಿಲ್ಲಿ, ಅ. 2: ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಮುಖ್ಯ ಅರ್ಥಶಾಸ್ತ್ರಜ್ಞೆಯಾಗಿ ಡೆಲ್ಲಿ ಸ್ಕೂಲ್ ಆಫ್ ಎಕನಾಮಿಕ್ಸ್ ಮತ್ತು ಲೇಡಿ ಶ್ರೀರಾಮ ಕಾಲೇಜು ಹಳೆ ವಿದ್ಯಾರ್ಥಿನಿ ಗೀತಾ ಗೋಪಿನಾಥ್ ಅವರನ್ನು ನೇಮಕ ಮಾಡಲಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್‌ನ ಮಾಜಿ ಗವರ್ನರ್ ರಘುರಾಮ್ ರಂಜನ್ ಹಿಂದೆ ಈ ಹುದ್ದೆಯನ್ನು ಅಲಂಕರಿಸಿದ್ದರು.

ಈವರೆಗೆ ಆರ್ಥಿಕ ಸಲಹೆಗಾರರು ಮತ್ತು ಐಎಂಎಫ್ ಸಂಶೋಧನಾ ವಿಭಾಗದ ನಿರ್ದೇಶಕರೂ ಆಗಿದ್ದ ಮೌರಿಸ್ ಒಬ್ಸ್‌ಫೆಲ್ಡ್ ಅವರ ಸ್ಥಾನವನ್ನೂ ಗೀತಾ ಗೋಪಿನಾಥ್ ತುಂಬಲಿದ್ದಾರೆ.

ಅಗ್ರಗಣ್ಯ ಅರ್ಥಶಾಸ್ತ್ರಜ್ಞೆಯಾಗಿರುವ ಅವರು ಪ್ರಸ್ತುತ ಹಾರ್ವರ್ಡ್ ವಿಶ್ವವಿದ್ಯಾನಿಲಯದ ಅಂತಾರಾಷ್ಟ್ರೀಯ ಅಧ್ಯಯನ ಮತ್ತು ಅರ್ಥಶಾಸ್ತ್ರ ವಿಭಾಗದ ಪ್ರೊಫೆಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

46 ವರ್ಷ ವಯಸ್ಸಿನ ಭಾರತ ಸಂಜಾತೆಯಾಗಿರುವ ಅವರು, ಶ್ರೇಷ್ಠ ಅರ್ಥಶಾಸ್ತ್ರಜ್ಞರಾದ ರಾಜನ್ ಮತ್ತು ಕೌಶಿಕ್ ಬಸು ಅವರ ಸಾಲಿನಲ್ಲಿ ನಿಲ್ಲುತ್ತಾರೆ. ರಾಜನ್ ಅವರು ಐಎಂಎಫ್ ಮುಖ್ಯ ಅರ್ಥಶಾಸ್ತ್ರಜ್ಞರಾಗಿ ಮತ್ತು ಬಸು ವಿಶ್ವಬ್ಯಾಂಕ್ ಮುಖ್ಯ ಅರ್ಥಶಾಸ್ತ್ರಜ್ಞರಾಗಿ ಸೇವೆ ಸಲ್ಲಿಸಿದರು. ಬಸು ಡಿ-ಸ್ಕೂಲ್ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿದ್ದರು.

ಹಣಕಾಸು ಸಚಿವಾಲಯಕ್ಕೆ ಜಿ-20 ವಿಚಾರಗಳ ಪ್ರಮುಖ ವ್ಯಕ್ತಿಗಳ ಸಲಹಾ ಗುಂಪಿನ ಸದಸ್ಯರಾಗಿ ಮತ್ತು ಕೇರಳ ಮುಖ್ಯಮಂತ್ರಿಯ ಮುಖ್ಯ ಆರ್ಥಿಕ ಸಲಹೆಗಾರರಾಗಿಯೂ ಗೀತಾ ಗೋಪಿನಾಥ್ 2016ರಲ್ಲಿ ಸೇವೆ ಸಲ್ಲಿಸಿದ್ದಾರೆ.

ಅಮೆರಿಕ ಪೌರತ್ವ ಪಡೆದಿರುವ ಗೀತಾ ಗೋಪಿನಾಥ್, ಪ್ರಿನ್ಸ್‌ಟನ್ ವಿವಿಯಿಂದ 2001ರಲ್ಲಿ ಅರ್ಥಶಾಸ್ತ್ರ ವಿಷಯದಲ್ಲಿ ಪಿಎಚ್‌ಡಿ ಪದವಿ ಪಡೆದಿದ್ದರು. ವಿಶ್ವದ ಅದ್ಭುತ ಅರ್ಥಶಾಸ್ತ್ರಜ್ಞರಲ್ಲೊಬ್ಬರಾಗಿರುವ ಗೀತಾ, ಅಸಾಧಾರಣ ಶೈಕ್ಷಣಿಕ ಸಾಧನೆ, ಬೌದ್ಧಿಕ ನಾಯಕತ್ವದ ಹಿನ್ನೆಲೆ ಮತ್ತು ಅಂತಾರಾಷ್ಟ್ರೀಯ ಅನುಭವವನ್ನು ಹೊಂದಿದ್ದಾರೆ ಎಂದು ಐಎಂಎಫ್ ವ್ಯವಸ್ಥಾಪಕ ನಿರ್ದೇಶಕ ಕ್ರಿಸ್ಟಿನ್ ಲಗಾರ್ಡ್ ಬಣ್ಣಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News