ಇಂಡೋನೇಷ್ಯಾದಲ್ಲಿ ಮತ್ತೆ ಅವಳಿ ಭೂಕಂಪ

Update: 2018-10-02 03:44 GMT

ಜಕಾರ್ತ, ಅ. 2: ಇಂಡೋನೇಷ್ಯಾದ ಸುಲವೇಸಿ ದ್ವೀಪದಲ್ಲಿ 800ಕ್ಕೂ ಹೆಚ್ಚು ಮಂದಿಯನ್ನು ಬಲಿ ಪಡೆದ ಭೀಕರ ಭೂಕಂಪ ಹಾಗೂ ಸುನಾಮಿ ಪರಿಹಾರ ಕಾರ್ಯಾಚರಣೆ ನಡೆದಿರುವ ಮಧ್ಯೆಯೇ ಮಂಗಳವಾರ ಮುಂಜಾನೆ ಸುಂಬಾ ದ್ವೀಪದಲ್ಲಿ ಮತ್ತೆರಡು ಪ್ರಬಲ ಭೂಕಂಪಗಳು ಸಂಭವಿಸಿವೆ.

ಜನ ಭೀತಿಯಿಂದ ಮನೆಗಳನ್ನು ತೊರೆದು ಬೀದಿಗಳಲ್ಲಿದ್ದಾರೆ.

ಸುಮಾರು 75 ಸಾವಿರ ಜನಸಂಖ್ಯೆ ಹೊಂದಿರುವ ಸುಂಬಾ ದ್ವೀಪದ ಸುತ್ತಮುತ್ತಲಿನ 40 ಕಿಲೋಮೀಟರ್ ವ್ಯಾಪ್ತಿಯಲ್ಲಿ 5.9 ಪ್ರಬಲತೆಯ ಭೂಕಂಪ ಸಂಭವಿಸಿದೆ ಎಂದು ಅಮೆರಿಕದ ಜಿಯಾಲಾಜಿಕಲ್ ಸರ್ವೆ ಹೇಳಿದೆ.

ಇದಾದ 15 ನಿಮಿಷಗಳಲ್ಲೇ, ರಿಕ್ಟರ್ ಮಾಪಕದಲ್ಲಿ 6.0ರಷ್ಟು ತೀವ್ರತೆ ಇದ್ದ ಭೂಕಂಪ ಅದೇ ಪ್ರದೇಶದಲ್ಲಿ 30 ಕಿಲೋಮೀಟರ್ ಆಳದಲ್ಲಿ ಸಂಭವಿಸಿದೆ. ತಕ್ಷಣಕ್ಕೆ ಯಾವುದೇ ಹಾನಿ ವಿವರಗಳು ತಿಳಿದುಬಂದಿಲ್ಲ.

"ನಾಲ್ಕು ಬಾರಿ ನಮಗೆ ಕಂಪನದ ಅನುಭವವಾಯಿತು. ಮೊದಲ ಬಾರಿ ಕಂಪನ ಸಂಭವಿಸಿದಾಗ ಜನ ಹೋಟೆಲ್‌ನಿಂದ ಹೊರಗೆ ಓಡಿದರು. ಸುಮಾರು 40 ಮಂದಿ ಈ ಹೋಟೆಲ್‌ನಲ್ಲಿದ್ದರು" ಎಂದು ಪದಾದಿತ ಬೀಚ್ ಹೋಟೆಲ್‌ನ ಕಾರ್ಮಿಕರೊಬ್ಬರು ವಿವರಿಸಿದ್ದಾರೆ.

ಕೆಲ ಸೆಕೆಂಡ್‌ಗಳ ಕಾಲ ಮಾತ್ರ ಭೂಮಿ ಕಂಪಿಸಿದೆ. ಭೌಗೋಳಿಕ ತಜ್ಞರು ಈ ಬಗ್ಗೆ ಯಾವುದೇ ಮುನ್ನೆಚ್ಚರಿಕೆ ನೀಡಿರಲಿಲ್ಲ. ಇದೀಗ ಪರಿಸ್ಥಿತಿ ಯಥಾಸ್ಥಿತಿ ತಲುಪಿದೆ ಎಂದು ಅವರು ಹೇಳಿದ್ದಾರೆ. ಸುಂಬಾ ದ್ವೀಪ, ಕಳೆದ ಶುಕ್ರವಾರ ಭೂಕಂಪ ಸಂಭವಿಸಿದ ಸುಲವೇಸಿ ದ್ವೀಪದಿಂದ ಸುಮಾರು 1600 ಕಿಲೋಮೀಟರ್ ದೂರದಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News