ಉ.ಪ್ರದೇಶ: ಪುತ್ರನ ಕೊಲೆಗೆ ಸಿಗದ ನ್ಯಾಯ; ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮುಸ್ಲಿಂ ಕುಟುಂಬ

Update: 2018-10-03 08:05 GMT

ಲಕ್ನೋ, ಅ.3: ತನ್ನ ಪುತ್ರನ ಅಸಹಜ ಸಾವನ್ನು ಕೊಲೆಯೆಂದು ಪರಿಗಣಿಸದೆ ಆತ್ಮಹತ್ಯೆಯೆಂದು ಪರಿಗಣಿಸಿದ ಪೊಲೀಸರ ಕ್ರಮದಿಂದ ನೊಂದು ಉತ್ತರ ಪ್ರದೇಶದ ಬಾಘಪತ್ ಜಿಲ್ಲೆಯ ಬಡರ್ಖ ಗ್ರಾಮದ ನಿವಾಸಿ ಅಖ್ತರ್ ಎಂಬವರು ಇಸ್ಲಾಂ ಧರ್ಮ ತೊರೆದು ತಮ್ಮ ಕುಟುಂಬ ಸಮೇತ ಹಿಂದು ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಈಗಲಾದರೂ ತನ್ನ ಮಗನ `ಕೊಲೆ' ಪ್ರಕರಣವನ್ನು ಪೊಲೀಸರು ನಿಷ್ಪಕ್ಷಪಾತ ತನಿಖೆ ನಡೆಸುತ್ತಾರೆ ಎಂಬ ಆಶಾವಾದವಿದೆ ಎಂದು ಹೇಳಿದ್ದಾರೆ.

ತಾನು ಹಾಗೂ ತನ್ನ ಕುಟುಂಬದ 12 ಮಂದಿ ಸದಸ್ಯರು ಸ್ವಇಚ್ಛೆಯಿಂದ ಮತಾಂತರಗೊಂಡಿದ್ದಾಗಿ ಅಖ್ತರ್ ತನ್ನ ಪ್ರದೇಶದ ಸಬ್-ಡಿವಿಷನಲ್ ಮ್ಯಾಜಿಸ್ಟ್ರೇಟರಿಗೆ ಅಫಿದಾವತ್ ಸಲ್ಲಿಸಿದ್ದಾರೆ.

ಅಖ್ತರ್ ಕುಟುಂಬ ಹವನ ಹಾಗೂ ಇತರ ಪ್ರಕ್ರಿಯೆ ನಡೆಸಿ ತಮ್ಮ ಹೆಸರುಗಳನ್ನೂ ಬದಲಾಯಿಸಿದೆ ಎಂದು ರಾಜ್ಯ ಯುವ ಹಿಂದು ವಾಹಿನಿ ಅಧ್ಯಕ್ಷ ಶೌಕೇಂದ್ರ ಖೋಕರ್ ಹೇಳಿದ್ದಾರೆ. ಅಖ್ತರ್ ಪುತ್ರ ಗುಲ್‍ಹಸನ್ ಎಂಬಾತನನ್ನು ಕೊಲೆಗೈದು ನಂತರ ಆತನ ದೇಹವನ್ನು ನೇತು ಹಾಕಲಾಗಿದೆ ಎಂಬ ಬಲವಾದ ಅನುಮಾನ ಕುಟುಂಬಕ್ಕಿದೆ ಎಂದೂ ಶೌಕೇಂದ್ರ ಹೇಳಿದ್ದಾರೆ.

ಈ ಪ್ರಕರಣವನ್ನು ಎಲ್ಲಾ ಆಯಾಮಗಳಿಂದ ತನಿಖೆ ನಡೆಸುವಂತೆ ಕುಟುಂಬ ಪೊಲೀಸರನ್ನು ವಿನಂತಿಸಿದ್ದರೂ ಅವರು ಇದನ್ನೊಂದು ಆತ್ಮಹತ್ಯೆ ಪ್ರಕರಣವೆಂದು ದಾಖಲಿಸಿದ್ದರು ಎಂದು ಆತ ತಿಳಿಸಿದ್ದಾರೆ. ಅಖ್ತರ್ ತನ್ನ ಸಮುದಾಯದ ಮಂದಿಯ ಸಹಾಯ ಕೋರಿದ್ದರೂ ಯಾರೂ ಮುಂದೆ ಬರಲಿಲ್ಲವೆಂದೂ ಯುವ ವಾಹಿನಿ ನಾಯಕ ಹೇಳಿದ್ದಾರೆ.

ಪ್ರಕರಣವನ್ನು ಪರಿಶೀಲಿಸಲಾಗುತ್ತಿದೆ ಹಾಗೂ ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ಗಮನ ಸೆಳೆಯಲಾಗಿದೆ ಎಂದು ಬಾಘಪತ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಕುಮಾರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News