ವೃದ್ಧೆಯ ಕೊಲೆಗೈದು ಚಿನ್ನಾಭರಣ ದೋಚಿದ ಪ್ರಕರಣ: ಆರೋಪಿಗೆ ಜೀವಾವಧಿ ಶಿಕ್ಷೆ

Update: 2018-10-03 13:02 GMT

ಮಡಿಕೇರಿ, ಅ.3: ವೃದ್ಧೆಯೊಬ್ಬರನ್ನು ಕೊಲೆಗೈದು ಚಿನ್ನಾಭರಣ ಹಾಗೂ ಹಣ ಸುಲಿಗೆ ಮಾಡಿದ ಆರೋಪ ಸಾಕ್ಷ್ಯಾಧಾರಗಳಿಂದ ದೃಢಪಟ್ಟ ಹಿನ್ನೆಲೆಯಲ್ಲಿ ಇಲ್ಲಿನ ನ್ಯಾಯಾಲಯವು ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ.

ಸೋಮವಾರಪೇಟೆ ತಾಲೂಕಿನ ಗರ್ವಾಲೆ ಗ್ರಾಮದ ತಂಬುಕುತ್ತಿರ ಪೂವಯ್ಯ ಎಂಬಾತನೇ ಶಿಕ್ಷೆಗೆ ಗುರಿಯಾದ ಅಪರಾಧಿಯಾಗಿದ್ದಾನೆ.

ಗರ್ವಾಲೆ ಗ್ರಾಮದ ಮನೆಯೊಂದರಲ್ಲಿ ಬೊಳ್ಳಿಯವ್ವ (68) ಎಂಬಾಕೆ ಒಂಟಿಯಾಗಿದ್ದ ಸಂದರ್ಭ 2016ರ ಡಿ.30ರಂದು ಮನೆಗೆ ತೆರಳಿದ್ದ ಪೂವಯ್ಯನನ್ನು ‘ಇಷ್ಟು ಹೊತ್ತಿನಲ್ಲಿ ಇಲ್ಲಿಗೆ ಯಾಕೆ ಬಂದಿದ್ದೀಯಾ? ಎಂದು ಬೊಳ್ಳಿಯವ್ವ ಪ್ರಶ್ನಿಸಿದ್ದಾರೆ. ಈ ಸಂದರ್ಭ ಆರೋಪಿ ಆಕೆಯ ಕೆನ್ನೆಗೆ ಹೊಡೆದಿದ್ದು, ಆಕೆ ನಡುಮನೆಯೊಳಗೆ ಹೋಗಿ ಜ್ಞಾನ ತಪ್ಪಿ ಬಿದ್ದಿದ್ದಾರೆ. ಆರೋಪಿಯು ಆಕೆಯ ಕಿವಿಯಲ್ಲಿದ್ದ ಓಲೆ, ಕುತ್ತಿಗೆಯಲ್ಲಿದ್ದ ಚಿನ್ನದ ಚೈನ್‍ನ್ನು ಬಿಚ್ಚಿಕೊಂಡಿದ್ದಲ್ಲದೆ, ಈಕೆಯನ್ನು ಹೀಗೆಯೇ ಬಿಟ್ಟರೆ ನಾಳೆ ಎಲ್ಲರಿಗೂ ವಿಷಯ ತಿಳಿಯುತ್ತದೆ ಎಂದುಕೊಂಡ ಪೂವಯ್ಯ ಆಕೆಯ ಕುತ್ತಿಗೆಯನ್ನು ಹಿಸುಕಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಬಳಿಕ ಆಕೆ ಸ್ವಾಭಾವಿಕವಾಗಿ ಸತ್ತಂತೆ ಬಿಂಬಿಸುವ ಸಲುವಾಗಿ ಮೃತದೇಹವನ್ನು ಆಕೆಯ ಕೋಣೆಯ ಮಂಚದ ಮೇಲೆ ಮಲಗಿಸಿ, ಅಲ್ಲಿ ಪೆಟ್ಟಿಗೆಯಲ್ಲಿದ್ದ 3 ಸಾವಿರ ರೂ.ಗಳನ್ನು ದೋಚಿಕೊಂಡು ಪರಾರಿಯಾಗಿದ್ದ ಎಂದು ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಕುರಿತು ವಿಚಾರಣೆ ನಡೆಸಿದ ಇಲ್ಲಿನ ಒಂದನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಡಿ.ಪವನೇಶ್ ಅವರು, ಆರೋಪಿ ಪೂವಯ್ಯ ವಿರುದ್ಧದ ಆರೋಪಗಳು ಸಾಕ್ಷ್ಯಾಧಾರಗಳಿಂದ ದೃಢಪಟ್ಟ ಹಿನ್ನೆಲೆಯಲ್ಲಿ ಆರೋಪಿಗೆ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಆರೋಪಿಗೆ ಕೊಲೆ ಮಾಡಿದ ಅಪರಾಧಕ್ಕಾಗಿ ಜೀವಾವಧಿ ಶಿಕ್ಷೆ ಹಾಗೂ 7500 ರೂ.ದಂಡ, ಸಾಕ್ಷಿ ನಾಶ ಮಾಡಲು ಯತ್ನಿಸಿದ್ದಕ್ಕಾಗಿ 5 ವರ್ಷ ಕಠಿಣ ಸಜೆ ಮತ್ತು 5 ಸಾವಿರ ರೂ.ದಂಡ, ದರೋಡೆ ಮಾಡಿದ ಅಪರಾಧಕ್ಕಾಗಿ 7 ವರ್ಷಗಳ ಕಠಿಣ ಸಜೆ ಹಾಗೂ 5ಸಾವಿರ ರೂ. ದಂಡ ವಿಧಿಸಿ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ. ಅಲ್ಲದೆ ವಸೂಲಾದ ದಂಡದ ಹಣದಲ್ಲಿ 12500 ರೂ.ಗಳನ್ನು ಮೃತೆಯ ಪುತ್ರನಿಗೆ ನೀಡುವಂತೆ ಆದೇಶದಲ್ಲಿ ತಿಳಿಸಿದ್ದಾರೆ.
ಪ್ರಕರಣದಲ್ಲಿ ಸರಕಾರದ ಪರವಾಗಿ ಸರಕಾರಿ ಅಭಿಯೋಜಕಿ ಎಂ.ಕೃಷ್ಣವೇಣಿ ಅವರು ವಾದ ಮಂಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News