ತವರಿನಲ್ಲಿ ಗೆಲುವಿನ ಹಾದಿಗೆ ಮರಳಲು ಭಾರತ ಚಿತ್ತ

Update: 2018-10-03 18:39 GMT

ರಾಜ್‌ಕೋಟ್, ಅ.3: ಇಂಗ್ಲೆಂಡ್ ವಿರುದ್ಧ ವಿದೇಶಿ ಸರಣಿಯನ್ನು ಹೀನಾಯವಾಗಿ ಸೋತಿರುವ ಭಾರತ ತಂಡ ವೆಸ್ಟ್‌ಇಂಡೀಸ್ ವಿರುದ್ಧ ಗುರುವಾರದಿಂದ ತವರು ನೆಲದಲ್ಲಿ ಮೊದಲ ಟೆಸ್ಟ್ ಪಂದ್ಯವನ್ನಾಡಲಿದೆ. ಈ ಪಂದ್ಯದ ಮೂಲಕ ಗೆಲುವಿನ ಹಾದಿಗೆ ವಾಪಸಾಗಲು ಎದುರು ನೋಡುತ್ತಿದೆ.

ಭಾರತ-ವಿಂಡೀಸ್ ನಡುವೆ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದ ಆತಿಥ್ಯಕ್ಕೆ ರಾಜ್‌ಕೋಟ್‌ನ ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಸ್ಟೇಡಿಯಂ ಸರ್ವಸನ್ನದ್ದವಾಗಿದೆ. ಇಂಗ್ಲೆಂಡ್ ವಿರುದ್ಧ ಸರಣಿಯನ್ನು 1-4 ರಿಂದ ಸೋಲುವ ಮೊದಲು ಭಾರತ ತಂಡ ಈ ವರ್ಷಾರಂಭದಲ್ಲಿ ದಕ್ಷಿಣ ಆಫ್ರಿಕ ವಿರುದ್ಧ 1-2 ಅಂತರದಿಂದ ಟೆಸ್ಟ್ ಸರಣಿ ಸೋತಿತ್ತು. ನವೆಂಬರ್‌ನಲ್ಲಿ ಆರಂಭವಾಗಲಿರುವ ಆಸ್ಟ್ರೇಲಿಯ ಕ್ರಿಕೆಟ್ ಪ್ರವಾಸಕ್ಕಿಂತ ಮೊದಲು ನಾಯಕ ವಿರಾಟ್ ಕೊಹ್ಲಿ ಅವರು ಜೇಸನ್ ಹೋಲ್ಡರ್ ನೇತೃತ್ವದ ವಿಂಡೀಸ್ ವಿರುದ್ಧ ಸರಣಿಯಲ್ಲಿ ತಂಡದ ದೌರ್ಬಲ್ಯವನ್ನು ಸರಿಪಡಿಸಿಕೊಳ್ಳುವ ವಿಶ್ವಾಸದಲ್ಲಿದ್ದಾರೆ.

ಇಂಗ್ಲೆಂಡ್‌ನಲ್ಲಿ ಪದೇ ಪದೇ ಆಡುವ ಬಳಗದಲ್ಲಿ ಬದಲಾವಣೆ ಮಾಡಿದ್ದ ಭಾರತ ತಂಡ ತೀವ್ರ ಟೀಕೆಗೆ ಗುರಿಯಾಗಿತ್ತು. ಇಂಗ್ಲೆಂಡ್ ಸರಣಿಯಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಆರಂಭಿಕ ಆಟಗಾರರಾದ ಶಿಖರ್ ಧವನ್ ಹಾಗೂ ಮುರಳಿ ವಿಜಯ್ ಟೆಸ್ಟ್ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದಾರೆ. ಭಾರತದ ಪರ ತ್ರಿಶತಕ ಸಿಡಿಸಿದ್ದ ಎರಡನೇ ದಾಂಡಿಗನೆಂಬ ಕೀರ್ತಿಗೆ ಭಾಜನರಾಗಿದ್ದ ಕರುಣ್ ನಾಯರ್‌ರನ್ನು ವಿಂಡೀಸ್ ವಿರುದ್ಧ ಸರಣಿಯಿಂದ ಕಡೆಗಣಿಸಲಾಗಿದೆ. ನಾಯರ್‌ರನ್ನು ಕೈಬಿಟ್ಟಿರುವ ವಿಚಾರ ತೀವ್ರ ಚರ್ಚೆಗೆ ಗ್ರಾಸವಾಗಿದೆ.

 ಭಾರತ ತಂಡ ಹೊಸ ಆರಂಭಿಕ ಜೋಡಿಯನ್ನು ಕಣಕ್ಕಿಳಿಸುವುದು ಖಚಿತವಾಗಿದೆ. ಕೆಎಲ್ ರಾಹುಲ್ ಮುಂಬೈನ ಕಿರಿಯ ಕ್ರಿಕೆಟಿಗ ಪೃಥ್ವಿ ಶಾ ಅವರೊಂದಿಗೆ ಇನಿಂಗ್ಸ್ ಆರಂಭಿಸಲಿದ್ದಾರೆ. ವಿಂಡೀಸ್ ವಿರುದ್ಧ ಸರಣಿಯು ಶಾಗೆ ತನ್ನಪ್ರತಿಭೆ ಪ್ರದರ್ಶಿಸಲು ಉತ್ತಮ ಅವಕಾಶವಾಗಿದೆ.

ಬೌಲಿಂಗ್ ವಿಭಾಗದಲ್ಲಿ ಭಾರತ ಮೂವರು ಸ್ಪಿನ್ನರ್‌ಗಳಾದ-ಆರ್.ಅಶ್ವಿನ್, ಕುಲ್‌ದೀಪ್ ಯಾದವ್ ಹಾಗೂ ರವೀಂದ್ರ ಜಡೇಜರನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ. ಜಸ್‌ಪ್ರಿತ್ ಬುಮ್ರಾ ಹಾಗೂ ಭುವನೇಶ್ವರ್ ಕುಮಾರ್ ವಿಶ್ರಾಂತಿ ಪಡೆದರೆ, ಇಶಾಂತ್ ಶರ್ಮಾ ಗಾಯಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಉಮೇಶ್ ಯಾದವ್ ಹಾಗೂ ಮುಹಮ್ಮದ್ ಶಮಿ ಭಾರತದ ವೇಗದ ಬೌಲಿಂಗ್ ದಾಳಿಯನ್ನು ಮುನ್ನಡೆಸಲಿದ್ದಾರೆ.

ಗಾಯದ ಸಮಸ್ಯೆಗೆ ಸಿಲುಕಿರುವ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅನುಪಸ್ಥಿತಿಯಲ್ಲಿ ಜಡೇಜ ಬ್ಯಾಟ್ ಹಾಗೂ ಚೆಂಡಿನಲ್ಲಿ ಕೊಡುಗೆ ನೀಡುವ ವಿಶ್ವಾಸದಲ್ಲಿದ್ದಾರೆ.

 ಏಶ್ಯಕಪ್‌ನಲ್ಲಿ ಯಶಸ್ವಿಯಾಗಿ ಏಕದಿನ ಕ್ರಿಕೆಟ್‌ಗೆ ವಾಪಸಾಗಿರುವ ಜಡೇಜ ತನ್ನ ತವರು ಮೈದಾನದಲ್ಲಿ ಘರ್ಜಿಸಲು ಸಜ್ಜಾಗಿದ್ದಾರೆ. ಇಂಗ್ಲೆಂಡ್ ವಿರುದ್ಧ ದಿ ಓವಲ್‌ನಲ್ಲಿ ನಡೆದ ತನ್ನ ಚೊಚ್ಚಲ ಪಂದ್ಯದಲ್ಲಿ 114 ರನ್ ಗಳಿಸಿದ್ದ ರಿಷಭ್ ಪಂತ್ ತನ್ನ ಸ್ಥಾನ ಭದ್ರಪಡಿಸಿಕೊಳ್ಳುವ ವಿಶ್ವಾಸದಲ್ಲಿದ್ದಾರೆ.

ಆಂಧ್ರದ ಹನುಮ ವಿಹಾರಿ ದಿ ಓವಲ್‌ನಲ್ಲಿ ಆಡಿದ್ದ ತನ್ನ ಪಾದಾರ್ಪಣೆ ಪಂದ್ಯದಲ್ಲಿ 56 ರನ್ ಗಳಿಸಿ ಗಮನಾರ್ಹ ಪ್ರದರ್ಶನ ನೀಡಿದ್ದರು. ಭಾರತ ಐವರು ಸ್ಪೆಷಲಿಸ್ಟ್ ಬೌಲರ್‌ಗಳನ್ನು(ಮೂವರು ಸ್ಪಿನ್ನರ್‌ಗಳು, ಇಬ್ಬರು ವೇಗಿಗಳು)ಮೈದಾನಕ್ಕೆ ಇಳಿಸುತ್ತಿರುವ ಹಿನ್ನೆಲೆಯಲ್ಲಿ ವಿಹಾರಿ ಆಡುವ 11ರ ಬಳಗದಲ್ಲಿ ಆಡುತ್ತಿಲ್ಲ. ಮತ್ತೊಂದೆಡೆ, ವೆಸ್ಟ್‌ಇಂಡೀಸ್ ತಂಡದಲ್ಲಿ ಪ್ರತಿಭಾವಂತರ ಪಡೆಯಿದೆ. ಆದರೆ, ಆಟಗಾರರಲ್ಲಿ ಭಾರತಕ್ಕೆ ಸ್ಪರ್ಧೆಯೊಡ್ಡುವಷ್ಟು ಅನುಭವವಿಲ್ಲ. 15 ಸದಸ್ಯರ ತಂಡದಲ್ಲಿ ಕೇವಲ ಐವರು ಆಟಗಾರರು ಭಾರತ ನೆಲದಲ್ಲಿ ಟೆಸ್ಟ್ ಪಂದ್ಯ ಆಡಿದ್ದಾರೆ. ಈ ಪೈಕಿ ವೇಗದ ಬೌಲರ್ ಕೆಮರ್ ರೋಚ್ ಮೊದಲ ಪಂದ್ಯಕ್ಕೆ ಲಭ್ಯರಿಲ್ಲ. ಕುಟುಂಬ ಸದಸ್ಯರೊಬ್ಬರು ನಿಧನರಾದ ಕಾರಣ ಸ್ವದೇಶಕ್ಕೆ ವಾಪಸಾಗಿದ್ದಾರೆ.

ದೇವೇಂದ್ರ ಬಿಶೂ, ಕ್ರೆಗ್ ಬ್ರಾತ್‌ವೇಟ್, ಕಿರನ್ ಪೊವೆಲ್ ಹಾಗೂ ಶಾನನ್ ಗ್ಯಾಬ್ರಿಯಲ್‌ಗೆ ಭಾರತದಲ್ಲಿ ಟೆಸ್ಟ್ ಆಡಿದ ಅನುಭವವಿದೆ. ವಿಂಡೀಸ್ ತಂಡ 2013ರ ನವೆಂಬರ್ ಬಳಿಕ ಮೊದಲ ಬಾರಿ ಭಾರತದಲ್ಲಿ ಟೆಸ್ಟ್ ಪಂದ್ಯವನ್ನಾಡುತ್ತಿದೆ. 2013ರಲ್ಲಿ ಸಚಿನ್ ತೆಂಡುಲ್ಕರ್ ಅವರ ವಿದಾಯದ ಸರಣಿಯಲ್ಲಿ ವಿಂಡೀಸ್ ಭಾಗಿಯಾಗಿತ್ತು. ಇತ್ತೀಚೆಗೆ ಶ್ರೀಲಂಕಾ ವಿರುದ್ಧ ಡ್ರಾ ಹಾಗೂ ಬಾಂಗ್ಲಾದೇಶ ವಿರುದ್ಧ 2-0 ಅಂತರದಿಂದ ಜಯ ಸಾಧಿಸಿರುವ ವಿಂಡೀಸ್ ಆತ್ಮವಿಶ್ವಾಸದಲ್ಲಿದೆ.

►ಭಾರತ ತಂಡ: ವಿರಾಟ್ ಕೊಹ್ಲಿ (ನಾಯಕ), ಕೆ.ಎಲ್.ರಾಹುಲ್, ಪೃಥ್ವಿ ಶಾ, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ರಿಷಭ್ ಪಂತ್(ವಿಕೆಟ್‌ಕೀಪರ್), ಆರ್.ಅಶ್ವಿನ್, ರವೀಂದ್ರ ಜಡೇಜ, ಕುಲ್‌ದೀಪ್ ಯಾದವ್, ಮುಹಮ್ಮದ್ ಶಮಿ, ಉಮೇಶ್ ಯಾದವ್ ಹಾಗೂ ಶಾರ್ದೂಲ್ ಠಾಕೂರ್.

►ವೆಸ್ಟ್‌ಇಂಡೀಸ್: ಜೇಸನ್ ಹೋಲ್ಡರ್(ನಾಯಕ), ಸುನೀಲ್ ಅಂಬ್ರಿಸ್, ದೇವೇಂದ್ರ ಬಿಶೂ, ಕ್ರೆಗ್ ಬ್ರಾತ್‌ವೇಟ್, ರೊಸ್ಟನ್ ಚೇಸ್, ಶೇನ್ ಡೌರಿಚ್, ಶಾನನ್ ಗ್ಯಾಬ್ರಿಯಲ್, ಜ್ಹಾಮರ್ ಹ್ಯಾಮಿಲ್ಟನ್, ಶಿಮ್ರಾನ್ ಹೆಟ್ಮೆರ್, ಶೈ ಹೋಪ್, ಶೆರ್ಮಾನ್ ಲೂಯಿಸ್, ಕೀಮೊ ಪೌಲ್, ಕಿರನ್ ಪೊವೆಲ್, ಕೆಮರ್ ರೋಚ್, ಜೊಮೆಲ್ ವಾರ್ರಿಕನ್.

ಪಂದ್ಯದ ಸಮಯ: ಬೆಳಗ್ಗೆ 9:30 ಗಂಟೆಗೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News