ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ 2.50 ರೂ. ಕಡಿತ

Update: 2018-10-04 17:08 GMT

 ಹೊಸದಿಲ್ಲಿ,ಅ.4: ದಿನೇದಿನೇ ಗಗನಕ್ಕೇರುತ್ತಿರುವ ಇಂಧನ ಬೆಲೆಗಳ ಕುರಿತು ಜನರಲ್ಲಿ ಹೆಚ್ಚುತ್ತಿರುವ ಆಕ್ರೋಶಕ್ಕೆ ಕೊನೆಗೂ ಎಚ್ಚೆತ್ತುಕೊಂಡಿರುವ ಕೇಂದ್ರ ಸರಕಾರವು ಗುರುವಾರ ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ 2.50 ರೂ.ಕಡಿತವನ್ನು ಪ್ರಕಟಿಸಿದೆ. ಇಂಧನಗಳ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀ.ಗೆ 1.50 ರೂ.ಕಡಿಮೆ ಮಾಡಿರುವ ಅದು,ಇನ್ನೊಂದು ರೂ.ಇಳಿಕೆಯನ್ನು ಭರಿಸುವಂತೆ ತೈಲ ಮಾರಾಟ ಕಂಪನಿಗಳಿಗೆ ಸೂಚಿಸಿದೆ.

ಅಬಕಾರಿ ಸುಂಕದಲ್ಲಿ ಕಡಿತದಿಂದ ಕೇಂದ್ರ ಸರಕಾರದ ತೆರಿಗೆ ಆದಾಯದಲ್ಲಿ 10,500 ಕೋ.ರೂ.ಗಳ ನಷ್ಟವಾಗಲಿದೆ ಎಂದು ತಿಳಿಸಿದ ವಿತ್ತಸಚಿವ ಅರುಣ್ ಜೇಟ್ಲಿ ಅವರು, ಇಷ್ಟೇ ಪ್ರಮಾಣದಲ್ಲಿ ಮಾರಾಟ ತೆರಿಗೆ ಅಥವಾ ವ್ಯಾಟ್ ಕಡಿತಗೊಳಿಸುವ ಮೂಲಕ ಕೇಂದ್ರದ ಹೆಜ್ಜೆಯನ್ನು ಅನುಸರಿಸುವಂತೆ ರಾಜ್ಯ ಸರಕಾರಗಳನ್ನು ಕೇಳಿಕೊಂಡರು.

ಎಲ್ಲ ಮಹಾನಗರಗಳು ಮತ್ತು ಹೆಚ್ಚಿನ ರಾಜ್ಯ ರಾಜಧಾನಿಗಳಿಗೆ ಹೋಲಿಸಿದರೆ ಇಂಧನ ಬೆಲೆಗಳು ಅತ್ಯಂತ ಕನಿಷ್ಠವಾಗಿರುವ ದಿಲ್ಲಿಯಲ್ಲಿ ಪ್ರತಿ ಲೀ.ಪೆಟ್ರೋಲ್ 84 ರೂ. ಮತ್ತು ಡೀಸೆಲ್ 75.45 ರೂ.ಗೆ ಮಾರಾಟವಾಗುತ್ತಿದೆ.

ಜಾಗತಿಕ ಕಚ್ಚಾ ತೈಲಬೆಲೆಗಳು ಬುಧವಾರ ನಾಲ್ಕು ವರ್ಷಗಳಲ್ಲಿಯೇ ಅಧಿಕ ಮಟ್ಟವಾದ ಪ್ರತಿ ಬ್ಯಾರೆಲ್‌ಗೆ 86 ಡಾ.ತಲುಪಿರುವ ಮತ್ತು ಅಮೆರಿಕದಲ್ಲಿ ಬಡ್ಡಿದರಗಳು ಏಳು ವರ್ಷಗಲ್ಲಿ ಗರಿಷ್ಠ ಮಟ್ಟಕ್ಕೇರಿರುವ ಹಿನ್ನೆಲೆಯಲ್ಲಿ ಜನರಿಗೆ ಹೊರೆಯಾಗದಿರಲು ಕೇಂದ್ರವು ಇಂಧನ ಬೆಲೆಗಳನ್ನು ಕಡಿತಗೊಳಿಸಿದೆ ಎಂದು ಜೇಟ್ಲಿ ತಿಳಿಸಿದರು.

ಮಹಾರಾಷ್ಟ್ರ, ಗುಜರಾತ್, ಛತ್ತೀಸ್ ಗಢ, ಜಾರ್ಖಂಡ್, ತ್ರಿಪುರ, ಉತ್ತರ ಪ್ರದೇಶ, ಮಧ್ಯಪ್ರದೇಶ, ಹಿಮಾಚಲ ಪ್ರದೇಶ, ಹರ್ಯಾಣ ಹಾಗು ಅಸ್ಸಾಂ ರಾಜ್ಯಗಳು 2.50 ರೂ.ಗಳನ್ನು ಕಡಿತಗೊಳಿಸಿದ್ದು, ಗ್ರಾಹಕರಿಗೆ 5 ರೂ. ಕಡಿತಗೊಳ್ಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News