ಮದ್ಯಪಾನ ಮುಕ್ತ ಭಾರತಕ್ಕೆ ಆಂದೋಲನ ಅಗತ್ಯ: ಡಾ.ಮಂಜುನಾಥ್

Update: 2018-10-04 12:03 GMT

ಚಿಕ್ಕಮಗಳೂರು, ಅ.4: ಮದ್ಯಪಾನ ಕಾರ್ಮಿಕ ವರ್ಗದ ಬಹು ದೊಡ್ಡ ವೈರಿ ಎಂದು ಕಾರ್ಲ್ ಮಾಕ್ರ್ಸ್ ಪ್ರತಿಪಾದಿಸಿದ್ದಾರೆ. ಮದ್ಯಪಾನ ಸರ್ವನಾಶ ಎಂದು ಗಾಂಧೀಜಿ ಬೋಧಿಸಿದ್ದಾರೆ. ಮದ್ಯಪಾನ ಮುಕ್ತ ಭಾರತ ಗಾಂಧೀಜಿ ಕನಸಾಗಿದ್ದು, ರಾಜ್ಯದಲ್ಲಿ ಮದ್ಯಪಾನ ನಿಷೇಧವಾಗಬೇಕು. ಈ ನಿಟ್ಟಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆ ಕಳೆದ 26 ವರ್ಷಗಳಿಂದ ನಿರಂತರ ಆಂದೋಲನ ಹಾಗೂ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿದೆ ಎಂದು ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ಎಚ್.ಮಂಜುನಾಥ್ ತಿಳಿಸಿದ್ದಾರೆ.

ನಗರದ ಬೋಳರಾಮೇಶ್ವರ ದೇವಾಲಯದ ಆವರಣದಲ್ಲಿ ಗುರುವಾರ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಗಾಂಧಿ ಸ್ಮೃತಿ ವಿಚಾರ ಸಂಕಿರಣ ಹಾಗೂ ಜನಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲ ಧರ್ಮಗಳ ಸಾರ ಮನುಷ್ಯನಿಗೆ ಬದುಕುವುದನ್ನು ಕಲಿಸುವುದಾಗಿದೆ. ಮಹಾತ್ಮ ಗಾಂಧೀಜಿ ಅವರ ಬದುಕೇ ಒಂದು ಧರ್ಮವಾಗಿದ್ದು, ಅವರ ಬದುಕು ವಿಶ್ವಕ್ಕೆ ಮಾದರಿಯಾಗಿದೆ. ಗಾಂಧೀಜಿ ಅವರ ಸತ್ಯ, ಅಹಿಂಸೆ, ಸರಳತೆ, ಸ್ವಚ್ಛತೆಯ ತತ್ವಗಳ ಅನುಸರಣೆಯಿಂದ ಆದರ್ಶ ಬದುಕು ನಡೆಸಲು ಸಾಧ್ಯ ಎಂದ ಅವರು, ಗ್ರಾಮಸ್ವರಾಜ್ಯ, ಗ್ರಾಮಾಭಿವೃದ್ಧಿ ಪರಿಕಲ್ಪನೆಗಳ ಮೂಲಕ ಶಸಕ್ತ ಭಾರತದ ನಿರ್ಮಾಣಕ್ಕೆ ಕರೆ ನೀಡಿದ್ದ ಅವರ ತತ್ವಗಳು ಎಂದಿಗೂ ಪ್ರಸ್ತುತ ಎಂದರು.

ಮದ್ಯ ಮುಕ್ತ ಭಾರತ ಗಾಂಧೀಜಿ ಕನಸಾಗಿತ್ತು. ಆದರೆ ಪ್ರಸಕ್ತ ಮದ್ಯದಂಗಡಿಗಳು ಹಳ್ಳಿಹಳ್ಳಿಗಳನ್ನೂ ಅಕ್ರಮಿಸುತ್ತಿವೆ. ಇವುಗಳಿಂದಾಗಿ ದೇಶದ ಯುವ ಜನತೆ ಸೇರಿದಂತೆ ಗ್ರಾಮೀಣ ಜನರ ಬದುಕು ದುಸ್ತರವಾಗುತ್ತಿದೆ. ಗ್ರಾಮೀಣ ಜನರ ಹಣ, ಮಾನಸಿಕ ನೆಮ್ಮದಿ, ಕೌಟುಂಬಿಕ ಸಂಬಂಧಗಳಿಗೆ ಮದ್ಯಪಾನ ಕೊಳ್ಳಿ ಇಡುತ್ತಿವೆ. ಮಹಿಳೆಯರ ಬದುಕನ್ನು ಹರಣ ಮಾಡುತ್ತಿದ್ದು, ಮದ್ಯಪಾನ ನಿಷೇದ ಹಾಗೂ ಮದ್ಯವ್ಯಸನಿಗಳ ಮನ ಪರಿವರ್ತನೆಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅವಿರತ ಶ್ರಮಿಸುತ್ತಿದೆ. ಮದ್ಯದ ವಿರುದ್ಧ ಆಂದೋಲಗಳನ್ನು ನಿರಂತರವಾಗಿ ಮಾಡಲಾಗುತ್ತಿದೆ. ರಾಜ್ಯದಲ್ಲಿ ಸಂಪೂರ್ಣ ಮದ್ಯಪಾನ ನಿಷೇದಕ್ಕಾಗಿ ಸರಕಾರ ಹಾಗೂ ಜನಪ್ರತಿನಿಧಿಗಳಿಗೆ ಒತ್ತಡ ಹೇರುತ್ತಿದ್ದೇವೆ. ಸಂಪೂರ್ಣ ಮದ್ಯಪಾನ ನಿಷೇದ ಬೆಂಬಲಿಸುವ ಪಕ್ಷಕ್ಕೆ ನಮ್ಮ ಬೆಂಬಲ ಎಂದು ಎಲ್ಲ ರಾಜಕೀಯ ಪಕ್ಷಗಳಿಗೆ ಚುನಾವಣಾ ಸಂದರ್ಭ ಮನವರಿಕೆ ಮಾಡಲಾಗಿದೆ ಎಂದ ಅವರು, ಸಂಸ್ಥೆ ವತಿಯಿಂದ ಇದುವರೆಗೂ 1255 ಮದ್ಯವರ್ಜನ ಶಿಬಿರ ಹಮ್ಮಿಕೊಂಡಿದ್ದು, ಸುಮಾರು 1 ಲಕ್ಷ ಮದ್ಯ ವ್ಯಸನಿಗಳು ಶಿಬಿರದ ಪ್ರಯೋಜನ ಪಡೆದಿದ್ದಾರೆ. ಈ ಪೈಕಿ ಸುಮಾರು 85 ಸಾವಿರ ವ್ಯಸನಿಗಳು ಮದ್ಯದ ವ್ಯಸನದಿಂದ ಮುಕ್ತರಾಗಿದ್ದಾರೆಂದರು.

ಮುಖ್ಯ ಅತಿಥಿಯಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಸ್ಪಿ ಅಣ್ಣಾಮಲೈ ಮಾತನಾಡಿ, ಮದ್ಯಮಾರಾಟ ರಾಜ್ಯ ಸರಕಾರದ ಆದಾಯದ ಮೂಲಗಳಲ್ಲಿ ಪ್ರಮುಖವಾಗಿದೆ. ಈ ಆದಾಯವನ್ನು ಸರಕಾರ ಜನಪರ ಕಲ್ಯಾಣ ಕಾರ್ಯಕ್ರಮಗಳಿಗೆ ವಿನಿಯೋಗುಸುತ್ತಿದೆ. ಈ ಕಾರಣಕ್ಕೆ ಸಂಪೂರ್ಣ ಮದ್ಯಪಾನ ನಿಷೇದ ಕಷ್ಟ. ಕೇರಳ, ಬಿಹಾರ, ಗುಜರಾತ್ ರಾಜ್ಯಗಳಲ್ಲೂ ಸಂಪೂರ್ಣ ಮದ್ಯಪಾನ ನಿಷೇದ ಸಾಧ್ಯವಾಗಿಲ್ಲ ಎಂದ ಅವರು, ವ್ಯಸನಕ್ಕೊಳಗಾದವರಲ್ಲಿ ಬದ್ಧತೆ, ಇಚ್ಛಾಶಕ್ತಿ ಇದ್ದಲ್ಲಿ ಈ ದುಶ್ಚಟದಿಂದ ದೂರವಿರಲು ಸಾಧ್ಯವಿದೆ. ಗ್ರಾಮೀಣ ಪ್ರದೇಶಗಳಲ್ಲಿ ಮದ್ಯದ ಅಕ್ರಮ ಮಾರಾಟದ ಬಗ್ಗೆ ಸಾರ್ವಜನಿಕರು ಖುದ್ದು ದೂರವಾಣಿ ಮೂಲಕ ಮಾಹಿತಿ ನೀಡಿದ್ದಲ್ಲಿ ಅಗತ್ಯ ಕ್ರಮ ವಹಿಸುತ್ತೇನೆಂದು ಭರವಸೆ ನೀಡಿದರು.

ಶಾಸಕ ಸಿ.ಟಿ.ರವಿ ಮಾತನಾಡಿ, ಮದ್ಯಪಾನ ನಿಷೇಧದ ವಿರುದ್ಧ ತಾನು ಈ ಹಿಂದೆ ಸರಕಾರದ ಮೇಲೆ ಒತ್ತಡ ಹೇರಿದ್ದೇನೆ. ಇದಕ್ಕೆ ತಾನೂ ಇಂದಿಗೂ ಬದ್ಧನಾಗಿಯೇ ಇದ್ದೇನೆಂದ ಅವರು, ಗಾಂಧೀಜಿ ಅವರ ವೈಚಾರಿಕ ವಾರಸುದಾರಿಕೆಯನ್ನು ನಾವು ಪಾಲಸುತ್ತಿಲ್ಲ, ಬದಲಾಗಿ ಅವರ ರಾಜಕೀಯ ವಾರಸುದಾರಿಕೆ ಪಾಲಿಸುತ್ತಿದ್ದೇವೆ. ರಾಮರಾಜ್ಯದ ಕನಸಿನ ಸಾಕಾರಕ್ಕಾಗಿ ಗಾಂಧಿ ಹಾದಿಯನ್ನು ಹಿಡಿಯಬೇಕಿತ್ತು, ಆದರೆ ನಾವು ಗಾಂಧಿವಾದಿಗಳಾಗಿರುವುದರಿಂದ ದೇಶವನ್ನು ಸಮರ್ಥವಾಗಿ ಮುನ್ನಡೆಸಲು ಸಾಧ್ಯವಾಗುತ್ತಿಲ್ಲ ಎಂದ ಅವರು, ಅಬಕಾರಿ ಇಲಾಖೆ ಪ್ರತೀ ಜಿಲ್ಲೆಗಳಿಗೂ ಮದ್ಯಮಾರಾಟದ ಟಾರ್ಗೆಟ್ ನೀಡುತ್ತಾ ಮದ್ಯಮಾರಾಟಕ್ಕೆ ಪ್ರೋತ್ಸಾಹ ನೀಡುತ್ತಿದೆ. ಈ ಮೂಲಕ ಅನೈತಿಕ ಮಾರ್ಗದಿಂದ ಆದಾಯ ಸಂಗ್ರಹಿಸುತ್ತಿದ್ದು, ಇದು ಸರಕಾರದ ಮಹಾಪರಾಧ ಎಂದು ಅಭಿಪ್ರಾಯಿಸಿದರು.

ವಿಧಾನಪರಿಷತ್ ಸದಸ್ಯ ಎಸ್.ಎಲ್.ಧರ್ಮೇಗೌಡ, ನಗರಸಭೆ ಅಧ್ಯಕ್ಷೆ ಶಿಲ್ಪಾ ರಾಜ್‍ಶೇಖರ್, ಉಪಾಧ್ಯಕ್ಷ ಸುದೀರ್ ಮತ್ತಿತರರು ಮಾತನಾಡಿದರು. ಯೋಜನೆಯ ಮದ್ಯವರ್ಜನ ಶಿಬಿರದಲ್ಲಿ ಪಾಲ್ಗೊಂಡು ವ್ಯಸನ ಮುಕ್ತರಾದವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಗಾಂಧಿ ಜಯಂತಿ ಪ್ರಯುಕ್ತ ನಡೆಸಲಾದ ಚರ್ಚಾ ಗೋಷ್ಠಿಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಯೋಜನೆಯ ನೂತನ ಪದಾಧಿಕಾರಿಗಳಿಗೆ ಅಧಿಕಾರವನ್ನು ಹಸ್ತಾಂತರ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷ ಪ್ರಶಾಂತ್ ಚಿಪ್ರಗುತ್ತಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಅರವಿಂದ ಸೋಮಯಾಜಿ, ಆಜಾದ್‍ಪಾರ್ಕ್ ಗಣಪತಿ ಸೇವಾ ಸಮಿತಿಯ ಅಧ್ಯಕ್ಷ ಎನ್.ಈಶ್ವರಪ್ಪ, ಶ್ರೀದೇವಿ ಮೋಹನ್, ಹಸನ್ ಬಾವಾ, ತೇಗೂರು ಜಗದೀಶ್, ಎ.ಸಿ.ಚಂದ್ರಪ್ಪ, ಶಿವಲಿಂಗಸ್ವಾಮಿ, ವಿಶ್ವನಾಥ್, ವಿಠಲ್ ಪೂಜಾರಿ, ಡಿ.ದಿನೇಶ್, ಜಿಲ್ಲಾ ನಿರ್ದೇಶಕಿ, ಯೋಜನಾಧಿಕಾರಿ ಸುನೀತಾ ಪ್ರಭು ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News