ಕಳಸ: ನಾಪತ್ತೆಯಾಗಿದ್ದ ವ್ಯಕ್ತಿಯ ಅಸ್ಥಿಪಂಜರ ಭದ್ರಾ ನದಿಯಲ್ಲಿ ಪತ್ತೆ

Update: 2018-10-04 13:34 GMT

ಕಳಸ, ಅ.4: ಕಳೆದ ಅರುವತ್ತು ದಿನಗಳ ಹಿಂದೆ ಕಾಣೆಯಾಗಿದ್ದ ಕಾಂತಪ್ಪ ಪೂಜಾರಿ(85) ಎಂಬವರ ಮೃತದೇಹ ಗುರುವಾರ ಭದ್ರಾ ನದಿಯ ದಡದಲ್ಲಿ ಪತ್ತೆಯಾಗಿದೆ.

ಕಳಸ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಕಳಕ್ಕೊಡು ನಿವಾಸಿ ಕಾಂತಪ್ಪ ಪೂಜಾರಿ ಆಗಸ್ಟ್ 4ರಂದು ಸಂಜೆ 5 ಗಂಟೆಗೆ ಕಳಸ ಪಟ್ಟಣಕ್ಕೆ ಹೋಗಿ ಬರುತ್ತೇನೆಂದು ಮನೆಯವರಿಗೆ ತಿಳಿಸಿ ಪಟ್ಟಣಕ್ಕೆ ಬಂದಿದ್ದರು. ಆದರೆ ಅವರು ಕಳಸ ಕಡೆ ಬಂದವರು ಮತ್ತೆ ಮನೆಗೆ ಹಿಂದಿರುಗಿ ಬಾರದೇ ಕಾಣೆಯಾಗಿದ್ದರು. ಈ ಬಗ್ಗೆ ಕಳಸ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿತ್ತು. 

ಕಾಂತಪ್ಪ ಪೂಜಾರಿ ನಾಪತ್ತೆಯಾಗಿದ್ದ ದಿನ ಕಳಸ ಸುತ್ತಮುತ್ತ ಧಾರಾಕಾರವಾಗಿ ಸುರಿಯುತ್ತಿದ್ದ ಮಳೆಯಿಂದ ಭದ್ರಾ ನದಿಯಲ್ಲಿ ನೆರೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಭದ್ರಾನದಿಯ ನೆರೆ ನೀರಿನಲ್ಲಿ ಅವರು ಕೊಚ್ಚಿಕೊಂಡು ಹೋಗಿರಬಹುದೆಂದು ಶಂಕೆ ವ್ಯಕ್ತ ಪಡಿಸಲಾಗಿತ್ತು. ಈ ಸಂಬಂಧ ನದಿ ತೀರದಲ್ಲಿ ಹುಡುಕಾಡಿದರೂ ಕೂಡ ಕಾಣೆಯಾಗಿರುವ ವ್ಯಕ್ತಿ ಸಿಕ್ಕಿರಲಿಲ್ಲ. ನಂತರ ಹುಡುಕುವ ಪ್ರಯತ್ನವನ್ನು ಕೈಬಿಡಲಾಗಿತ್ತು.

ಆದರೆ ಗುರುವಾರ ಭದ್ರಾ ನದಿಯ ಕೋಡಿ ಬೆಟ್ಟ ಎಂಬ ಪ್ರದೇಶದಲ್ಲಿ ವಾಸನೆ ಬರುತ್ತಿದ್ದನ್ನು ಗಮನಿಸಿದ ಸ್ಥಳೀಯರು ಕಳಸ ಪೊಲೀಸ್ ಠಾಣೆಗೆ ಸುದ್ಧಿ ಮುಟ್ಟಿಸಿದ್ದರು. ಪೊಲೀಸರು ಕಾಣೆಯಾಗಿದ್ದ ಕಾಂತಪ್ಪ ಪೂಜಾರಿ ಕುಟುಂಬಸ್ಥರನ್ನು ಕರೆಸಿ ಪರಿಶೀಲನೆ ನಡೆಸಿದರು. ಸ್ಥಳದಲ್ಲಿದ್ದ ಬಟ್ಟೆಯ ಆಧಾರದ ಮೇಲೆ ಮೃತದೇಹ ಕಾಂತಪ್ಪ ಪೂಜಾರಿ ಅವರದ್ದೆ ಎಂದು ಕುಟುಂಬಸ್ಥರ ಮೂಲಕ ದೃಢಪಡಿಸಲಾಯಿತು.

ಮೃತದೇಹವನ್ನು ಕಳಸ ಸಮುದಾಯ ಆರೋಗ್ಯ ಕೇಂದ್ರಕ್ಕೆ ತಂದು ಮರಣೋತ್ತರ ಪರೀಕ್ಷೆ ನಡೆಸಿ ವಾರಿಸುದಾರರಿಗೆ ಒಪ್ಪಿಸಲಾಗಿದ್ದು, ಈ ಸಂಬಂಧ ಕಳಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News