ಭಾರತದ 400 ಕುಟುಂಬಗಳು ಚೀನಾ ಮರ್ಜಿಯಲ್ಲಿರುವುದೇಕೆ ಗೊತ್ತೇ ?

Update: 2018-10-05 03:29 GMT

ಪಿತ್ತೋರ್‌ಗಢ, ಅ. 5: ಧಾರ್ಚುಲಾ ಪ್ರದೇಶದ ಬಿಯಾಸ್ ಕಣಿವೆ ಪ್ರದೇಶದಲ್ಲಿ ವಾಸಿಸುವ ಸುಮಾರು 400 ಕುಟುಂಬಗಳು ಇಂದಿಗೂ ಚೀನಾ ಹಂಗಿನಲ್ಲಿ ಜೀವನ ಸಾಗಿಸುತ್ತಿವೆ. ಬದುಕಿಗೆ ತೀರಾ ಅಗತ್ಯವೆನಿಸಿದ ಉಪ್ಪು, ಖಾದ್ಯ ತೈಲ, ಅಕ್ಕಿ ಮತ್ತು ಗೋದಿ ಕೂಡಾ ಇವರಿಗೆ ನೇಪಾಳ ಮಾರ್ಗವಾಗಿ ಚೀನಾದಿಂದ ಬರಬೇಕು.

ಇದಕ್ಕೆ ಪರಿಹಾರವಿಲ್ಲವೇ? ಖಂಡಿತಾ ಇದೆ. ರಾಜ್ಯ ಸರ್ಕಾರ ಸಾರ್ವನಿಕ ವಿತರಣಾ ವ್ಯವಸ್ಥೆಯಡಿ ನೀಡುವ ಪಡಿತರ ಹೆಚ್ಚಿಸಿದರೆ ಇವರ ಸಮಸ್ಯೆ ಪರಿಹಾರವಾಗುತ್ತದೆ.

"ನಾವು ನಮ್ಮದೇ ದೇಶದಲ್ಲಿ ನಿರ್ಗತಿಕರಂತೆ ಬದುಕುತ್ತಿದ್ದೇವೆ. ಎರಡು ಪ್ರಮುಖ ನೆರೆ ರಾಷ್ಟ್ರಗಳ ಗಡಿಯಲ್ಲಿದ್ದೇವೆ. ಅಧಿಕ ಪಡಿತರಕ್ಕೆ ನಾವು ಮುಂದಿಟ್ಟಿರುವ ಬೇಡಿಕೆಯನ್ನು ಸರ್ಕಾರ ಅನುಕಂಪದ ಆಧಾರದಲ್ಲಿ ಪರಿಗಣಿಸಬೇಕು" ಎನ್ನುವುದು ಗರ್ಬ್ಯಾಲ್ ಗ್ರಾಮದ ನಿವಾಸಿ ಕೃಷ್ಣ ಅವರ ಅಳಲು.

ಬುಂಡಿ, ಗುಂಜಿ, ನಪಾಲ್ಚು, ನಭಿ, ರೋಣ್‌ಕೋಂಗ್ ಹಾಗೂ ಗರ್ಬ್ಯಾಲ್ ಹೀಗೆ ಏಳು ಗ್ರಾಮಗಳ ಜನತೆ ಇಂದಿಗೂ ತಮ್ಮ ದೈನಂದಿನ ಅಗತ್ಯತೆಗಳನ್ನು ಚೀನಾದಿಂದಲೇ ಪೂರೈಸಿಕೊಳ್ಳಬೇಕಾದ ಸ್ಥಿತಿ ಇದೆ.

ಜಿಲ್ಲೆಯ ಇತರ ಭಾಗ ಹಾಗೂ ಈ ಗ್ರಾಮಗಳನ್ನು ಸಂಪರ್ಕಿಸುವ ಲಿಪುಲೇಕ್ ಪಾಸ್ ಪ್ರದೇಶದ ಬಳಿ ಸಂಚಾರಕ್ಕೆ ತಡೆಯುಂಟಾದ ಪರಿಣಾಮ ಹಲವು ತಿಂಗಳಿಂದ ಸರ್ಕಾರದ ಪಡಿತರ ಈ ಗ್ರಾಮಗಳಿಗೆ ತಲುಪಿಲ್ಲ. "ನಮಗೆ ಹತ್ತಿರದ ಮಾರುಕಟ್ಟೆ ಎಂದರೆ 50 ಕಿಲೋಮೀಟರ್ ದೂರದ ಧಾರ್ಚುಲಾ. ಈ ರಸ್ತೆಯಲ್ಲಿ ಸಂಚಾರಕ್ಕೆ ತಡೆ ಉಂಟಾಗಿರುವುದರಿಂದ, ಪೂರೈಕೆ ವ್ಯತ್ಯಯವಾಗಿದ್ದು, ಸರ್ಕಾರದ ಪಡಿತರ ಕೂಡಾ ಸಿಗುತ್ತಿಲ್ಲ. ಕೂಲಿ ಅಥವಾ ಹೇಸರಗತ್ತೆಗಳ ಮೂಲಕವೂ ಆಹಾರಧಾನ್ಯಗಳನ್ನು ತರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ" ಎನ್ನುವುದು ನಭಿ ಗ್ರಾಮದ ಅಶೋಕ್ ನಬಿಯಾಲ್ ಅವರ ಹೇಳಿಕೆ.

ಪಡಿತರ ಪೂರೈಕೆಯಾದರೂ 400ಕ್ಕೂ ಹೆಚ್ಚು ಕುಟುಂಬಗಳಿಗೆ ಇದು ಸಾಕಾಗುತ್ತಿಲ್ಲ. ಪಡಿತರ ವ್ಯವಸ್ಥೆಯಲ್ಲಿ ಸರ್ಕಾರ 2 ಕೆಜಿ ಅಕ್ಕಿ ಹಾಗೂ 5 ಕೆಜಿ ಗೋಧಿ ನೀಡುತ್ತದೆ. ಇದು ಸಾಲದು. ಇದರಿಂದಾಗಿ ನೇಪಾಳದ ಟಿಂಕರ್ ಮತ್ತು ಚಂಗ್ರು ಗ್ರಾಮದಿಂದ ನಾವು ಖರೀದಿಸುವುದು ಅನಿವಾರ್ಯ. ಈ ಗ್ರಾಮಗಳಿಗೆ ಚೀನಾದ ತಕ್ಲಕೋಟ್ ಬಜಾರ್‌ನಿಂದ ಸರಕು ಬರುತ್ತದೆ ಎಂದು ನಬಿಯಾಲ್ ವಿವರಿಸುತ್ತಾರೆ.

ಧಾರ್ಚುಲಾ ಮಾರುಕಟ್ಟೆಯಲ್ಲಿ ಸಿಗುವ ಭಾರತೀಯ ವಸ್ತುಗಳಿಗಿಂತ ಚೀನಾದ ಮಾಲು ಅಗ್ಗ ಎನ್ನುವುದು ಗ್ರಾಮಸ್ಥರ ಅನಿಸಿಕೆ. ಧಾರ್ಚುಲಾ ಮಾರುಕಟ್ಟೆಯಿಂದ ಖರೀದಿಸುವ ವಸ್ತುಗಳು ಗ್ರಾಮಕ್ಕೆ ತಲುಪಬೇಕಾದರೆ ಪ್ರತಿ ಕೆಜಿಗೆ 30 ರಿಂದ 40 ರೂಪಾಯಿ ವೆಚ್ಚವಾಗುತ್ತದೆ. 30 ರೂಪಾಯಿಯ ಉಪ್ಪು ನಮ್ಮ ಗ್ರಾಮ ತಲುಪುವಾಗ 70 ರೂಪಾಯಿ ಆಗಿರುತ್ತದೆ ಎಂದು ಹೇಳುತ್ತಾರೆ.

ಕಳೆದ ವರ್ಷ ಈ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ನಜಾಂಗ್ ಹಾಗೂ ಲಖನ್‌ಪುರ ಪ್ರದೇಶದಲ್ಲಿ ಇಡೀ ಮಾರ್ಗ ಕೊಚ್ಚಿಕೊಂಡು ಹೋಗಿದೆ. ಈ ಸಮಸ್ಯೆ ಬಗ್ಗೆ ಸರ್ಕಾರದ ಗಮನ ಸೆಳೆದಾಗ ಉಪವಿಭಾಗಾಧಿಕಾರಿ ಆರ್.ಕೆ.ಪಾಂಡೆಯವರಿಂದ, "ಪಡಿತರ ಹೆಚ್ಚಿಸಬೇಕು ಎಂಬ ಗ್ರಾಮಸ್ಥರ ಬೇಡಿಕೆಯನ್ನು ನಾವು ಸರ್ಕಾರದ ಗಮನಕ್ಕೆ ತಂದಿದ್ದೇವೆ. ಆದರೆ ಸರ್ಕಾರ ಅದನ್ನು ಒಪ್ಪಿಕೊಂಡಿಲ್ಲ" ಎಂಬ ಉತ್ತರ ಬಂತು. ಗ್ರಾಮಗಳ ಸಂಪರ್ಕ ವ್ಯವಸ್ಥೆ ಸುಧಾರಿಸಿದ ತಕ್ಷಣ ಪರಿಸ್ಥಿತಿ ಬದಲಾಗಲಿದೆ ಎಂದು ಜಿಲ್ಲಾಧಿಕಾರಿ ಸಿ.ರವಿಶಂಕರ್ ಆಶ್ವಾಸನೆ ನೀಡುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News