ಡಾಲರ್‌ನೆದುರು ಮೊದಲ ಬಾರಿಗೆ 74ರ ಗಡಿ ಮೀರಿ ಪತನಗೊಂಡ ರೂಪಾಯಿ

Update: 2018-10-05 14:16 GMT

ಮುಂಬೈ,ಅ.5: ಅಮೆರಿಕದ ಡಾಲರ್‌ನೆದುರು ದಿನೇದಿನೇ ಪತನಗೊಳ್ಳುತ್ತ ಹೊಸ ಹೊಸ ಸಾರ್ವಕಾಲಿಕ ದಾಖಲೆಗಳನ್ನು ಸ್ಥಾಪಿಸುತ್ತಲೇ ಇರುವ ರೂಪಾಯಿ ಶುಕ್ರವಾರ ಆರ್‌ಬಿಐ ರೆಪೋ ದರವನ್ನು ಹೆಚ್ಚಿಸುತ್ತದೆ ಎಂಬ ನಿರೀಕ್ಷೆ ಹುಸಿಯಾದ ಬಳಿಕ ಇದೇ ಮೊದಲ ಬಾರಿಗೆ 74ರ ಗಡಿಯನ್ನು ಭೇದಿಸಿ ಮತ್ತೊಂದು ಸಾರ್ವಕಾಲಿಕ ಕನಿಷ್ಠಮಟ್ಟದ ದಾಖಲೆಯನ್ನು ಸೃಷ್ಟಿಸಿತು. ಬಳಿಕ ಚೇತರಿಸಿಕೊಂಡಿದ್ದು ಸದ್ಯ 73.87ರಲ್ಲಿ ನಿಂತಿದೆ. ಅತ್ತ ಶೇರು ಮಾರುಕಟ್ಟೆಗಳಲ್ಲಿಯೂ ಭಾರೀ ಕುಸಿತವುಂಟಾಗಿದ್ದು,ಹೂಡಿಕೆದಾರರಿಗೆ ಲಕ್ಷಾಂತರ ಕೋಟಿ ರೂ.ಗಳ ನಷ್ಟವುಂಟಾಗಿದೆ.

ಆರ್‌ಬಿಐ ತನ್ನ ದ್ವೈಮಾಸಿಕ ಹಣಕಾಸು ನೀತಿಯನ್ನು ಪ್ರಕಟಿಸಿದ ಬೆನ್ನಿಗೇ ರೂಪಾಯಿ 55 ಪೈಸೆಗಳನ್ನು ಕಳೆದುಕೊಂಡು 74.13ಕ್ಕೆ ಕುಸಿದಿತ್ತು.

ವಿದೇಶಿ ಬಂಡವಾಳದ ನಿರಂತರ ಹೊರಹರಿವು ಮತ್ತು ಏರುತ್ತಿರುವ ಜಾಗತಿಕ ಕಚ್ಚಾತೈಲ ಬೆಲೆಗಳಿಂದಾಗಿ ಚಾಲ್ತಿ ಖಾತೆಯ ಕೊರತೆ ಹೆಚ್ಚುತ್ತಲೇ ಇರುವ ಹಿನ್ನೆಲೆಯಲ್ಲಿ ಹೂಡಿಕೆದಾರರಲ್ಲಿ ಕಳವಳ ಮುಂದುವರಿದಿದೆ.

ಅಂತರಬ್ಯಾಂಕ್ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಗುರುವಾರ 73.58ಕ್ಕೆ ಮುಕ್ತಾಯಗೊಂಡಿದ್ದ ರೂಪಾಯಿ ಶುಕ್ರವಾರ ಬೆಳಿಗ್ಗೆ ಎರಡು ಪೈಸೆಗಳ ಏರಿಕೆಯೊಂದಿಗೆ 73.56ರಲ್ಲಿ ಆರಂಭಗೊಂಡಿತ್ತು. ಆದರೆ ಈ ಚೇತರಿಕೆಯನ್ನು ಉಳಿಸಿಕೊಳ್ಳುವಲ್ಲಿ ವಿಫಲಗೊಂಡ ಅದು 74ರ ಗಡಿಯನ್ನೂ ದಾಟಿ ಕುಸಿದಿತ್ತು.

ಗುರುವಾರ ರುಪಾಯಿ ಡಾಲರ್‌ನೆದುರು 24 ಪೈಸೆಗಳನ್ನು ಕಳೆದುಕೊಂಡಿತ್ತು.

ಬಾಂಬೆ ಶೇರು ವಿನಿಮಯ ಕೇಂದ್ರ(ಬಿಎಸ್‌ಇ)ದ ಸೂಚ್ಯಂಕ ಸೆನ್ಸೆಕ್ಸ್ 792.17 ಅಂಶಗಳ ಕುಸಿತದೊಂದಿಗೆ 34,376.99ರಲ್ಲಿ ಅಂತ್ಯಗೊಂಡಿದ್ದರೆ,ರಾಷ್ಟ್ರೀಯ ಶೇರು ವಿನಿಮಯ ಕೇಂದ್ರ(ಎನ್‌ಎಸ್‌ಇ)ದ ಸೂಚ್ಯಂಕ ನಿಫ್ಟಿ 282.8 ಅಂಶಗಳ ಕುಸಿತದೊಂದಿಗೆ 10,316.45ಕ್ಕೆ ದಿನದಾಟವನ್ನು ಮುಗಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News