ಕಸ್ತೂರಿ ರಂಗನ್ ವರದಿ ಮಲೆನಾಡಿಗೆ ಮರಣ ಶಾಸನ: ಚಿಂತಕ ಕಲ್ಕುಳಿ ವಿಠಲ್ ಹೆಗ್ಡೆ

Update: 2018-10-05 11:52 GMT

ಚಿಕ್ಕಮಗಳೂರು, ಅ.5: ಕೇರಳ ರಾಜ್ಯ ಹಾಗೂ ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗೆ ಸಂಭವಿಸಿದ ಪ್ರಾಕೃತಿಕ ವಿಕೋಪಗಳ ಆಧಾರದ ಮೇಲೆ ಸುಪ್ರೀಂ ಕೋರ್ಟ್ ಕಸ್ತೂರಿ ರಂಗನ್ ವರದಿಯನ್ನು ಯಥಾವತ್ ಜಾರಿ ಮಾಡಲು ಕೇಂದ್ರ ಸರಕಾರಕ್ಕೆ ಆದೇಶ ನೀಡಿದೆ. ಈ ವರದಿ ಮಲೆನಾಡಿಗೆ ಮರಣ ಶಾಸನವಾಗಿದ್ದು, ಅವೈಜ್ಞಾನಿಕ, ಅವಾಸ್ತವಿಕವೂ ಆಗಿರುವ ವರದಿ ಜಾರಿಯ ಆದೇಶದ ವಿರುದ್ಧ ನ್ಯಾಯಾಲಕ್ಕೆ ಮೇಲ್ಮನವಿ ಸಲ್ಲಿಸಲಾಗುವುದು ಎಂದು ಪರಿಸರ ಹೋರಾಟಗಾರ ಹಾಗೂ ಚಿಂತಕ ಕಲ್ಕುಳಿ ವಿಠಲ್‍ಹೆಗ್ಡೆ ತಿಳಿಸಿದ್ದಾರೆ. 

ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇರಳ ಹಾಗೂ ಕೊಡಗು ಪ್ರಾಕೃತಿಕ ವಿಕೋಪದ ಹಿನ್ನೆಲೆಯಲ್ಲಿ ಗೋವಾ ಫೌಂಡೇಶನ್ ಎಂಬ ಎನ್‍ಜಿಒ ಗಾಡ್ಗಿಳ್ ವರದಿ ಜಾರಿಯ ನಿರ್ಲಕ್ಷ್ಯದಿಂದ ಪಶ್ಚಿಮ ಘಟ್ಟದಲ್ಲಿ ಪ್ರಾಕೃತಿಕ ಅಸಮತೋಲನ ಉಂಟಾಗಿದೆ ಎಂದು ಸುಪ್ರೀಕೋರ್ಟ್‍ನಲ್ಲಿ ಕಸ್ತೂರಿ ರಂಗನ್ ವರದಿ ಜಾರಿಗೆ ದಾವೆ ಹೂಡಿತ್ತು. ವರದಿ ಜಾರಿಯಿಂದ ಜನಜೀವನದ ಮೇಲಾಗುವ ಪರಿಣಾಮಗಳ ಬಗ್ಗೆ ರಾಜ್ಯ ಸರಕಾರ ಹಾಗೂ ವಿವಿಧ ಸಂಘಸಂಸ್ಥೆಗಳು ಸಲ್ಲಿಸಿದ್ದ ಮನವಿಗಳನ್ನು ನ್ಯಾಯಾಲಯ ಪರಿಗಣಿಸಿಲ್ಲ. ಕೇಂದ್ರ ಸರಕಾರ ರಾಜ್ಯಗಳ ಅಭಿಪ್ರಾಯವನ್ನೂ ಪಡೆಯದೇ ಇಲ್ಲಿನ ಜನರ ಪರವಾಗಿ ವಾದ ಮಂಡಿಸಲು ನಿರ್ಲಕ್ಷ್ಯವಹಿಸಿತು. ಇದರ ಫಲವಾಗಿ 6 ತಿಂಗಳ ಒಳಗೆ ವರದಿಯ ಯಥಾವತ್ ಜಾರಿಗೆ ಕೇಂದ್ರ ಸರಕಾರಕ್ಕೆ ನ್ಯಾಯಾಲಯ ಆದೇಶ ನೀಡಿದೆ ಎಂದರು.

ಚಿಕ್ಕಮಗಳೂರು ತಾಲೂಕಿನ 27 ಗ್ರಾಮಗಳು, ಮೂಡಿಗೆರೆ ತಾಲೂಕಿನ 27, ಕೊಪ್ಪ ತಾಲೂಕಿನ 32, ಎನ್.ಆರ್.ಪುರ ತಾಲೂಕಿನ 35 ಹಾಗೂ ಶೃಂಗೇರಿ ತಾಲೂಕಿನ 26 ಗ್ರಾಮಗಳು ಕಸ್ತೂರಿ ರಂಗನ್ ವರದಿ ವ್ಯಾಪ್ತಿಗೆ ಒಳಪಡಲಿವೆ. ಈ ಗ್ರಾಮಗಳಲ್ಲಿ ವರದಿ ಜಾರಿಯಿಂದಾಗಿ ಜನರ ಬದುಕು ಅತಂತ್ರವಾಗಲಿದ್ದು, ಜನರ ಹಾಗೂ ರೈತರ ಬದುಕುವ ಹಕ್ಕನ್ನೇ ಕಸಿದುಕೊಳ್ಳಲಿದೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ವರದಿಯಲ್ಲಿ ಜನರ ಬದುಕಿಗೆ ನಿರ್ಬಂಧ ಹೇರಲಾಗಿದ್ದು, ಮಲೆನಾಡಿನ ಕಾಫಿ, ಅಡಿಕೆ, ಕಾಳು ಮೆಣಸು ಕೃಷಿಗೆ ಹಿನ್ನಡೆಯಾಗಲಿದೆ ಎಂದರು.

ಮಲೆನಾಡು ಕಾಫಿ, ಅಡಿಕೆ ಬೆಳೆಗಳ ತವರೂರಾಗಿದ್ದು, ಕೊಳೆ ರೋಗದಿಂದ ಈ ಬೆಳೆಗಳ ರಕ್ಷಣೆಗೆ ಬೋಡೋ ರಾಸಾಯನಿಕ ಸಿಂಪಡಣೆ ಅತ್ಯಗತ್ಯ. ಆದರೆ ವರದಿ ಜಾರಿಯಾದಲ್ಲಿ ಕಾಫಿ, ಅಡಿಕೆ ಬೆಳೆಗಳಿಗೆ ಬೋಡೋ ದ್ರಾವಣ ಸಂಪಡಣೆಗೆ ನಿಷೇಧ ಬೀಳಲಿದೆ. ಈ ಗ್ರಾಮಗಳ ವ್ಯಾಪ್ತಿಯಲ್ಲಿ ಮನೆಗಳ ನಿರ್ಮಾಣ, ಮರಳು ಸಂಗ್ರಹಣೆ, ಬೇಸಿಗೆಯಲ್ಲಿ ಕೃಷಿಗೆ ಹಳ್ಳ, ತೊರೆಗಳ ನೀರಿನ ಬಳಕೆಗೆ ಕಡಿವಾಣ ಬೀಳಲಿದೆ ಎಂದ ಅವರು, ಇದಕ್ಕೆ ಪರಿಸರ ಇಲಾಖೆಯ ಅನುಮತಿ ಅತ್ಯಗತ್ಯವಾಗಲಿದೆ. ಅಡಿಕೆ ಬೆಳೆ ರಕ್ಷಣೆಗೆ ಬೋಡೊ ದ್ರಾವಣ ಬಳಕೆಗೆ ನಿಷೇಧ ಹೇರಿರುವ ವರದಿ ಅದಕ್ಕೆ ಪರ್ಯಾಯ ಪರಿಹಾರ ಕ್ರಮಗಳನ್ನು ತಿಳಿಸಿಲ್ಲ ಎಂದು ಆರೋಪಿಸಿದರು.

ಕಸ್ತೂರಿ ರಂಗನ್ ವರದಿ ಅವೈಜ್ಞಾನಿಕ, ಅವಾಸ್ತವಿಕ ವರದಿಯಾಗಿದೆ ಎಂದು ಆರೋಪಿಸಿದ ಅವರು, ವರದಿಯನ್ನು ಎಸಿ ಕೊಠಡಿಯಲ್ಲಿ ಕುಳಿತು ಸಿದ್ಧಪಡಿಸಲಾಗಿದ್ದು, ವರದಿಯಲ್ಲಿ ಜನರ ಬದುಕಿನ ನೈಜ ಚಿತ್ರಣ, ಸಮಸ್ಯೆಗಳ ವರದಿ ಮಾಡಿಲ್ಲ. ಮೂಡಿಗೆರೆ ತಾಲೂಕಿನ 3-4 ಗ್ರಾಮಗಳಲ್ಲಿ 100ಕ್ಕಿಂತ ಕಡಿಮೆ ಜನಸಂಖ್ಯೆ ಇದೆ ಎಂದು ವರದಿಯಲ್ಲಿ ನಮೂದಿಸಲಾಗಿದೆ. ಆದರೆ 56 ಗ್ರಾಮಗಳಲ್ಲಿ ನೂರಕ್ಕಿಂತ ಕಡಿಮೆ ಜನಸಂಖ್ಯೆ ಇರುವ ಬಗ್ಗೆ ದಾಖಲೆಗಳಿವೆ. ವರದಿಯಲ್ಲಿ ಇಂತಹ ಅವಾಸ್ತವಿಕ ಅಂಶಗಳನ್ನು ನಮೂದಿಸಲಾಗಿದೆ. ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ ಪರಿಸರ, ವನ್ಯಜೀವಿಗಳೊಂದಿಗೆ ಸಹಬಾಳ್ವೆ ನಡೆಸುತ್ತಿರುವ ಜನರ ಬದುಕುವ ಹಕ್ಕಿನ ಬಗ್ಗೆ ವರದಿಯಲ್ಲಿ ಸ್ಪಷ್ಟತೆ ನೀಡಿಲ್ಲ ಎಂದು ಅವರು ದೂರಿದರು.

ಕೇಂದ್ರ ಸರಕಾರ ವರದಿ ಜಾರಿಯ ಪರಿಣಾಮಗಳ ಬಗ್ಗೆ ರಾಜ್ಯ ಸರಕಾರಗಳಿಂದ ಅಭಿಪ್ರಾಯ ಸಂಗ್ರಹಿಸಿ ನ್ಯಾಯಾಲಯಕ್ಕೆ ಮನವರಿಕೆ ಮಾಡಬೇಕಿತ್ತು. ಆದರೆ ಕೇಂದ್ರ ಸರಕಾರ ಇದಕ್ಕೆ ಮುಂದಾಗದೇ ವರದಿ ಜಾರಿಗೆ ತುದಿಗಾಲಲ್ಲಿ ನಿಂತಿದೆ ಎಂದು ಆರೋಪಿಸಿದ ಅವರು, ರಾಜ್ಯದ ಸಂಸದರು ಜನರ ಮುಂದೆ ವರದಿ ಜಾರಿಯನ್ನು ವಿರೋಧಿಸಿದ್ದಾರೆ. ಆದರೆ ಈ ಸಂಬಂಧದ ನಿರ್ಣಾಯಕ ಸಭೆಯಲ್ಲಿ ಸಂಸದರು ಭಾಗವಹಿಸಿದೇ ಮಲೆನಾಡಿನ ಜನರಿಗೆ ದ್ರೋಹ ಬಗೆದಿದ್ದಾರೆಂದು ವಿಠಲ್‍ಹೆಗ್ಡೆ ಟೀಕಿಸಿದರು.

ಈ ವರದಿ ಜಾರಿಯಿಂದ ಬಹುರಾಷ್ಟೀಯ ಕಂಪೆನಿಗಳಿಗೆ ಮಾತ್ರ ಅನುಕೂಲವಾಗಲಿದ್ದು, ಮಲೆನಾಡಿಗೆ ತೂಗುಕತ್ತಿಯಾಗಲಿದೆ ಎಂದು ಎಚ್ಚರಿಸಿದ ಅವರು, ಎಂಎನ್‍ಸಿ ಕಂಪೆನಿಗಳ ಸಿಎಸ್‍ಆರ್ ನಿಧಿಯ ಫಲಾನುಭವಿಗಳಾಗಿರುವ ಗೋವಾ ಫೌಂಡೇಶನ್‍ನಂತಹ ಪರಿಸರ ಸಂಘಟನೆಗಳು ಈ ವರದಿ ಜಾರಿಗೆ ಪಣ ತೊಟ್ಟಿವೆ. ಇಲ್ಲಿನ ಪರಿಸರ, ವನ್ಯಜೀವಿಗಳನ್ನೇ ಬಂಡವಾಳ ಮಾಡಿಕೊಂಡು ಪ್ರವಾಸೋದ್ಯಮದ ಹೆಸರಿನಲ್ಲಿ ಇಂತಹ ಅವೈಜ್ಞಾನಿಕ ವರದಿ ಜಾರಿ ಮಾಡಿಸುತ್ತಿವೆ. ಆದರೆ ಇದೇ ಪರಿಸರದ ಭಾಗವಾಗಿರುವ ಮನುಷ್ಯರನ್ನು ಕಾಡಿನಿಂದ ಹೊರಗೆ ಹಾಕಲು ಹುನ್ನಾರ ನಡೆಸಿವೆ ಎಂದು ಆರೋಪಿಸಿದ ಅವರು, ಜನರಿಲ್ಲದ ಮಲೆನಾಡಿನ ಕಲ್ಪನೆ ಅಸಾಧ್ಯವಾಗಿದ್ದು, ರಾಜ್ಯ ಹಾಗೂ ಕೇಂದ್ರ ಸರಕಾರ ಈ ಸಂಬಂಧ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿ ಜನರ ಬದುಕುವ ಹಕ್ಕನ್ನು ರಕ್ಷಿಸಬೇಕೆಂದು ಇದೇ ವೇಳೆ ಮನವಿ ಮಾಡಿದ ಅವರು, ನ್ಯಾಯಾಲಯದ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಎಚ್.ದೇರಾಜ್, ಸಾಮಾಜಿಕ ಕಾರ್ಯಕರ್ತ ಸುರೇಶ್‍ಭಟ್, ರೈತ ಸಂಘದ ದುಗ್ಗಪ್ಪಗೌಡ, ದಿಯಾಕರ್, ಗೌಸ್‍ಮೊಹಿದ್ದೀನ್, ದಸಂಸ ಮಂಜುನಾಥ್, ಜೆಡಿಎಸ್ ಮುಖಂಡ ಮಂಜಪ್ಪ, ಮೊಹಿಯುದ್ದೀನ್ ಉಪಸ್ಥಿತರಿದ್ದರು.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಈ ಹಿಂದೆ ಡಿಸಿ ಆಗಿದ್ದ ಗೋಪಾಲಕೃಷ್ಣ ಗೌಡ ಅವರು, ಸಾವಿರಾರು ಎಕರೆ ಕಂದಾಯ ಭೂಮಿಯನ್ನು ಅರಣ್ಯ ಇಲಾಖೆಗೆ ನೀಡಿದ್ದಾರೆ. ಇದರಿಂದಾಗಿ ಡೀಮ್ಸ್ ಫಾರೆಸ್ಟ್ ಸಮಸ್ಯೆ ಜಿಲ್ಲೆಯನ್ನು ಕಾಡುತ್ತಿದೆ. ಇಂತಹ ಜಾಗದಲ್ಲಿ ನೂರಾರು ರೈತರು ಸಾಗುವಳಿ ಮಾಡಿದ್ದಾರೆ. ಕೆಲವರಿಗೆ ಹಕ್ಕುಪತ್ರಗಳನ್ನೂ ವಿತರಿಸಲಾಗಿದೆ. ಡೀಮ್ಡ್ ಫಾರೆಸ್ಟ್ ನಿಂದಾಗಿ ಇಂತಹ ನೂರಾರು ರೈತರು ಭೂಮಿ ಹಕ್ಕಿನಿಂದ ವಂಚಿತರಾಗಲಿದ್ದು, ಈ ಸಂಬಂಧ ನ್ಯಾಯಾಲಯ 2 ತಿಂಗಳೊಳಗೆ ಗಡಿ ಗುರುತಿಗೆ ಆದೇಶ ನೀಡಿದ್ದು, ಇದರಿಂದಾಗಿ ಮಲೆನಾಡಿನಲ್ಲಿ ಜನರು ವಾಸಿಸುವುದೇ ಕಷ್ಟವಾಗಲಿದೆ.
- ಕಲ್ಕುಳಿ ವಿಠಲ್ ಹೆಗ್ಡೆ

ಮಲೆನಾಡಿನಲ್ಲಿ ಪರಿಸರದ ಮೇಲೆ ದೌರ್ಜನ್ಯ ನಡೆಯುತ್ತಿದ್ದರೇ ಈ ಬಗ್ಗೆ ಜನರು ತಪ್ಪನ್ನು ತಿದ್ದಿಕೊಳ್ಳಲು ಸಿದ್ಧರಿದ್ದಾರೆ. ಆದರೆ ಜನರ ವಾಸ ಹಾಗೂ ಸಣ್ಣಪುಟ್ಟ ಹೋಂಸ್ಟೇಗಳೇ ಪ್ರಾಕೃತಿಕ ವಿಕೋಪಗಳಿಗೆ ಕಾರಣ ಎಂಬ ಆರೋಪ ಸತ್ಯಕ್ಕೆ ದೂರವಾದ ಆರೋಪವಾಗಿದೆ. ಮಲೆನಾಡಿನ ಜನರ ಬದುಕಿನ ಮೇಲೆ ನ್ಯಾಯಾಲಯಗಳ ಮೂಲಕ ಪ್ರಹಾರ ನಡೆಸುವುದು ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವಂತದ್ದಾಗಿದೆ.
- ದಯಾಕರ್, ರೈತ ಮುಖಂಡ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News