ಕೊಡಗು: 2019 ಫೆ.22 ರಿಂದ ಮಾ.1ರವರೆಗೆ ಎಮ್ಮೆಮಾಡು ಉರೂಸ್

Update: 2018-10-05 12:34 GMT

ಮಡಿಕೇರಿ, ಅ.5: ಎಮ್ಮೆಮಾಡು ದರ್ಗಾ ಶರೀಫ್‍ನಲ್ಲಿ ಅಂತಿಮ ವಿಶ್ರಾಂತಿ ಪಡೆಯುತ್ತಿರುವ ಸೂಫಿ ಶಹೀದ್ (ರ) ಮತ್ತು ಸಯ್ಯಿದ್ ಹಸನ್ ಸಖಾಫ್ ಹಾಗೂ ಇನ್ನಿತರ ಔಲಿಯಾಗಳ ಹೆಸರಿನಲ್ಲಿ ವರ್ಷಂಪ್ರತಿ ನಡೆಯುವ ಉರೂಸ್ ಸಮಾರಂಭ ಮುಂದಿನ 2019 ರ ಫೆಬ್ರವರಿ 22 ರಿಂದ ಮಾರ್ಚ್ 1ರವರೆಗೆ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಎಮ್ಮೆಮಾಡು ಮುಸ್ಲಿಂ ಜಮಾಅತ್ ಪ್ರಧಾನ ಕಾರ್ಯದರ್ಶಿ ಕೆ.ಎಂ.ಹುಸೇನ್ ಸಖಾಫಿ, ಅಕ್ಟೋಬರ್ 4 ರಂದು ಜಮಾಅತ್ ಅಧ್ಯಕ್ಷ ಉಸ್ಮಾನ್ ಹಾಜಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಉರೂಸ್‍ನ ದಿನಾಂಕವನ್ನು ನಿಗದಿಪಡಿಸಲಾಗಿದೆ ಎಂದರು. ಒಂದು ವಾರಗಳ ಕಾಲ ನಡೆಯಲಿರುವ ಉರೂಸ್‍ನಲ್ಲಿ ಕರ್ನಾಟಕ ಮತ್ತು ಕೇರಳ ರಾಜ್ಯಗಳ ಪ್ರಮುಖ ಧಾರ್ಮಿಕ ಪಂಡಿತರು, ಸಾದಾತ್‍ಗಳು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ರಸ್ತೆ ದುರಸ್ತಿಯಾಗಲಿ
ರಾಜ್ಯ ಹಾಗೂ ಹೊರ ರಾಜ್ಯಗಳಲ್ಲೂ ಹೆಸರುವಾಸಿಯಾಗಿರುವ ಎಮ್ಮೆಮಾಡು ಪವಿತ್ರ ಕ್ಷೇತ್ರಕ್ಕೆ ತೆರಳುವ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಉರೂಸ್ ಸಂದರ್ಭದಲ್ಲಾದರೂ ರಸ್ತೆ ಅಭಿವೃದ್ಧಿಯಾಗಲಿದೆ ಎಂದು ಕೆ.ಎಂ.ಹುಸೇನ್ ಸಖಾಫಿ ವಿಶ್ವಾಸ ವ್ಯಕ್ತಪಡಿಸಿದರು. ಈ ಮಾರ್ಗದಲ್ಲಿ ಸರಕಾರಿ ಬಸ್‍ಗಳೇ ಸಂಚರಿಸುತ್ತಿಲ್ಲವೆಂದು ಬೇಸರ ವ್ಯಕ್ತಪಡಿಸಿದ ಅವರು ಜಿಲ್ಲಾಧಿಕಾರಿಗಳು ಈಗಾಗಲೇ ಸ್ಥಳ ಪರಿಶೀಲನೆ ನಡೆಸಿ ಸೂಕ್ತ ಕ್ರಮದ ಭರವಸೆ ನೀಡಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಧರ್ಮಗುರು ಸಯ್ಯಿದ್ ಇಲಿಯಾಸ್ ತಂಙಳ್, ಜಮಾಅತ್ ಅಧ್ಯಕ್ಷ ಪಿ.ಎಂ. ಉಸ್ಮಾನ್ ಹಾಜಿ ಹಾಗೂ ಸದಸ್ಯ ಪಿ.ಎಂ.ಹಂಝ ಉಪಸ್ಥಿತರಿದ್ದರು. 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News