ಅತ್ಯಾಧುನಿಕ ಎಸ್-400 ಟ್ರಯಂಫ್ ಕ್ಷಿಪಣಿ ಖರೀದಿ ಸಹಿತ ಐತಿಹಾಸಿಕ ಒಪ್ಪಂದಗಳಿಗೆ ರಶ್ಯ- ಭಾರತ ಸಹಿ

Update: 2018-10-05 15:09 GMT

ಹೊಸದಿಲ್ಲಿ, ಅ.5: ವಿಶ್ವದ ಅತ್ಯಾಧುನಿಕ ಕ್ಷಿಪಣಿ ವ್ಯವಸ್ಥೆ ಎಸ್-400 ಟ್ರಯಂಫ್ ಖರೀದಿ ಸೇರಿದಂತೆ ಹಲವು ಮಹತ್ವದ ಒಪ್ಪಂದಗಳಿಗೆ ರಶ್ಯ ಮತ್ತು ಭಾರತ ಸಹಿ ಹಾಕಿವೆ. ರಶ್ಯದಿಂದ ಶಸ್ತ್ರ ಖರೀದಿಸಿದರೆ ದಿಗ್ಬಂಧನ ವಿಧಿಸುತ್ತೇನೆ ಎಂಬ ಅಮೆರಿಕದ ಬೆದರಿಕೆಯ ಮಧ್ಯೆಯೇ ರಶ್ಯದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹಾಗೂ ಭಾರತದ ಪ್ರಧಾನಿ ನರೇಂದ್ರ ಮೋದಿ ಮಧ್ಯೆ ನಡೆದ ದ್ವಿಪಕ್ಷೀಯ ಮಾತುಕತೆಯ ಬಳಿಕ ಅಣುಶಕ್ತಿ, ಅಂತರಿಕ್ಷ ಸಹಕಾರ ಸೇರಿದಂತೆ ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ.

ರಶ್ಯವು ಈ ಹಿಂದಿನಿಂದಲೂ ಭಾರತದ ಅಭಿವೃದ್ಧಿಯ ಯಶೋಗಾಥೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ ಪ್ರಧಾನಿ ಮೋದಿ ಹೇಳಿದ್ದಾರೆ. ಕ್ಷಿಪ್ರವಾಗಿ ಬದಲಾಗುತ್ತಿರುವ ವಿಶ್ವದಲ್ಲಿ ಉಭಯ ದೇಶಗಳ ನಡುವಿನ ಸಂಬಂಧ ವೇಗವಾಗಿ ಅಭಿವೃದ್ಧಿ ಹೊಂದಿದೆ. ಕಾಲ ಕಳೆದಂತೆಲ್ಲಾ ಎರಡೂ ದೇಶಗಳ ನಡುವಿನ ಸ್ನೇಹ ಸಂಬಂಧ ಸಶಕ್ತವಾಗುತ್ತಾ ಸಾಗಿದೆ ಎಂದು ಪುಟಿನ್ ಮತ್ತು ಮೋದಿ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಭಾರತವು ಸುಮಾರು 40 ಸಾವಿರ ಕೋಟಿ ರೂ. ಮೊತ್ತದಲ್ಲಿ ಐದು ಎಸ್-400 ಟ್ರಯಂಫ್ ಕ್ಷಿಪಣಿ ಖರೀದಿಸಲಿದೆ. ಸರಕಾರ ಅನುಮೋದಿಸಿದರೆ ಕ್ಷಿಪಣಿ ವ್ಯವಸ್ಥೆ 24 ಗಂಟೆಯೊಳಗೆ ಸರಬರಾಜು ಆಗಲಿದೆ ಎಂದು ವಾಯುಪಡೆಯ ಮುಖ್ಯಸ್ಥ ಬಿಎಸ್ ಧನೋವ ಸುದ್ದಿಗಾರರಿಗೆ ತಿಳಿಸಿದ್ದಾರೆ. ಕ್ಷಿಪಣಿ ಮತ್ತು ಯುದ್ಧವಿಮಾನಗಳನ್ನು ಹೊರಡಿಸಬಲ್ಲ ದೂರವ್ಯಾಪ್ತಿಯ ವಿಶ್ವದ ಅತ್ಯಾಧುನಿಕ ರಕ್ಷಣಾ ವ್ಯವಸ್ಥೆಯಾಗಿರುವ ಎಸ್-400 ಟ್ರಯಂಫ್ ಕ್ಷಿಪಣಿಯನ್ನು 2014ರಲ್ಲಿ ಚೀನಾ ಖರೀದಿಸಿದೆ. ಇದೀಗ ಈ ಕ್ಷಿಪಣಿಯನ್ನು ಖರೀದಿಸಿರುವ ಎರಡನೇ ರಾಷ್ಟ್ರವಾಗಿದೆ ಭಾರತ.

 ಭಾರತದಲ್ಲಿ ಆರು ಪರಮಾಣು ಯೋಜನೆಗಳ ಅಭಿವೃದ್ಧಿ, ರೈಲ್ವೇ ವ್ಯವಸ್ಥೆಯ ಅಭಿವೃದ್ಧಿಯಲ್ಲಿ ಸಹಾಯ, ಭಾರತದ ಪ್ರಪ್ರಥಮ ಮಾನವ ಸಹಿತ ಅಂತರಿಕ್ಷಯಾನ, 2022ರಲ್ಲಿ ಉದ್ದೇಶಿಸಲಾಗಿರುವ ‘ಗಗನಯಾನ’ದಲ್ಲಿ ಪಾಲ್ಗೊಳ್ಳುವ ಅಂತರಿಕ್ಷ ಯಾತ್ರಿಗಳಿಗೆ ತರಬೇತಿ, ಭಯೋತ್ಪಾದನೆ ಮತ್ತು ಮಾದಕ ವಸ್ತು ಸಾಗಣೆಯಂತಹ ಸಮಸ್ಯೆ ನಿವಾರಿಸಲು ಸಹಾಯ ಸೇರಿದಂತೆ ಹಲವು ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಉಭಯ ನಾಯಕರ ಮಧ್ಯೆ ಈ ವರ್ಷ ನಡೆದಿರುವ ಮೂರನೇ ಸಭೆ ಇದಾಗಿದೆ. ರಶ್ಯಾದ ನಿಯೋಗದಲ್ಲಿ ಅಧ್ಯಕ್ಷ ಪುಟಿನ್ ಜೊತೆ ಉಪಪ್ರಧಾನಿ ಯೂರಿ ಬೊರಿಸೋವ್, ವಿದೇಶ ಸಚಿವ ಸೆರ್ಗೈ ಲವ್ರೋವ್ ಹಾಗೂ ಉದ್ದಿಮೆ ಮತ್ತು ವ್ಯಾಪಾರ ಸಚಿವ ಡೆನಿಸ್ ಮಂಟುರೋವ್ ಇದ್ದರು.

ಮಿತ್ರರ ರಕ್ಷಣಾ ಸಾಮರ್ಥ್ಯಕ್ಕೆ ಧಕ್ಕೆ ತರುವ ಉದ್ದೇಶವಿಲ್ಲ

ಅಮೆರಿಕ ಪ್ರತಿಕ್ರಿಯೆ ರಶ್ಯದ ವಿರುದ್ಧ ದಿಗ್ಬಂಧನ ವಿಧಿಸುವ ಉದ್ದೇಶ ತನ್ನ ಮಿತ್ರ ಅಥವಾ ಸಹಭಾಗಿ ರಾಷ್ಟ್ರಗಳ ರಕ್ಷಣಾ ಸಾಮರ್ಥ್ಯಕ್ಕೆ ಧಕ್ಕೆ ತರುವುದಲ್ಲ ಎಂದು ಅಮೆರಿಕ ಪ್ರತಿಕ್ರಿಯಿಸಿದೆ. ರಶ್ಯದ ದುರುದ್ದೇಶದ ವರ್ತನೆಗೆ ದಂಡ ವಿಧಿಸುವ ಉದ್ದೇಶ ತನ್ನದಾಗಿದೆ ಎಂದು ತಿಳಿಸಿರುವ ಅಮೆರಿಕ ವ್ಯವಹಾರದಿಂದ ವ್ಯವಹಾರದ ಆಧಾರದಲ್ಲಿ ದಿಗ್ಭಂಧನ ತೆರವುಗೊಳಿಸುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಸ್ಪಷ್ಟಪಡಿಸಿದೆ.

ಆದರೆ ದಿಗ್ಭಂಧನ ತೆರವುಗೊಳಿಸುವುದಕ್ಕೆ ಕಠಿಣ ಮಾನದಂಡಗಳಿವೆ ಎಂದು ಭಾರತದಲ್ಲಿರುವ ಅಮೆರಿಕ ದೂತಾವಾಸದ ವಕ್ತಾರರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News