ಅಲನ್ ಡೊನಾಲ್ಡ್ ದಾಖಲೆ ಮುರಿದ ಅಶ್ವಿನ್

Update: 2018-10-06 18:49 GMT

ರಾಜ್‌ಕೋಟ್, ಅ.6: ಭಾರತದ ಪ್ರಮುಖ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಗರಿಷ್ಠ ವಿಕೆಟ್ ಪಡೆದವರ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕದ ವೇಗದ ಬೌಲರ್ ಅಲನ್ ಡೊನಾಲ್ಡ್ ದಾಖಲೆ ಮುರಿದರು.

 ವೆಸ್ಟ್‌ಇಂಡೀಸ್ ವಿರುದ್ಧ ಮೊದಲ ಟೆಸ್ಟ್‌ನ ಮೂರನೇ ದಿನವಾದ ಶನಿವಾರ ಒಟ್ಟು 332 ವಿಕೆಟ್‌ಗಳನ್ನು ಪಡೆದ ಅಶ್ವಿನ್ ತನ್ನದೇ ಶೈಲಿಯಲ್ಲಿ ಡೊನಾಲ್ಡ್ ದಾಖಲೆಯನ್ನು(330 ವಿಕೆಟ್) ಹಿಂದಿಕ್ಕಿದರು.

ಅಶ್ವಿನ್ ಪಂದ್ಯದಲ್ಲಿ ಒಟ್ಟು 6 ವಿಕೆಟ್‌ಗಳನ್ನು ಪಡೆದು ದ.ಆಫ್ರಿಕ ದಂತಕತೆ ಡೊನಾಲ್ಡ್ ದಾಖಲೆಯನ್ನು ಪತನಗೊಳಿಸಿದರು. ಅಶ್ವಿನ್ ತನ್ನ 118ನೇ ಇನಿಂಗ್ಸ್ ನಲ್ಲಿ ಈ ಸಾಧನೆ ಮಾಡಿದರು. ಅಶ್ವಿನ್ ವಿಂಡೀಸ್‌ನ ಮೊದಲ ಇನಿಂಗ್ಸ್‌ನಲ್ಲಿ ನಾಲ್ಕು ವಿಕೆಟ್‌ಗಳನ್ನು ಉರುಳಿಸಿದರು. ಆಗ ಡೊನಾಲ್ಡ್ ಅವರ ಗರಿಷ್ಠ ವಿಕೆಟ್ ಸಾಧನೆಯನ್ನು ಹಿಂದಿಕ್ಕಲು ಅಶ್ವಿನ್‌ಗೆ ಎರಡನೇ ಇನಿಂಗ್ಸ್‌ನಲ್ಲಿ ಒಂದು ವಿಕೆಟ್ ಅಗತ್ಯವಿತ್ತು. ಎರಡನೇ ಇನಿಂಗ್ಸ್‌ನಲ್ಲಿ ವಿಂಡೀಸ್ ನಾಯಕ ಕಾರ್ಲೊಸ್ ಬ್ರಾತ್‌ವೇಟ್ ವಿಕೆಟ್ ಪಡೆದ ಅಶ್ವಿನ್ ಅವರು ಡೊನಾಲ್ಡ್ ದಾಖಲೆಯನ್ನು ಮುರಿದರು. ಅಶ್ವಿನ್ ಇದೀಗ ಗರಿಷ್ಠ ಟೆಸ್ಟ್ ವಿಕೆಟ್ ಪಡೆದವರ ಬೌಲರ್‌ಗಳ ಪಟ್ಟಿಯಲ್ಲಿ 24ನೇ ಸ್ಥಾನದಲ್ಲಿದ್ದಾರೆ. ಅನಿಲ್ ಕುಂಬ್ಳೆ(619), ಕಪಿಲ್‌ದೇವ್(434) ಹಾಗೂ ಹರ್ಭಜನ್ ಸಿಂಗ್(417)ಬಳಿಕ ಗರಿಷ್ಠ ವಿಕೆಟ್‌ಗಳನ್ನು ಪಡೆದ ಭಾರತದ ನಾಲ್ಕನೇ ಬೌಲರ್ ಎನಿಸಿಕೊಂಡಿದ್ದಾರೆ. ಸಾರ್ವಕಾಲಿಕ ಗರಿಷ್ಠ ವಿಕೆಟ್ ಪಡೆದ ಸ್ಪಿನ್ ಬೌಲರ್‌ಗಳ ಪಟ್ಟಿಯಲ್ಲಿ ಅಶ್ವಿನ್ ಏಳನೇ ಸ್ಥಾನದಲ್ಲಿದ್ದಾರೆ. ಒಟ್ಟು 800 ವಿಕೆಟ್‌ಗಳನ್ನು ಪಡೆದಿರುವ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.

ಹರ್ಭಜನ್ ದಾಖಲೆ ಸರಿಗಟ್ಟಿದ ಆರ್. ಅಶ್ವಿನ್​

ತನ್ನ ಯಶಸ್ವಿ ವೃತ್ತಿಜೀವನದಲ್ಲಿ ಮತ್ತೊಂದು ಸಾಧನೆ ಮಾಡಿದ ಆರ್.ಅಶ್ವಿನ್ ಟೆಸ್ಟ್ ನಲ್ಲಿ 42ನೇ ಬಾರಿ 4 ವಿಕೆಟ್ ಗೊಂಚಲು ಪಡೆದು ಸಹ ಆಟಗಾರ ಹರ್ಭಜನ್ ಸಿಂಗ್ ದಾಖಲೆಯನ್ನು ಸರಿಗಟ್ಟಿದರು. ವೆಸ್ಟ್‌ಇಂಡೀಸ್ ವಿರುದ್ಧ ಮೊದಲ ಟೆಸ್ಟ್‌ನ ಮೂರನೇ ದಿನದಾಟದಲ್ಲಿ ಅಶ್ವಿನ್ ಈ ಸಾಧನೆ ಮಾಡಿದ್ದಾರೆ.

ಅಶ್ವಿನ್ ಇದೀಗ ಟೆಸ್ಟ್ ಕ್ರಿಕೆಟ್‌ನಲ್ಲಿ ಗರಿಷ್ಠ ಸಂಖ್ಯೆಯ 4 ವಿಕೆಟ್ ಗೊಂಚಲು ಪಡೆದ ಭಾರತ ಎರಡನೇ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ.

ಅನಿಲ್ ಕುಂಬ್ಳೆ 66 ಬಾರಿ ಈ ಸಾಧನೆ ಮಾಡುವುದರೊಂದಿಗೆ ಅಗ್ರ ಸ್ಥಾನದಲ್ಲಿದ್ದಾರೆ.

ಅಶ್ವಿನ್ ಮೊದಲ ಇನಿಂಗ್ಸ್‌ನಲ್ಲಿ 37 ರನ್‌ಗೆ 4 ವಿಕೆಟ್‌ಗಳನ್ನು ಪಡೆದರು. ಎರಡನೇ ಇನಿಂಗ್ಸ್‌ನಲ್ಲಿ ಇನ್ನೆರಡು ವಿಕೆಟ್‌ಗಳನ್ನು ಪಡೆದು ಭಾರತ ತಂಡ ಟೆಸ್ಟ್ ಇತಿಹಾಸದಲ್ಲಿ ಗರಿಷ್ಠ ಅಂತರದ ರನ್‌ಗಳಿಂದ ಜಯ ಸಾಧಿಸಲು ನೆರವಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News