ಪಾಲಕ್ಕಾಡ್: ಕೊಲೆ ಮಾಡಿ ಜೈಲು ಸೇರಿದ್ದ ವ್ಯಕ್ತಿಯಿಂದ ಜೀವದಾನ

Update: 2018-10-08 04:30 GMT
ಸುಕುಮಾರನ್

ಪಾಲಕ್ಕಾಡ್, ಅ. 8: ಎಂಟು ವರ್ಷದ ಹಿಂದೆ ಮೊಬೈಲ್ ಟವರ್ ಅಳವಡಿಸುವ ವಿಚಾರದಲ್ಲಿ ಜಗಳವಾಡಿ ಮಾವನನ್ನು ಕೊಂದು ಜೈಲು ಸೇರಿದ್ದ ಎ.ಸುಕುಮಾರನ್ ಈಗ ಜೀವದಾನ ಮಾಡುವ ಮೂಲಕ ಸುದ್ದಿಯಾಗಿದ್ದಾನೆ.

ಜಿಲ್ಲೆಯ ಪಟ್ಟಾಂಬಿ ಗ್ರಾಮದ ನಿವಾಸಿಯಾದ ಈತ ಕಿಡ್ನಿದಾನ ಮೂಲಕ ಮಹಿಳೆಯೊಬ್ಬಳ ಜೀವ ಉಳಿಸಿದ್ದಾನೆ.

ಈ ಮೊದಲೇ ಕಿಡ್ನಿದಾನಕ್ಕೆ ಈತ ಮುಂದಾಗಿದ್ದರೂ, ಕಾನೂನು ಅಡ್ಡಬಂದಿತ್ತು. ಇದೀಗ ಅಂಗಾಂಗ ದಾನ ಕಾನೂನಿಗೆ ತಿದ್ದುಪಡಿ ತಂದಿರುವುದರಿಂದ ಸುಕುಮಾರನ್ ಹಾದಿ ಸುಗಮವಾಗಿದೆ. ಜತೆಗೆ ಸಹಕೈದಿ ಸ್ನೇಹಿತನ ಪತ್ನಿಯ ಚಿಕಿತ್ಸೆಗೆ ನೆರವಾಗಲು ಹಣವನ್ನೂ ಸಂಗ್ರಹಿಸಿದ್ದಾನೆ. ಜೈಲಿನಿಂದ ಬಿಡುಗಡೆಯಾದ ಬಳಿಕ ಸ್ನೇಹಿತ ಮೃತಪಟ್ಟಿದ್ದ. ಇಷ್ಟಲ್ಲದೇ ಸ್ನೇಹಿತನ ಪತ್ನಿಯನ್ನು ವಿವಾಹವಾಗಿ ನಾಲ್ಕು ವರ್ಷದ ಮಗುವನ್ನು ದತ್ತು ಪಡೆಯಲೂ ಮುಂದಾಗಿದ್ದಾನೆ.

"2007ರಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಮಾವನನ್ನು ಕೊಂದ ಬಳಿಕ ಕೀಳರಿಮೆ ನನ್ನನ್ನು ಕಾಡುತ್ತಿತ್ತು. ನಾನು ಪೊಲೀಸರಿಗೆ ಕರೆ ಮಾಡಿ ಅವರು ಬರುವವರೆಗೂ ಕಾದಿದ್ದೆ" ಎಂದು 47 ವರ್ಷದ ಸುಕುಮಾರನ್ ಹೇಳುತ್ತಾನೆ. ಇದೀಗ ಲಾಟರಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಾನೆ.

2010ರ ಅಕ್ಟೋಬರ್ 28ರಂದು ಪಾಲಕ್ಕಾಡ್ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಈತನಿಗೆ ಜೀವಾವಧಿ ಶಿಕ್ಷೆ ವಿಧಿಸಿ ಕಣ್ಣೂರು ಕೇಂದ್ರ ಕಾರಾಗೃಹಕ್ಕೆ ಕಳುಹಿಸಿತ್ತು. ಆದರೆ ಮಾವನ ಕುಟುಂಬವನ್ನು ಅನಾಥವಾಗಿ ಮಾಡಿದ್ದನ್ನು ಮರೆಯುವಂತಿಲ್ಲ ಎಂದು ಹೇಳುತ್ತಾನೆ.

2014ರಲ್ಲಿ ಜೈಲಿನಲ್ಲಿದ್ದಾಗ ಆರ್ಯ ಮಹರ್ಷಿ ಮತ್ತು ಸಿಮಿ ಎಂಬುವವರು ಸಂಬಂಧಿಕರಲ್ಲದವರಿಗೆ ಕಿಡ್ನಿದಾನ ಮಾಡಿದ್ದನ್ನು ಪತ್ರಿಕೆಯಲ್ಲಿ ಓದಿದ್ದ. ಜೈಲು ಅಧಿಕಾರಿಗಳ ನೆರವಿನಿಂದ ಮಹರ್ಷಿಗೆ ಪತ್ರ ಬರೆದು ಕಿಡ್ನಿದಾನ ಮಾಡುವ ಇಂಗಿತ ವ್ಯಕ್ತಪಡಿಸಿದ. ಬಳಿಕ ಈ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಈ ದಂಪತಿ ನಡೆಸಿಕೊಟ್ಟರು. ಇದಾದ ಬಳಿಕ ಹಲವು ಮಂದಿ ಕೈದಿಗಳು ಅಂಗಾಂಗ ದಾನ ಮಾಡುವ ನಿರ್ಧಾರಕ್ಕೆ ಬಂದರು.

ಕಿಡ್ನಿ ತೊಂದರೆಯಿಂದ ಬಳಲುತ್ತಿದ್ದ ಟಿ.ವಿ.ಶ್ರೀಕುಮಾರ್ ಎಂಬಾತನಿಗೆ ಕಿಡ್ನಿದಾನಕ್ಕೆ ಮುಂದಾದಾಗ ಕಾನೂನು ಅಡ್ಡಬಂದಿತ್ತು. ಕೈದಿಗಳು ಅಂಗಾಂಗ ದಾನ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಜೈಲಧಿಕಾರಿಗಳು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗೆ ಪತ್ರ ಬರೆದು ಕಾನೂನಿಗೆ ತಿದ್ದುಪಡಿ ತರಲು ಕೋರಿದ. ಈ ಮಧ್ಯೆ ತನಗೆ ವಿಧಿಸಿರುವ ಶಿಕ್ಷೆ ವಿರುದ್ಧ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ. ಹೈಕೋರ್ಟ್ ಜೀವಾವಧಿ ಶಿಕ್ಷೆಯನ್ನು 10 ವರ್ಷಕ್ಕೆ ಇಳಿಸಿತು. ಹೀಗೆ 2017ರ ಜುಲೈನಲ್ಲಿ ಬಿಡುಗಡೆಯಾದ.

ಬಳಿಕ ಕೊಲ್ಲಂನ ಪ್ರಿನ್ಸಿ ತಂಗಚ್ಚನ್ (21) ಎಂಬುವವರಿಗೆ ಕಿಡ್ನಿದಾನ ಮಾಡಿ ಜೀವದಾನ ಮಾಡಿದ. ನಂತರ ಸುಕುಮಾರನ್ ಲಾಡ್ಜ್‌ನಲ್ಲಿ ದಿನ ಕೂಲಿಯಾಗಿದ್ದ. ಸಹಕೈದಿಯಾಗಿದ್ದ ಬಶೀರ್‌ನ ಸಂಖ್ಯೆಗೆ ಕರೆ ಮಾಡಿದಾಗ ಆತ ಹೃದಯಾಘಾತದಿಂದ ಮೃತಪಟ್ಟಿದ್ದನ್ನು ಪತ್ನಿ ಸಮಿತಾ ತಿಳಿಸಿದರು. ಅನಾರೋಗ್ಯದಿಂದ ಬಳಲುತ್ತಿದ್ದ ಸಮಿತಾಗೆ ಚಿಕಿತ್ಸೆ ಕೊಡಿಸಿ, ಆಕೆಯೊಂದಿಗೆ ಬಾಡಿಗೆ ಮನೆಯಲ್ಲಿ ವಾಸ ಆರಂಭಿಸಿದ. ಇದೀಗ ಇಬ್ಬರೂ ಕಾನೂನುಬದ್ಧ ವಿವಾಹಕ್ಕೆ ಮುಂದಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News