ಚಾಮರಾಜನಗರ: ಮುಂದುವರೆದ ಕಾಡಾನೆಗಳ ಹಾವಳಿ; ರೈತರ ಫಸಲು ನಾಶ

Update: 2018-10-08 12:06 GMT

ಚಾಮರಾಜನಗರ,ಅ.8: ಬಂಡೀಪುರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಓಂಕಾರ್ ವಲಯದ ಅರಣ್ಯ ಪ್ರದೇಶದಲ್ಲಿ ರೈಲ್ವೇ ಕಂಬಿಗಳನ್ನು ಅಳವಡಿಸಿದ್ದರೂ ಆನೆಗಳ ದಾಳಿ ಮುಂದುವರೆದಿದೆ. 

ಓಂಕಾರ ವಲಯದ ಬೋಳೇಗೌಡನಕಟ್ಟೆ ಪ್ರದೇಶದಿಂದ ಹೊರಬರುವ ಆನೆಗಳು ಶ್ರೀಕಂಠಪುರ, ಹೊಸಪುರ, ಕೋಟೆಕೆರೆ, ಯಡವನಹಳ್ಳಿ ಗ್ರಾಮಗಳ ಜಮೀನುಗಳಿಗೆ ಬರುತ್ತಿದ್ದು, ರೈತರ ಬೆಳೆಗಳನ್ನು ನಾಶಪಡಿಸುತ್ತಿವೆ. ಕಳೆದ ತಿಂಗಳು ಶಾಸಕ ಸಿ.ಎಸ್.ನಿರಂಜನಕುಮಾರ್ ಕಾಡಂಚಿನ ಗ್ರಾಮಗಳಿಗೆ ಭೇಟಿ ನೀಡಿದ್ದಾಗ ಕಾಡಾನೆ ದಾಳಿತಡೆಗೆ ಗ್ರಾಮಸ್ಥರು ಒತ್ತಾಯಿಸಿದ್ದರು. ರೈಲ್ವೇಕಂಬಿ ಅಳವಡಿಸಲು ಹೆಚ್ಚಿನ ಅನುದಾನ ಬೇಕಾಗಿದ್ದರಿಂದ ಅಲ್ಲಿಯವರೆಗೆ ರಾತ್ರಿಗಸ್ತು ನಡೆಸಿ, ಸೋಲಾರ್ ಬೇಲಿ ದುರಸ್ತಿಗೊಳಿಸುವಂತೆ ಅರಣ್ಯಾಧಿಕಾರಿಗಳಿಗೆ ಸೂಚನೆ ನೀಡಿದ್ದರು. ಆದರೂ ಅರಣ್ಯ ಇಲಾಖೆಯವರು ಯಾವುದೇ ಕ್ರಮಕೈಗೊಂಡಿಲ್ಲ. ಇದರಿಂದಾಗಿ ಪ್ರತಿ ದಿನವೂ ಆನೆಗಳ ದಾಳಿ ಹೆಚ್ಚಾಗಿದೆ ಎಂದು ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅ.6ರ ರಾತ್ರಿ ಅರಣ್ಯದಿಂದ ಹೊರಬಂದ 8 ಗಂಡಾನೆಗಳು ತೊಂಡವಾಡಿ ಗ್ರಾಮದ ಸಿದ್ದನಾಯ್ಕ ಎಂಬವರ ಜಮೀನಿಗೆ ದಾಳಿಮಾಡಿ ಅಲ್ಲಿ ಬೆಳೆದಿದ್ದ ಟೊಮ್ಯಾಟೋ, ಮೆಣಸು ಹಾಗೂ ತೆಂಗಿನ ಸಸಿಗಳನ್ನು ನಾಶಪಡಿಸಿವೆ. ಅಲ್ಲದೆ ಜಮೀನಿನಲ್ಲಿ ಅಳವಡಿಸಿದ್ದ ನೀರಾವರಿಯ ಡ್ರಿಪ್ ಪೈಪ್‍ಗಳನ್ನು ಸಹ ಕಿತ್ತುಹಾಕಿವೆ. ಇದರಿಂದ ಭಾರೀ ಪ್ರಮಾಣದ ನಷ್ಟವುಂಟಾಗಿದೆ. ನಂತರ 8 ಆನೆಗಳ ಹಿಂಡು ನಂಜನಗೂಡು ಹುರ ರಸ್ತೆ ಸಮೀಪದಲ್ಲಿ ಬೀಡುಬಿಟ್ಟಿದ್ದವು. 

ಆನೆಗಳನ್ನು ನೋಡಿದ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿ ಆನೆಗಳನ್ನು ಕಾಡಿಗಟ್ಟುವಂತೆ ಒತ್ತಾಯಿಸಿದರು. ಗ್ರಾಮಸ್ಥರು ಹಾಗೂ ಅರಣ್ಯ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿ ಓಂಕಾರ್ ವಲಯದ ಅರಣ್ಯಕ್ಕೆ ಅಟ್ಟಲಾಯಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News