ಸಾಲಬಾಧೆ: ನಾಲೆಗೆ ಹಾರಿ ಆತ್ಮಹತ್ಯೆಗೆ ಶರಣಾದ ವ್ಯಕ್ತಿ

Update: 2018-10-08 12:14 GMT

ಮಡಿಕೇರಿ, ಅ.8 :ಇತ್ತೀಚೆಗೆ ಸಂಭವಿಸಿದ ಪ್ರಕೃತಿ ವಿಕೋಪದಿಂದ ಮನೆ ಕಳೆದುಕೊಂಡು ಸಂತ್ರಸ್ತರಾಗಿದ್ದ ವ್ಯಕ್ತಿಯೊಬ್ಬರು ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿಗೆ ಸಮೀಪದ ಗುಡ್ಡಹೊಸೂರಿನಲ್ಲಿ ನಡೆದಿದೆ.

ಸೋಮವಾರಪೇಟೆ ತಾಲೂಕಿನ  ಸೂರ್ಲಬ್ಬಿ ನಿವಾಸಿ ಅಪ್ಪುಡ ವಿಜು ಭೀಮಯ್ಯ (42) ಎಂಬವರೇ ಆತ್ಮಹತ್ಯೆ ಮಾಡಿಕೊಂಡವರಾಗಿದ್ದಾರೆ.
ಪ್ರಕೃತಿ ವಿಕೋಪದ ಹಿನ್ನೆಲೆಯಲ್ಲಿ ಮನೆ ಕಳೆದುಕೊಂಡು ಸಂತ್ರಸ್ತರಾಗಿದ್ದ ವಿಜು ಭೀಮಯ್ಯ ಸಂತ್ರಸ್ತರ ಪರಿಹಾರ ಕೇಂದ್ರಕ್ಕೆ ತೆರಳದೆ  ಜೀವನೋಪಾಯಕ್ಕೆ ಪತ್ನಿಯೊಂದಿಗೆ ಗುಡ್ಡೆಹೊಸೂರಿನ ಬಿ.ಎಂ ರಸ್ತೆಯ ರಾಜೇಶ್ ಹಲೋ ಬ್ರಿಕ್ಸ್ ಫ್ಯಾಕ್ಟರಿಯಲ್ಲಿ ಕೆಲಸಕ್ಕೆ ಸೇರಿದ್ದರು ಮತ್ತು ಗುಡ್ಡೆಹೊಸೂರಿನಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು.

ಕೃಷಿಕ ಹಾಗೂ ಕಾರ್ಮಿಕರಾಗಿದ್ದ ಭೀಮಯ್ಯ ಹಾಗೂ ಪತ್ನಿ ಜಾನಕಿ (ಚಿತ್ರಾ) ಸುಮಾರು 2 ಲಕ್ಷಕ್ಕೂ ಅಧಿಕ ಮೊತ್ತದ ಸಾಲ ಮಾಡಿದ್ದರೆನ್ನಲಾಗಿದ್ದು, ಸ್ವಾಭಿಮಾನಿಯಾಗಿದ್ದ ವಿಜು ಭೀಮಯ್ಯ ಮನೆ ಕಳೆದುಕೊಂಡ ನೋವಿನಲ್ಲೇ ಇದ್ದರೆಂದು ಹೇಳಲಾಗಿದೆ. ಭಾನುವಾರ ರಾತ್ರಿ ಹೆಂಡತಿಯೊಂದಿಗೆ ತಮ್ಮ ಹೀನಾಯ ಸ್ಥಿತಿಯ ಬಗ್ಗೆ ಮಾತನಾಡಿಕೊಂಡಿದ್ದ ಅವರು, ಎಲ್ಲರೂ ಮಲಗಿದ ಮೇಲೆ ಸಮೀಪದ ಚಿಕ್ಲಿಹೊಳೆ ಜಲಾಶಯದ ನಾಲೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಮೃತರು ತಾಯಿ, ಪತ್ನಿ ಮತ್ತು ನಾಲ್ಕು ಹೆಣ್ಣು ಮಕ್ಕಳನ್ನು ಅಗಲಿದ್ದು, ನಾಲೆಯಲ್ಲಿ ಬಿದ್ದಿದ್ದ ಮೃತರ ಶವವನ್ನು ಕುಶಾಲನಗರದ ಶವಾಗಾರಕ್ಕೆ ಸಾಗಿಸಲು ಆಟೋ ಚಾಲಕ ಮುನೀರ್ ಮತ್ತು ಇಂದಿರಾ ಬಡಾವಣೆಯ ನಿವಾಸಿ ರಹೀಂ ಸಹಕರಿಸಿದರು. ಮರಣೋತ್ತರ ಪರೀಕ್ಷೆಯ ನಂತರ ಶವವನ್ನು ಕುಟುಂಬದವರಿಗೆ ಒಪ್ಪಿಸಲಾಗಿದೆ.

ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News