ಬಿಜೆಪಿ ಭದ್ರಕೋಟೆ ಬಳ್ಳಾರಿಯಲ್ಲಿ ನಮ್ಮ ಅಭ್ಯರ್ಥಿ ಗೆಲುವು ನಿಶ್ಚಿತ: ಬಿ.ಶ್ರೀರಾಮುಲು

Update: 2018-10-08 12:30 GMT

ಬಳ್ಳಾರಿ, ಅ. 8: ದಶಕಗಳಿಂದಲೂ ಬಳ್ಳಾರಿ ಬಿಜೆಪಿ ಭದ್ರಕೋಟೆಯಾಗಿದ್ದು, ಲೋಕಸಭೆ ಉಪ ಚುನಾವಣೆಯಲ್ಲಿಯೂ ಬಿಜೆಪಿ ಅಭ್ಯರ್ಥಿಯ ಗೆಲುವು ನಿಶ್ಚಿತ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಹಾಗೂ ಶಾಸಕ ಬಿ.ಶ್ರೀರಾಮುಲು ಭರವಸೆ ವ್ಯಕ್ತಪಡಿಸಿದ್ದಾರೆ.

ಸೋಮವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಏಳೆಂಟು ಮಂದಿ ಆಕಾಂಕ್ಷಿಗಳಿದ್ದು, ಶೀಘ್ರದಲ್ಲೆ ಅವರ ಹೆಸರುಗಳನ್ನು ವರಿಷ್ಠರಿಗೆ ಕಳುಹಿಸಲಾಗುವುದು. ಅಭ್ಯರ್ಥಿಯನ್ನು ಹೈಕಮಾಂಡ್ ಅಂತಿಮಗೊಳಿಸಲಿದೆ ಎಂದು ಹೇಳಿದರು.

ನಿವೃತ್ತ ನ್ಯಾಯಮೂರ್ತಿ ಎನ್.ವೈ.ಹನುಮಂತಪ್ಪ ಅವರ ಪುತ್ರ ಎನ್.ವೈ.ಸುಜಯ್ ಲೋಕಸಭಾ ಉಪ ಚುನಾವಣೆಯಲ್ಲಿ ಬಳ್ಳಾರಿ ಕ್ಷೇತ್ರದಿಂದ ಆಕಾಂಕ್ಷಿಯಾಗಿದ್ದು, ಅರ್ಜಿ ಸಲ್ಲಿಸಿದ್ದಾರೆ. ಎಲ್ಲ ಆಕಾಂಕ್ಷಿಗಳ ಬಗ್ಗೆಯೂ ರಾಜ್ಯಾಧ್ಯಕ್ಷರ ಗಮನಕ್ಕೆ ತರಲಾಗಿದೆ ಎಂದು ತಿಳಿಸಿದರು.

ಬಳ್ಳಾರಿ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ಪ್ರಭಾವಿಯಾಗಿರಬಹುದು, ಅವರ ಬಳಿ ಸರಕಾರವೇ ಇರಬಹುದು. ಆದರೆ, ಅವರ ಶಕ್ತಿ ಅವರಿಗೆ, ನಮ್ಮ ಶಕ್ತಿ ನಮಗೆ ಎಂದ ಶ್ರೀರಾಮುಲು, ಡಿ.ಕೆ.ಶಿವಕುಮಾರ್ ವರ್ಸಸ್ ಶ್ರೀರಾಮುಲು ಅಲ್ಲ. ಬದಲಿಗೆ ಬಿಜೆಪಿ ವರ್ಸಸ್ ಕಾಂಗ್ರೆಸ್ ಆಗಿಯೇ ನಾವು ಚುನಾವಣೆ ಎದುರಿಸುತ್ತೇವೆ ಎಂದು ಎಚ್ಚರಿಸಿದರು.

ಕಾಂಗ್ರೆಸ್ ಪಕ್ಷದ ರಾಜ್ಯ ನಾಯಕರು ಬೂತ್ ಬಳಿಯೇ ಬಂದು ಕುಳಿತರೂ ನಮ್ಮ ಶಕ್ತಿ ನಮ್ಮ ಕಾರ್ಯಕರ್ತರು ಎಂದ ಶ್ರೀರಾಮುಲು, 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಮೋದಿ ಅವರು ಮತ್ತೆ ಪ್ರಧಾನಿ ಆಗುತ್ತಾರೆ. ಬಳ್ಳಾರಿಯಲ್ಲಿಯೂ ಬಿಜೆಪಿ ಅಭ್ಯರ್ಥಿ ಗೆಲ್ಲಲ್ಲಿದ್ದಾರೆಂದು ಭವಿಷ್ಯ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News