ಶಿವಮೊಗ್ಗ: ಸಾಲುಸಾಲು ಚುನಾವಣೆಯಿಂದ ಅಭಿವೃದ್ದಿಗೆ ಅಡ್ಡಗಾಲು

Update: 2018-10-08 17:28 GMT

ಶಿವಮೊಗ್ಗ, ಅ. 8: ಒಂದರ ಹಿಂದೊಂದರಂತೆ ಎದುರಾಗುತ್ತಿರುವ ಸಾಲುಸಾಲು ಚುನಾವಣೆಗಳು, ಮಾದರಿ ನೀತಿ-ಸಂಹಿತೆ ಪರಿಣಾಮದಿಂದ ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಅಡೆತಡೆಯಾಗುತ್ತಿದೆ. ಚುನಾವಣೆ ನಡೆಸುವುದರಲ್ಲಿಯೇ ಆಡಳಿತ ಯಂತ್ರ ಕಾರ್ಯನಿರತವಾಗಿದ್ದು, ಚುನಾವಣಾ ವೆಚ್ಚ, ಅಧಿಕಾರ ಚಲಾಯಿಸಲು ಉಂಟಾಗುತ್ತಿರುವ ಅಡ್ಡಿಯಿಂದ ಜನಪ್ರತಿನಿಧಿಗಳು ಹೈರಾಣಾಗಿದ್ದಾರೆ. ಎಲೆಕ್ಷನ್‍ಗಳಿಂದ ಜಿಲ್ಲೆಯ ಅಭಿವೃದ್ದಿ ಯೋಜನೆಗಳಿಗೆ ಗ್ರಹಣ ಹಿಡಿಯುವಂತಾಗಿದೆ. ಅಕ್ಷರಶಃ ಆಡಳಿತ ಯಂತ್ರ ಸ್ತಬ್ದಗೊಳ್ಳುವಂತಾಗಿದೆ. 

ಎಲ್ಲದಕ್ಕಿಂತ ಮುಖ್ಯವಾಗಿ ನೀತಿ-ಸಂಹಿತೆಗಳ ನೇರ ಪರಿಣಾಮ ಜನಸಾಮಾನ್ಯರ ಮೇಲೆ ಬೀರುತ್ತಿದೆ. ಸರ್ಕಾರಿ ಕಚೇರಿಗಳಲ್ಲಿ ಕೆಲಸಕಾರ್ಯ ಮಾಡಿಕೊಳ್ಳಲಾಗದೆ ಪರಿತಪಿಸುವಂತಾಗಿದೆ. ಅಲೆದಾಡುವಂತಾಗಿದೆ. ಇನ್ನಿಲ್ಲದ ಸಂಕಷ್ಟ ಅನುಭವಿಸುವಂತಾಗಿದೆ. ಆದರೆ ಕೆಲವರಿಗೆ ಸಾಲುಸಾಲು ಚುನಾವಣೆಗಳು ಅಕ್ಷರಶಃ ವರವಾಗಿ ಪರಿಣಮಿಸಿವೆ. ಸುಲಭವಾಗಿ ಹಣ ಸಂಪಾದಿಸುವ ಉದ್ಯೋಗದಂತಾಗಿವೆ.

ಚುನಾವಣಾ ಪರ್ವ: ಕಳೆದ ಏಪ್ರಿಲ್ - ಮೇ ತಿಂಗಳಲ್ಲಿ ಘೋಷಣೆಯಾದ ವಿಧಾನಸಭೆ ಸಾರ್ವತ್ರಿಕ ಚುನಾವಣೆಯಿಂದ, ಸರಿಸುಮಾರು 2 ತಿಂಗಳ ಕಾಲ ಈ ಚುನಾವಣೆಯಲ್ಲಿಯೇ ಜಿಲ್ಲೆಯ ಆಡಳಿತ ಯಂತ್ರ ಮುಳುಗಿತ್ತು. ಇನ್ನೇನೂ ಈ ಚುನಾವಣೆ ಪೂರ್ಣಗೊಂಡು ಎಲ್ಲವೂ ಸಹಜ ಸ್ಥಿತಿಗೆ ಮರಳಲಿದೆ ಎಂಬ ಸ್ಥಿತಿಯಲ್ಲಿರುವಾಗಲೇ, ವಿಧಾನಪರಿಷತ್ ಚುನಾವಣೆ ಬಂದಿತ್ತು. 

ನೈರುತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಗಳ ಚುನಾವಣೆಗೆ ಸುಮಾರು ಒಂದು ತಿಂಗಳ ಕಾಲ ಜಿಲ್ಲೆಯಾದ್ಯಂತ ನೀತಿ-ಸಂಹಿತೆ ಜಾರಿಗೊಳಿಸಲಾಗಿತ್ತು. ಈ ಚುನಾವಣೆಯಲ್ಲಿ ನಿರ್ದಿಷ್ಟ ವರ್ಗದ ಮತದಾರರು ಮಾತ್ರ ಮತದಾನದ ಹಕ್ಕು ಹೊಂದಿದ್ದರೂ, ನೀತಿ-ಸಂಹಿತೆಯ ಬಿಸಿ ಎಲ್ಲರಿಗೂ ತಟ್ಟಿತ್ತು. ಸರ್ಕಾರಿ, ಸ್ಥಳೀಯ ಸಂಸ್ಥೆಗಳ ಸಭೆಗಳು ನಡೆಸಲು ಸಾಧ್ಯವಾಗದಂತಾಗಿತ್ತು.

ಆಗಸ್ಟ್ ತಿಂಗಳಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆ ಚುನಾವಣೆ ನಡೆಯಿತು. ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಮತ್ತೆ ನೀತಿ-ಸಂಹಿತೆಯ ಬಿಸಿ ತಟ್ಟಿತ್ತು. ಈ ಚುನಾವಣಾ ಪ್ರಕ್ರಿಯೆ ಪೂರ್ಣಗೊಂಡು ಒಂದು ತಿಂಗಳಾಗಿದೆ. ಅಷ್ಟರಲ್ಲಿಯೇ ಲೋಕಸಭೆಯ ಉಪ ಚುನಾವಣೆ ಎದುರಾಗಿದೆ. ಇದರಿಂದ ಜಿಲ್ಲೆಯು ಸುಮಾರು ಒಂದು ತಿಂಗಳ ಕಾಲ ಮತ್ತೆ ನೀತಿ-ಸಂಹಿತೆಯ ಬಿಸಿ ಎದುರಿಸುವಂತಾಗಿದೆ. 

ಮುಗಿದಿಲ್ಲ ಚುನಾವಣೆ: ಈ ಚುನಾವಣೆ ಪೂರ್ಣಗೊಂಡ ಬೆನ್ನಲ್ಲೆ, ಈ ವರ್ಷಾಂತ್ಯಕ್ಕೆ ಅಥವಾ 2019 ನೇ ಜನವರಿಯಲ್ಲಿ ಜಿಲ್ಲೆಯ 8 ನಗರ-ಪಟ್ಟಣ ಸ್ಥಳೀಯ ಸಂಸ್ಥೆಗಳ ಚುನಾವಣೆ ಆರಂಭವಾಗುವ ಸಾಧ್ಯತೆಯಿದೆ. ಭದ್ರಾವತಿ, ಸಾಗರ ನಗರಸಭೆ, ಶಿಕಾರಿಪುರ ಪುರಸಭೆ, ಶಿರಾಳಕೊಪ್ಪ, ಹೊಸನಗರ, ತೀರ್ಥಹಳ್ಳಿ, ಸೊರಬ, ಜೋಗ-ಕಾರ್ಗಲ್ ಪಟ್ಟಣ ಪಂ.ಗಳ ವಾರ್ಡ್‍ವಾರು ಮೀಸಲಾತಿಯ ಅಂತಿಮ ಪಟ್ಟಿ ಕೂಡ ಪ್ರಕಟಿಸಲಾಗಿದೆ. ಚುನಾವಣಾ ದಿನಾಂಕ ಪ್ರಕಟಣೆಯಷ್ಟೆ ಬಾಕಿಯಿದೆ. 

ನೆಪ: ಕೆಲ ಸರ್ಕಾರಿ ಅಧಿಕಾರಿ-ನೌಕರರು ಚುನಾವಣಾ ನೀತಿ-ಸಂಹಿತೆ ಮುಂದಿಟ್ಟುಕೊಂಡು ನಾಗರಿಕರಿಗೆ ಸರ್ಕಾರಿ ಕೆಲಸ ಕಾರ್ಯ ಮಾಡಿಕೊಡದೆ ಸತಾಯಿಸುತ್ತಿರುವ ಆರೋಪಗಳು ಕೂಡ ಕೇಳಿಬರುತ್ತಿವೆ. ಕಡತ ವಿಲೇವಾರಿ ಸೇರಿದಂತೆ ಪ್ರತಿಯೊಂದಕ್ಕೂ ನೀತಿ-ಸಂಹಿತೆಯ ಕುಂಟು ನೆಪ ಮುಂದಿಟ್ಟು, ಸಾರ್ವಜನಿಕರನ್ನು ಕಚೇರಿಗಳಿಗೆ ಅಲೆದಾಡಿಸುವುದೇ ಕಾಯಕ ಮಾಡಿಕೊಂಡಿದ್ದಾರೆ ಎಂದು ಕೆಲ ನಾಗರಿಕರು ದೂರುತ್ತಾರೆ.

ಒಟ್ಟಾರೆ ಜಿಲ್ಲೆಯಲ್ಲಿ ಒಂದರ ಹಿಂದೊಂದರಂತೆ ಎದುರಾಗುತ್ತಿರುವ ಸಾಲುಸಾಲು ಚುನಾವಣೆಗಳು ಜಿಲ್ಲೆಯ ಅಭಿವೃದ್ದಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುವಂತಾಗಿದೆ. ಕೆಲ ಇಲಾಖೆಗಳ ಅಧಿಕಾರಿ-ಸಿಬ್ಬಂದಿಗಳು, ಬರೀ ಚುನಾವಣೆ ಕಾರ್ಯದಲ್ಲಿಯೇ ಮಗ್ನರಾಗುವಂತಾಗಿದೆ. ಇದರಿಂದ ಆಡಳಿತ ಯಂತ್ರ ಕೂಡ ಅಸ್ತವ್ಯಸ್ತಗೊಳ್ಳುವಂತಾಗಿದ್ದು, ಇದರ ನೇರ ಪರಿಣಾಮ ಜನಸಾಮಾನ್ಯರ ಮೇಲಾಗುತ್ತಿರುವುದಂತೂ ಸತ್ಯವಾಗಿದೆ.  

ಚುನಾವಣಾ ಪರ್ವದ ಹೈಲೈಟ್ಸ್..!
-ಏಪ್ರಿಲ್-ಮೇ ತಿಂಗಳಲ್ಲಿ ವಿಧಾನಸಭೆ ಸಾರ್ವತ್ರಿಕ ಚುನಾವಣೆ.
-ಜೂನ್ ನಲ್ಲಿ ವಿಧಾನಪರಿಷತ್‍ನ ನೈರುತ್ಯ ಪದವೀಧರ-ಶಿಕ್ಷಕರ ಕ್ಷೇತ್ರಗಳ ಚುನಾವಣೆ.
-ಆಗಸ್ಟ್‍ನಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆ ಚುನಾವಣೆ.
-ಅಕ್ಟೋಬರ್ ನಲ್ಲಿ ಆವಿನಹಳ್ಳಿ ಜಿ.ಪಂ. ಕ್ಷೇತ್ರದ ಚುನಾವಣೆ.
-ಅಕ್ಟೋಬರ್-ನವೆಂಬರ್ ನಲ್ಲಿ ಲೋಕಸಭೆ ಉಪ ಚುನಾವಣೆ.
ಡಿಸೆಂಬರ್ ಅಥವಾ ಜನವರಿಯಲ್ಲಿ 8 ನಗರ-ಪಟ್ಟಣ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ಘೋಷಣೆಯಾಗುವ ಸಾಧ್ಯತೆ.

Writer - ವರದಿ : ಬಿ. ರೇಣುಕೇಶ್

contributor

Editor - ವರದಿ : ಬಿ. ರೇಣುಕೇಶ್

contributor

Similar News