ಚೀನಾ ಪ್ರಗತಿ ಅಂದಾಜು ಕಡಿತಗೊಳಿಸಿದ ಐಎಂಎಫ್

Update: 2018-10-09 05:01 GMT

ಹೊಸದಿಲ್ಲಿ, ಅ.9: ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ಭಾರತದ ಮುಂದಿನ ಎರಡು ವರ್ಷಗಳ ಆರ್ಥಿಕ ದರ ಅಂದಾಜನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಿದೆ. ಆದರೆ ಚೀನಾದ ಆರ್ಥಿಕ ಪ್ರಗತಿ ಅಂದಾಜನ್ನು ಕಡಿತಗೊಳಿಸಿ, ಇದು ಮಂದೆ ಪ್ರಮಾಣದಲ್ಲಿ ಪ್ರಗತಿ ಸಾಧಿಸುವ ನಿರೀಕ್ಷೆ ಇದೆ ಎಂದು ಹೇಳಿದೆ.

"ಭಾರತದ ಆರ್ಥಿಕ ಪ್ರಗತಿ 2018ರಲ್ಲಿ 7.3% ಹಾಗೂ 2019ರಲ್ಲಿ 7.4%ಕ್ಕೆ ಹೆಚ್ಚಲಿದೆ. ಇತ್ತೀಚಿನ ದಿನಗಳಲ್ಲಿ ತೈಲ ಬೆಲೆ ಹೆಚ್ಚಿರುವುದು ಮತ್ತು ಜಾಗತಿಕ ಆರ್ಥಿಕ ಸ್ಥಿತಿ ಬಿಗಿಯಾಗಿರುವ ಹಿನ್ನೆಲೆಯಲ್ಲಿ ಇದು 2017ರ ಪ್ರಗತಿ ದರವಾದ 6.7%ಕ್ಕಿಂತ ಅಧಿಕವಾಗಲಿದೆ ಎಂದು ವಿಶ್ವ ಆರ್ಥಿಕ ದೃಷ್ಟಿಕೋನ ವರದಿ ಅಂದಾಜಿಸಿದೆ.

ಪ್ರಗತಿಯ ವೇಗವರ್ಧನೆಯು ವರ್ಗಾಂತರ ಅವಧಿಯ ಆಘಾತದ ನಡುವೆಯೂ ಹೂಡಿಕೆ ಬಲಗೊಳಿಸುವಿಕೆ ಮತ್ತು ಖಾಸಗಿ ಬಳಕೆ ಹೆಚ್ಚಳದ ಮೂಲಕ ಪ್ರತಿಫಲಗೊಳ್ಳಲಿದೆ ಎಂದು ಹೇಳಿದೆ.

ಚೀನಾದ ಪ್ರಗತಿ 2018ರಲ್ಲಿ 6.6%ಗೆ ಮತ್ತು 2019ರಲ್ಲಿ 6.2%ಕ್ಕೆ ಕುಸಿಯಲಿದೆ. ಚೀನಾದಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ ಅಮೆರಿಕ ವಿಧಿಸಿರುವ ಸುಂಕ ಇದಕ್ಕೆ ಪ್ರಮುಖ ಕಾರಣ. ಚೀನಾ ಪ್ರಗತಿ ಮಂದಗತಿಯಲ್ಲಿ ಸಾಗುವುದು ಭಾರತಕ್ಕೆ ನೆರವಾಗಲಿದ್ದು, ಮುಂದಿನ ಎರಡು ವರ್ಷಗಳ ವರೆಗೆ ವೇಗವಾಗಿ ಬೆಳೆಯುವ ಆರ್ಥಿಕತೆ ಎಂಬ ಹಣೆಪಟ್ಟಿ ಉಳಿಸಿಕೊಳ್ಳಲಿದೆ ಎಂದು ವಿವರಿಸಿದೆ.

"ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಅಂತರರಾಷ್ಟ್ರೀಯ ಪ್ರಗತಿ ಎರಡೂ ವರ್ಷಗಳಲ್ಲಿ 3.7%ಕ್ಕೆ ಇಳಿಯುವ ಸಾಧ್ಯತೆ ಇದೆ. ಇದು ಹಿಂದಿನ ಅಂದಾಜಿಗಿಂತ ಶೇಕಡ 0.2ರಷ್ಟು ಕಡಿಮೆ. ಜಾಗತಿಕ ಮಟ್ಟದಲ್ಲಿ ವ್ಯಾಪಾರ ವಹಿವಾಟು, ಉತ್ಪಾದನೆ ಹಾಗೂ ಹೂಡಿಕೆ ದುರ್ಬಲವಾಗುತ್ತಿದೆ. ಇಷ್ಟಾಗಿಯೂ ಹಿಂದಿನ ದಶಕಕ್ಕೆ ಹೋಲಿಸಿದರೆ ಜಾಗತಿಕ ಪ್ರಗತಿ ಆಶಾದಾಯಕವಾಗಿದೆ" ಎಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News