ಕಟ್ಟಡದಲ್ಲಿ ಬೆಂಕಿ ಅವಘಡ: ಹಲವರ ಪ್ರಾಣವುಳಿಸಿ ಕೊನೆಯುಸಿರೆಳೆದ ಮಹಿಳೆ

Update: 2018-10-09 07:43 GMT

ಗುರುಗ್ರಾಮ, ಅ.9: ಇಲ್ಲಿನ ಗಗನಚುಂಬಿ ವಸತಿ ಸಂಕೀರ್ಣ ಟ್ಯೂಲಿಪ್ ಆರೆಂಜ್  ಕಟ್ಟಡದಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಎಲ್ಲಾ ಫ್ಲ್ಯಾಟುಗಳ ಬಾಗಿಲು ಬಡಿದು ಮಲಗಿದ್ದವರನ್ನು ಎಚ್ಚರಿಸಿ ಹಲವು ಜೀವಗಳನ್ನು ಉಳಿಸಿದ  ವೃತ್ತಿಯಲ್ಲಿ ಇಂಟೀರಿಯರ್ ಡಿಸೈನರ್ ಆಗಿರುವ 32 ವರ್ಷದ ಸ್ವಾತಿ ಗರ್ಗ್  ಮಾತ್ರ ಬದುಕುಳಿಯಲಿಲ್ಲ. ಕಟ್ಟಡದ ಮೆಟ್ಟಿಲುಗಳ ಪ್ರದೇಶದಲ್ಲಿ 2 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಾಗ ಸ್ವಾತಿ ತೋರಿದ ಪ್ರಸಂಗಾವಧಾನತೆಯಿಂದ ಎಲ್ಲರೂ ಮೇಲಿನ ಮಹಡಿಗಳಿಗೆ ತೆರಳಿ ಬದುಕುಳಿದುಕೊಂಡರೆ,  ಅಗ್ನಿಶಾಮಕ ದಳದ ಸಿಬ್ಬಂದಿ ಎರಡು ಗಂಟೆಗಳ ತರುವಾಯ  ಆಕೆಯ ಮೃತದೇಹ  ಕಂಡಿದ್ದರು.

ಹತ್ತನೇ  ಮಹಡಿಯಲ್ಲಿರುವ ಟೆರೇಸಿಗೆ ತೆರಳುವ ಗೇಟಿನ ಪಕ್ಕ ಆಕೆಯ ಮೃತದೇಹ ಪತ್ತೆಯಾಗಿತ್ತು. ಅಲ್ಲಿ ಗೇಟ್ ಗೆ ಬೀಗ ಹಾಕಲ್ಪಟ್ಟಿದ್ದರಿಂದ ಸ್ವಾತಿ ದಟ್ಟ ಹೊಗೆಗಳ ನಡುವೆ ಅಲ್ಲಿಯೇ ಸಿಲುಕಿ ಪ್ರಾಣ ಕಳೆದುಕೊಂಡಿದ್ದರು. ಅಲ್ಲಿನ ಬಾಗಿಲು ತೆಗೆದು ಹೊಗೆ  ಹೊರ ಹೋಗಲು ಅನುವು ಮಾಡಿ ಕೊಡುವ ಯತ್ನದಲ್ಲಿ ಸ್ವಾತಿ ಅಲ್ಲಿಗೆ ತೆರಳಿದ್ದರೆಂದು ಶಂಕಿಸಲಾಗಿದೆ.

ಈ ಗೇಟಿನ ಪಕ್ಕದ ಗೋಡೆಯಲ್ಲಿ ಕೈಗಳ ಅಚ್ಚು ಇದ್ದಿದ್ದು ಕಂಡು ಬಂದಿದ್ದು ಸ್ವಾತಿ ಅವರು ಕೊನೆ ಕ್ಷಣದ ವರೆಗೆ  ಹೋರಾಡಿದ್ದರೆಂದು ಇದರಿಂದ ತಿಳಿದು ಬರುತ್ತದೆ. ಈ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡ 45 ನಿಮಿಷಗಳ ನಂತರವಷ್ಟೇ ಅಗ್ನಿ ಶಾಮಕ ವಾಹನಗಳು ಅಲ್ಲಿಗೆ ಆಗಮಿಸಿದ್ದವು. ಗುರುಗ್ರಾಮದಲ್ಲಿ ಹೊಸ  ಸೆಕ್ಟರುಗಳಲ್ಲಿ ಹಲವಾರು ಕಟ್ಟಡಗಳು ತಲೆಯೆತ್ತಿದ್ದರೂ ಅತ್ಯಂತ ಹತ್ತಿರದ ಅಗ್ನಿ ಶಾಮಕ ಠಾಣೆ  ಹುಡಾ ಸಿಟಿ ಸೆಂಟರ್ ಮೆಟ್ರೋ ಸ್ಟೇಶನ್ ಸಮೀಪ, ಕನಿಷ್ಠ 12 ಕಿಮೀ ದೂರದಲ್ಲಿದೆ.

ಸ್ವಾತಿ  ಆಕೆಯ ಪತಿ, ನಾಲ್ಕು ವರ್ಷದ ಪುತ್ರಿ ಹಾಗೂ ಇತ್ತೀಚೆಗಷ್ಟೇ ಅಲ್ಲಿಗೆ ಆಗಮಿಸಿದ್ದ ಆಕೆಯ ತಾಯಿ ಐದನೇ ಮಹಡಿಯ ಫ್ಲ್ಯಾಟ್ ನಲ್ಲಿ ವಾಸವಾಗಿದ್ದರು. ಬೆಂಕಿ ಕಾಣಿಸಿಕೊಂಡ ಕಟ್ಟಡದಲ್ಲಿ ಒಟ್ಟು 36 ಫ್ಲ್ಯಾಟ್ ಗಳಿದ್ದವು.

ಮೊದಲನೇ ಮಹಡಿಯ ವಿದ್ಯುತ್ ಮೀಟರಿನಲ್ಲಿ ಬೆಂಕಿ ಮೊದಲು ಕಾಣಿಸಿಸಿಕೊಂಡಿತ್ತೆನ್ನಲಾಗಿದೆ.  ತಮ್ಮ ಫ್ಲ್ಯಾಟಿನ ಪಕ್ಕದ ವಿದ್ಯುತ್ ಪ್ಯಾನೆಲ್‍ಗೆ ಕೂಡ ಬೆಂಕಿ ತಗಲಬಹುದೆಂದು ಅವರು ಸುರಕ್ಷಿತ ಸ್ಥಳ ಅರಸಿಕೊಂಡು ಹೋಗಿದ್ದು, ಈ ಸಂದರ್ಭ ಸ್ವಾತಿ ಆ ಮಹಡಿಯಲ್ಲಿದ್ದ ಎಲ್ಲರ ಮನೆಯ ಬಾಗಿಲು ಬಡಿದು ಎಚ್ಚರಿಸಿದ್ದರು.  ಆದರೆ ಮುಂದೆ ದಟ್ಟ ಹೊಗೆಯಿಂದ ಸ್ವಾತಿ ಮತ್ತವರ ಪತಿ  ಗಿರೀಶ್ ಪ್ರತ್ಯೇಕಗೊಂಡಿದ್ದರು.  ಸ್ವಾತಿ ಎಲ್ಲಿದ್ದಾರೆಂಬುದು ಅವರ ಮೃತದೇಹ ಪತ್ತೆಯಾಗುವ ತನಕ ಯಾರಿಗೂ ತಿಳಿದಿರಲಿಲ್ಲ. ಸ್ವಾತಿಯ ತಾಯಿ, ಪತಿ ಮತ್ತು ಮಗಳು  ಸುಟ್ಟ ಗಾಯಗಳಿಗಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News