ಕೋಮು ಸಂಘರ್ಷದ ಸಂದರ್ಭ ಗ್ರಾಮ ಬಿಟ್ಟು ತೆರಳಿದ್ದ ಮುಸ್ಲಿಮರನ್ನು ಮರಳಿ ಕರೆತರಲು ಶ್ರಮಿಸುತ್ತಿರುವ ಸಂಜೀವ್

Update: 2018-10-09 08:54 GMT

ಲಕ್ನೋ, ಅ.9: ಉತ್ತರ ಪ್ರದೇಶದ ಮುಝಫ್ಫರನಗರ ಜಿಲ್ಲೆಯ ಶಾಹಪುರ್ ಪ್ರಾಂತ್ಯದ ದುಲ್ಹೇಡ ಗ್ರಾಮದಲ್ಲಿ 2013ರ ಆಗಸ್ಟ್-ಸೆಪ್ಟೆಂಬರ್ ತಿಂಗಳಲ್ಲಿ ಭುಗಿಲೆದ್ದ ಹಿಂಸಾಚಾರದ ನಂತರ ಅನಿವಾರ್ಯವಾಗಿ ಗ್ರಾಮ ತೊರೆದಿದ್ದ ಹಲವಾರು ಮುಸ್ಲಿಂ ಕುಟುಂಬಗಳನ್ನು ಮರಳಿ ಗ್ರಾಮಕ್ಕೆ ಕರೆ ತರುವ ಅಪೂರ್ವ ಕೈಂಕರ್ಯವನ್ನು ಕೈಗೆತ್ತಿಕೊಂಡವರು ಗ್ರಾಮದ ಮಾಜಿ ಮುಖ್ಯಸ್ಥ ಸಂಜೀವ್ ಪ್ರಧಾನ್. ತಮ್ಮ ಈ ಕನಸನ್ನು ಕಾರ್ಯರೂಪಕ್ಕೆ ತರಲು ಬಹಳಷ್ಟು ಶ್ರಮಿಸುತ್ತಿರುವ ಪ್ರಧಾನ್ ಇಲ್ಲಿಯ ತನಕ ಗ್ರಾಮ ತೊರೆದ ಸುಮಾರು 65 ಕುಟುಂಬಗಳ ಪೈಕಿ 30 ಕುಟುಂಬಗಳನ್ನು ಮರಳಿ ಬರಲು ಮನವೊಲಿಸುವಲ್ಲಿ ಸಫಲರಾಗಿದಾರೆ.

2013ರ ದಂಗೆಗಳ ಸಂದರ್ಭ ಹಲವಾರು ಮುಸ್ಲಿಂ ಕುಟುಂಬಗಳಿಗೆ ಆಶ್ರಯವೊದಗಿಸಿ, ರಕ್ಷಿಸಿ ಅಲ್ಲಿನ ಮಸೀದಿಯನ್ನೂ ಪ್ರಧಾನ್ ರಕ್ಷಿಸಿದ್ದರೆಂಬುದನ್ನು ಅವರಿಂದ ಸಹಾಯ ಪಡೆದ ಹಲವಾರು ಮುಸ್ಲಿಂ ಕುಟುಂಬಗಳು ಕೃತಜ್ಞತೆಯಿಂದ ಸ್ಮರಿಸುತ್ತವೆ. ಗ್ರಾಮದ ಮುಸ್ಲಿಂ ಕುಟುಂಬಗಳು ಯಾವುದೇ ಹಿಂಜರಿಕೆಯಿಲ್ಲದೆ ಸಂಜೀವ್ ಪ್ರಧಾನ್ ಅವರ ಮೇಲೆ ಅಚಲ ವಿಶ್ವಾವಿರಿಸಿದೆ. ಪ್ರಧಾನ್ ಕೂಡ ತಾವು ಜನರನ್ನು ಅವರ ವ್ಯಕ್ತಿತ್ವ ನೋಡಿ ಅಳೆಯುತ್ತೇನೆಯೇ ಹೊರತು ಧರ್ಮದ ಆಧಾರದಲ್ಲಲ್ಲ ಎಂದು ಹೇಳುತ್ತಾರೆ.

ಜಾಟ್ ಸಮುದಾಯಕ್ಕೆ ಸೇರಿದ ಪ್ರಧಾನ್ ಈ ಕೈಂಕರ್ಯದಿಂದ ಅವರದೇ ಸಮುದಾಯದ ಮಂದಿಯ ಟೀಕೆಗೆ ಗುರಿಯಾಗಿದ್ದಾರೆ. ಜಾಟರು ಈ ಗ್ರಾಮದಲ್ಲಿ ಬಹುಸಂಖ್ಯಾತರಾಗಿದ್ದಾರೆಂಬುದನ್ನು ಇಲ್ಲಿ ಸ್ಮರಿಸಬಹುದು. ಅವರು 2015ರಲ್ಲಿ ಗ್ರಾಮದ ಮುಖ್ಯಸ್ಥ ಹುದ್ದೆಯನ್ನು ಕಳೆದುಕೊಳ್ಳಲು ಅವರು ಮುಸ್ಲಿಮರಿಗೆ ಸಹಾಯ ಮಾಡಿದ್ದೂ ಒಂದು ಕಾರಣ ಎಂದು ಕೆಲವರು ಅಭಿಪ್ರಾಯ ಪಡುತ್ತಾರೆ.

ದಂಗೆಗಳ ಸಂದರ್ಭ ಮುಸ್ಲಿಂ ಕುಟುಂಬಗಳನ್ನು ಪರಿಹಾರ ಶಿಬಿರಗಳಿಗೆ ಸಾಗಿಸಿ ಅಲ್ಲಿಯೂ ಅವರಿಗೆ ರಕ್ಷಣೆ ನೀಡಿ ಈ ಸಂದರ್ಭ ಅವರ ಜಾನುವಾರುಗಳನ್ನೂ ನೋಡಿಕೊಂಡಿದ್ದರು ಪ್ರಧಾನ್.

‘‘ಹಿಂದು ಮತ್ತು ಮುಸ್ಲಿಂ ಸಮುದಾಯಗಳ ನಡುವೆ ಒಗ್ಗಟ್ಟಿನ ಅಗತ್ಯವಿದೆ, ಮುಸ್ಲಿಮರು ನಮ್ಮಂತಹ ರೈತರಿಗೆ ಬಹಳಷ್ಟು ಸಹಾಯ ಮಾಡುತ್ತಾರೆ ಹಲವು ವಿಧದಲ್ಲಿ ನಮಗೆ ಸಹಕರಿಸುತ್ತಾರೆ. ನಾವು ಪರಸ್ಪರ ಸಹೋದರತ್ವದಿಂದ ಬಾಳಬೇಕು, ಪರಸ್ಪರ ಗೌರವಿಸಬೇಕು, ಇನ್ನೂ ಹಲವು ಕುಟುಂಬಗಳನ್ನು ಮರಳಿ ಗ್ರಾಮಕ್ಕೆ ಕರೆತರಲು ಶ್ರಮಿಸುತ್ತೇನೆ’’ ಎಂದು ಅವರು ಹೇಳುತ್ತಾರೆ.
.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News