ಉ.ಪ್ರದೇಶ: ಬಜರಂಗದಳ ಕಾರ್ಯಕರ್ತರಿಂದ ಎಸ್ಪಿ ಮಾಜಿ ನಾಯಕಿ ಮೇಲೆ ಹಲ್ಲೆ; ಆರೋಪ

Update: 2018-10-09 09:41 GMT

ಹೊಸದಿಲ್ಲಿ, ಅ.9:  ತನ್ನ ಮೇಲೆ ಹಾಗೂ ತಂಡದ ಇತರ ಸದಸ್ಯರ ಮೇಲೆ ಬಜರಂಗದಳ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆಂದು ಸಮಾಜವಾದಿ ಪಕ್ಷದ ಮಾಜಿ ವಕ್ತಾರೆ ಪಂಖೂರಿ ಪಾಠಕ್ ಆರೋಪಿಸಿದ್ದಾರೆ.

ಶನಿವಾರ ಪಾಠಕ್ ಮತ್ತವರ ತಂಡ ಉತ್ತರ ಪ್ರದೇಶ ಪೊಲೀಸರ ಎನ್‍ಕೌಂಟರ್ ನಲ್ಲಿ ಪ್ರಾಣ ಕಳೆದುಕೊಂಡ ಇಬ್ಬರ ಕುಟುಂಬಗಳನ್ನು ಭೇಟಿಯಾಗಲು ಆಲಿಘರ್ ಜಿಲ್ಲೆಯ ಗ್ರಾಮವೊಂದಕ್ಕೆ ಭೇಟಿ ನೀಡಿತ್ತು. ಈ ಸಂದರ್ಭ ಘಟನೆ ನಡೆದಿದೆ ಎಂದು ಪಾಠಕ್ ಹೇಳಿದ್ದಾರೆ.

 ಬಜರಂಗದಳ ಕಾರ್ಯಕರ್ತರ ತಂಡದಲ್ಲಿದ್ದ ನಾಯಕನೊಬ್ಬ ಮೊದಲು ತಮ್ಮನ್ನು ಕೆಣಕಲು ಯತ್ನಿಸಿ ನಂತರ ದಾಳಿ ನಡೆಸಿದ್ದಾಗಿ ಪಾಠಕ್ ಟ್ವೀಟ್ ಮಾಡಿದ್ದು, ಈ ಟ್ವೀಟ್ ಗೆ ಅವರು ಮುಖ್ಯಮಂತ್ರಿ ಆದಿತ್ಯನಾಥ್, ಉತ್ತರ ಪ್ರದೇಶ ಪೊಲೀಸರು ಹಾಗೂ ರಾಜ್ಯ ಡಿಜಿಪಿ ಒ.ಪಿ. ಸಿಂಗ್ ಅವರನ್ನು ಟ್ಯಾಗ್ ಮಾಡಿದ್ದಾರೆ.

ತಮ್ಮ ಮೇಲಿನ ದಾಳಿ ಪೂರ್ವನಿಯೋಜಿತವಾಗಿತ್ತು ಎಂದು ದೂರಿದ ಆಕೆ ಆರೋಪಿಗಳನ್ನು ಬಂಧಿಸುವಂತೆ  ಸರಕಾರಕ್ಕೆ ಸವಾಲೆಸೆದಿದ್ದಾರೆ. ಕೇಸರಿ ಶಾಲುಗಳನ್ನು ಧರಿಸಿದ ವ್ಯಕ್ತಿಗಳ ಗುಂಪು ತಮ್ಮನ್ನು ಹಾಗೂ ತಮ್ಮ ತಂಡವನ್ನು ಸುತ್ತುವರಿದಿರುವ ವೀಡಿಯೋವೊಂದನ್ನೂ ಅವರು ಶೇರ್ ಮಾಡಿದ್ದಾರೆ.

“ಈ ಘಟನೆಗೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಪೊಲೀಸರು ಇನ್ನೂ ಕ್ರಮ ಕೈಗೊಂಡಿಲ್ಲ. ತಮ್ಮ ತಂಡದ ಕನಿಷ್ಠ ಮೂವರು ಸದಸ್ಯರ ಮೇಲೆ ಪೊಲೀಸರ ಕಣ್ಣೆದುರೇ ಹಲ್ಲೆ ನಡೆದಿದೆ ಹಾಗೂ ತಮ್ಮ ಕಾರುಗಳ ಮೇಲೆ ಕಲ್ಲೆಸೆಯಲಾಗಿದೆ,''ಎಂದು  ಅವರು ಹೇಳಿದರಲ್ಲದೆ ತಮಗೆ ಆಲಿಘರ್ ಪೊಲೀಸರ ಮೇಲೆ ವಿಶ್ವಾಸವಿಲ್ಲ ಎಂದಿದ್ದಾರೆ.

ಪಾಠಕ್ ಅವರ ಆರೋಪಗಳು ಸುಳ್ಳು ಹಾಗೂ ಆಧಾರರಹಿತ ಎಂದು ವಿಶ್ವ ಹಿಂದೂ ಪರಿಷದ್ ನಾಯಕರೊಬ್ಬರು ಪ್ರತಿಕ್ರಿಯಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News