ಮಳೆಹಾನಿ ಪರಿಹಾರ: ಸಿಎಂ ಬಳಿಗೆ ನಿಯೋಗ ತೆರಳಲು ಮಡಿಕೇರಿ ನಗರಸಭೆ ನಿರ್ಧಾರ

Update: 2018-10-09 11:32 GMT

ಮಡಿಕೇರಿ, ಅ.9 :ಇತ್ತೀಚೆಗೆ ಜಿಲ್ಲೆಯಲ್ಲಿ ಸಂಭವಿಸಿದ ಅತಿವೃಷ್ಟಿ ಹಾನಿಯಿಂದ ಮಡಿಕೇರಿ ನಗರದಲ್ಲಿ ಕೂಡ ಅನೇಕರು ಮನೆಗಳನ್ನು ಕಳೆದುಕೊಂಡಿದ್ದು, ಪರಿಹಾರ ವಿತರಣೆಯಲ್ಲಿ ಉಂಟಾಗಿರುವ ಗೊಂದಲಗಳ ನಿವಾರಣೆಗೆ ದಸರಾ ಕಳೆದ ನಂತರ ಶಾಸಕರು ಹಾಗೂ ಹಿರಿಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ವಿಶೇಷ ಸಭೆ ನಡೆಸಲು ಮಡಿಕೇರಿ ನಗರಸಭೆಯ ಸಾಮಾನ್ಯ ಸಭೆ ನಿರ್ಧರಿಸಿದೆ.

ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅತಿವೃಷ್ಟಿ ಹಾನಿಯಿಂದ ಮನೆ ಕಳೆದುಕೊಂಡವರಿಗೆ ಸೂಕ್ತ ರೀತಿಯಲ್ಲಿ ಪರಿಹಾರ ದೊರೆಯುತ್ತಿಲ್ಲವೆಂದು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಮಳೆಯಿಂದ ಕುಸಿದಿರುವ ಮಣ್ಣು ತೆರವು ಕಾರ್ಯಾಚರಣೆ ಸೇರಿದಂತೆ ನಗರದ ಶುಚಿತ್ವದ ಬಗ್ಗೆ ನಗರಸಭೆ ಗಮನ ಹರಿಸದ ಬಗ್ಗೆ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಎಸ್‍ಡಿಪಿಐ ಸದಸ್ಯ ಅಮಿನ್ ಮೊಹಿಸಿನ್ ಹಾಗೂ ಮನ್ಸೂರ್ ಮಾತನಾಡಿ, ಮನೆ ಕಳೆದುಕೊಂಡ ಸಂತ್ರಸ್ತರಿಗೆ ಮನೆಗಳನ್ನು ಪುನರ್ ನಿರ್ಮಿಸಿಕೊಡುವುದು ಮತ್ತು ಪರಿಹಾರ ನೀಡುವುದು ಮೊದಲ ಆದ್ಯತೆಯಾಗಬೇಕು. ಈ ಬಗ್ಗೆ ನಗರಸಭೆ ಯಾವ ರೀತಿಯ ತಯಾರಿ ಮಾಡಿಕೊಂಡಿದೆ ಎಂದು ಪ್ರಶ್ನಿಸಿದರು. 94ಸಿ ಮೂಲಕ ಅರ್ಜಿ ಸಲ್ಲಿಸಲಾಗಿದ್ದರೂ ಹಕ್ಕುಪತ್ರ ಸಿಗದೆ ಇರುವ ಸಂತ್ರಸ್ತರು ಮನೆಯ ಸೌಲಭ್ಯದಿಂದ ವಂಚಿತರಾಗುವ ಆತಂಕದಲ್ಲಿದ್ದಾರೆ ಎಂದು ಗಮನ ಸೆಳೆದರು.

ಸದಸ್ಯ ಕೆ.ಜಿ.ಪೀಟರ್ ಮಾತನಾಡಿ, ಕಳೆದ ಅನೇಕ ವರ್ಷಗಳಿಂದ ಕಂದಾಯ ಪಾವತಿಸುತ್ತಿರುವ ಕುಟುಂಬಗಳು ಕೂಡ ಇಂದು ಬೀದಿ ಪಾಲಾಗಿದ್ದು, ಪರಿಹಾರದ ಕುರಿತು ಯಾವುದೇ ಸ್ಪಷ್ಟತೆ ಇಲ್ಲ ಎಂದರು. ಮನೆ ಕಳೆದುಕೊಂಡವರಿಗೆ 50 ಸಾವಿರದಿಂದ 1 ಲಕ್ಷ ರೂ.ಗಳಷ್ಟು ನಷ್ಟ ಉಂಟಾಗಿದೆ. ಆದರೆ, ಕೇವಲ 3, 4 ಸಾವಿರ ಪರಿಹಾರ ನೀಡಿ ಅಧಿಕಾರಿಗಳು ಕೈತೊಳೆದುಕೊಳ್ಳುತ್ತಿದ್ದಾರೆ. ಪರಿಸ್ಥಿತಿ ಈ ರೀತಿ ಆದರೆ, ಸಂಕಷ್ಟದಲ್ಲಿರುವವರು ಏನು ಮಾಡಬೇಕೆಂದು ಪ್ರಶ್ನಿಸಿದರು. ಪರಿಹಾರ ವಿತರಣಾ ಕ್ರಮದ ಕುರಿತು ಮರು ಪರಿಶೀಲನೆ ನಡೆಸಬೇಕೆಂದು ಅವರು ಹೇಳಿದರು.

ಉಪಾಧ್ಯಕ್ಷ ಟಿ.ಎಸ್.ಪ್ರಕಾಶ್ ಮಾತನಾಡಿ, ಅತಿವೃಷ್ಟಿಯಿಂದ ಮಡಿಕಕೇರಿ ನಗರ ಸಂಕಷ್ಟದಲ್ಲಿದ್ದು, ಸಂತ್ರಸ್ತರಿಗೆ ಪರಿಹಾರ ವಿತರಿಸುವ ಸಂದರ್ಭ ಗೊಂದಲ ಉಂಟಾಗಿದೆ. ಇದರ ನಿವಾರಣೆಗೆ ಮುಖ್ಯಮಂತ್ರಿಗಳ ಬಳಿಗೆ ನಿಯೋಗ ತೆರಳುವುದು ಸೂಕ್ತವೆಂದು ಅಭಿಪ್ರಾಯಪಟ್ಟರು. ಪ್ರತಿಯೊಬ್ಬ ಫಲಾನುಭವಿಗಳಿಗು ಪರಿಹಾರ ನೀಡಬೇಕು. ಈ ಕುರಿತು ಒಮ್ಮತದ ತೀರ್ಮಾನದ ಮೂಲಕ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸಲಹೆ ನೀಡಿದರು.
ಬಿಜೆಪಿ ಸದಸ್ಯ ಪಿ.ಡಿ.ಪೊನ್ನಪ್ಪ ಮಾತನಾಡಿದ, ಮುಖ್ಯಮಂತ್ರಿಗಳ ಬಳಿಗೆ ನಿಯೋಗ ತೆರಳುವ ಬಗ್ಗೆ ಆಡಳಿತ ಮಂಡಳಿಗೆ ಯಾವುದೇ ಕಾಳಜಿ ಇಲ್ಲ. ಕಾಟಾಚಾರಕ್ಕೆ ಸಭೆಯಲ್ಲಿ ಚರ್ಚೆ ನಡೆಯುತ್ತಿದೆಯಷ್ಟೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಸಂದರ್ಭ ಸದಸ್ಯ ಅಮಿನ್ ಮೊಹಿಸಿನ್ ಮಾತನಾಡಿ, ಸ್ವಂತ ಜಾಗವಿದ್ದರು ಮನೆ ಕಳೆದುಕೊಂಡ ಪ್ರಕರಣಗಳಿವೆ. ಈ ರೀತಿಯ ಫಲಾನುಭವಿಗಳಿಗೆ ಮನೆ ನಿರ್ಮಿಸಿಕೊಳ್ಳಲು 7 ಲಕ್ಷ ರೂ. ನೀಡುವಂತೆ ಮನವಿ ಮಾಡಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕೆಂದು ಸಲಹೆ ನೀಡಿದರು.

ಪಿ.ಡಿ.ಪೊನ್ನಪ್ಪ ಮಾತನಾಡಿ, ಸರ್ಕಾರದ ಭರವಸೆ ಬರುವವರೆಗೆ ಕಾಯದೆ ತುರ್ತು ಕ್ರಮಗಳನ್ನು ಕೈಗೊಳ್ಳುವಂತೆ ಸಲಹೆ ನೀಡಿದರು. ದಸರಾ ನಂತರ ವಿಶೇಷ ಸಭೆ ಕರೆದು ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ಕಂದಾಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುವಂತೆ ತಿಳಿಸಿದರು.

ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಮಾತನಾಡಿ, ದಸರಾ ಕಳೆದ ನಂತರ ಶಾಸಕರು ಹಾಗೂ ಅಧಿಕಾರಿಗಳ ವಿಶೇಷ ಸಭೆ ನಡೆಸಿ ಪರಿಹಾರ ವಿತರಣೆಯಲ್ಲಿ ಉಂಟಾಗಿರುವ ಗೊಂದಲವನ್ನು ನಿವಾರಿಸಲಾಗುವುದು ಮತ್ತು ಸರ್ಕಾರದ ಬಳಿಗೆ ನಿಯೋಗ ತೆರಳಲಾಗುವುದೆಂದು ಭರವಸೆ ನೀಡಿದರು.

ಸಂತ್ರಸ್ತರು ಪುನರ್ ಅರ್ಜಿ ಸಲ್ಲಿಸಬಹುದು
ನಗರಸಭಾ ಕಾರ್ಯದರ್ಶಿ ತಾಹಿರ್ ನಗರಸಭೆ ಕೈಗೊಂಡಿರುವ ಪರಿಹಾರ ವಿತರಣೆಯ ಕುರಿತು ಸಭೆಗೆ ಮಾಹಿತಿ ನೀಡಿದರು. ಕಳೆದುಕೊಂಡ ಮನೆಯ ಸಂಪೂರ್ಣ ದಾಖಲೆ ಇರುವ ಶೇ.90 ರಷ್ಟು ಸಂತ್ರಸ್ತರಿಗೆ ಈಗಾಗಲೆ ಪರಿಹಾರ ನೀಡಲಾಗಿದೆ. ಪಡೆದಿರುವ ಪರಿಹಾರದ ಮೊತ್ತ ಅಲ್ಪ ಪ್ರಮಾಣದ್ದು ಎನ್ನುವ ಆಕ್ಷೇಪಗಳಿದ್ದಲ್ಲಿ ಫಲಾನುಭವಿಗಳಿಗೆ ಪುನರ್ ಅರ್ಜಿ ಸಲ್ಲಿಸಲು ಅವಕಾಶವಿದೆ. ಕೇಂದ್ರ ಪ್ರಾಕೃತಿಕ ವಿಕೋಪ ನಿಯಮದಡಿ ಪರಿಹಾರ ಕಾರ್ಯ ನಡೆಯುತ್ತಿದ್ದು, ಸಂಪೂರ್ಣ ಮನೆ ಹಾನಿಯಾಗಿದ್ದರೆ ಸರಕಾರ ನಿಗಧಿ ಪಡಿಸಿದ ಪರಿಹಾರದ ಮೊತ್ತವನ್ನು ನೀಡಲಾಗುವುದು. ತಹಶೀಲ್ದಾರ್ ಕಚೇರಿಯಲ್ಲಿ ಇನ್ನು ಕೆಲವು ಅರ್ಜಿಗಳು ಬಾಕಿ ಉಳಿದಿದ್ದು, ಪರಿಶೀಲಿಸಲಾಗುತ್ತಿದೆ. 94ಸಿ ಯಡಿ ಅರ್ಜಿ ಸಲ್ಲಿಸಿ ಮನೆ ಕಳೆದುಕೊಂಡವರಿಗೆ ಪರಿಹಾರ ನೀಡುವ ಕುರಿತು ಈಗಾಗಲೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ವಾಸಕ್ಕೆ ಯೋಗ್ಯವಲ್ಲದ ಜಾಗವೆಂದು ಗುರುತಿಸಲ್ಪಟ್ಟರೆ ಆ ಜಾಗವನ್ನು ಸರ್ಕಾರವೆ ಸ್ವಾಧೀನಕ್ಕೆ ಪಡೆದು ಪರ್ಯಾಯ ಪ್ರದೇಶದಲ್ಲಿ ಮನೆ ನಿರ್ಮಿಸಿಕೊಡಲಾಗುವುದೆಂದು ತಾಹಿರ್ ತಿಳಿಸಿದರು.

1 ಮನೆಯಿಂದ 3 ಅರ್ಜಿ 
ಎಸ್‍ಡಿಪಿಐ ಸದಸ್ಯ ಮನ್ಸೂರ್ ಮಾತನಾಡಿ, ಪರಿಹಾರದ ಮೊತ್ತ ಪಡೆಯುವ ಸಂದರ್ಭ ದುರುಪಯೋಗ ಪ್ರಕರಣ ಕಂಡು ಬಂದಿದ್ದು, ಒಂದೊಂದು ಮನೆಯಿಂದ ಮೂರು ಮಂದಿ ಅರ್ಜಿ ಸಲ್ಲಿಸಿದ ಪ್ರಸಂಗವೂ ನಡೆದಿದೆ. ಈ ರೀತಿ ಅರ್ಜಿ ಸಲ್ಲಿಸಿದವರಿಗೆ ಕೂಡ ಪರಿಹಾರದ ಚೆಕ್ ಸಿಕ್ಕಿದೆಯೆಂದು ಸಭೆಯ ಗಮನ ಸೆಳೆದರು. ಕಾರ್ಯದರ್ಶಿ ತಾಹಿರ್ ಮಾತನಾಡಿ ಈರೀತಿಯ 65 ಅರ್ಜಿಗಳು ಪತ್ತೆಯಾಗಿದ್ದು, ತಹಶೀಲ್ದಾರರ ಮಟ್ಟದಲ್ಲಿ ಅರ್ಜಿಗಳು ವಿಲೇವಾರಿಯಾಗಿ ಚೆಕ್ ಸಿದ್ಧವಾಗುವುದರಿಂದ ಅಂತಹ ನ್ಯೂನ್ಯತೆ ಇರುವ ಅರ್ಜಿಗಳು ಪುರಸ್ಕರಿಸಲ್ಪಡುವುದಿಲ್ಲವೆಂದು ಸ್ಪಷ್ಟಪಡಿಸಿದರು.

ಮಣ್ಣು ತೆಗೆದಿಲ್ಲ
ನಗರದ ಕೆಲವು ಬಡಾವಣೆಗಳಲ್ಲಿ ಬರೆ ಕುಸಿತದಿಂದ ಮನೆಗಳಿಗೆ ಹಾನಿಯಾಗಿದ್ದು, ಇಲ್ಲಿಯವರೆಗೂ ಕುಸಿದ ಮಣ್ಣನ್ನು ತೆರವು ಗೊಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿಲ್ಲವೆಂದು ವಿರೋಧ ಪಕ್ಷದ ಸದಸ್ಯರು ಆರೋಪಿಸಿದರು.

ವಿಷಯ ಪ್ರಸ್ತಾಪಿಸಿದ ಸ್ಥಾಯಿ ಸಮಿತಿ ಅಧ್ಯಕ್ಷ ಉಣ್ಣಿಕೃಷ್ಣ, ನಗರದ ವಿವಿಧೆಡೆಗಳಲ್ಲಿ ಕೇವಲ ಕಾರ್ಮಿಕರ ಸಹಾಯದಿಂದಷ್ಟೆ ಮಣ್ಣನ್ನು ತೆಗೆಯಲು ಸಾಧ್ಯ. ಹಿಟಾಚಿ-ಜೆಸಿಬಿ ಯಂತ್ರಗಳು ತೆರಳಲಾಗದ ಪ್ರದೇಶಗಳಲ್ಲಿ ಮಾನವ ಶಕ್ತಿಯನ್ನು ಬಳಸಿಕೊಂಡು ಹೆಚ್ಚುವರಿ ಕಾರ್ಮಿಕರ ಮೂಲಕ ಮಣ್ಣು ತೆರವು ಕಾರ್ಯಾಚರಣೆ ನಡೆಸಬೇಕಾಗಿತ್ತು. ಆದರೆ, ನಗರಸಭೆ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಆರೋಪಿಸಿದರು. ನಿಮ್ಮಿಂದ ಸಾಧ್ಯವಾಗದಿದ್ದಲ್ಲಿ ನಾವು ಮಾಡಿ ತೋರಿಸುತ್ತೇವೆ, ನಮಗೆ ಮಾಡಲು ಬಿಡಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸದಸ್ಯ ಕೆ.ಎಸ್.ರಮೇಶ್ ಮಾತನಾಡಿ, ಮಳೆ ಹಾನಿ ಕಾಮಗಾರಿಗೆಂದು ಜಿಲ್ಲಾಧಿಕಾರಿಗಳು ಈಗಾಗಲೆ 15 ಲಕ್ಷ ರೂ.ಗಳನ್ನು ನೀಡಿದ್ದು, 6 ಲಕ್ಷ ರೂ. ಖರ್ಚಾಗುತ್ತಿದೆ ಎಂದು ಹೇಳಲಾಗುತ್ತಿದೆ. ಆದರೆ, ಕೆಲಸ ಎಲ್ಲಿ ಆಗಿದೆಯೆಂದು ಪ್ರಶ್ನಿಸಿದರು. ಚರಂಡಿಗಳು ನೀರು ಹರಿಯದಂತೆ ಹದಗೆಟ್ಟಿದೆ. ಕೇವಲ 30 ಕಾರ್ಮಿಕರಿಂದ ಮಣ್ಣು ತೆರವು ಅಥವಾ ಸ್ವಚ್ಛತಾ ಕಾರ್ಯ ಸಾಧ್ಯವಿಲ್ಲ. ದಸರಾ ಹಬ್ಬ ಆಗಮಿಸಿದ್ದು, ಪ್ರತಿಯೊಂದು ಬಡಾವಣೆಯಲ್ಲೂ ಸ್ವಚ್ಛತಾ ಕಾರ್ಯ ನಡೆಯಬೇಕು. ರಸ್ತೆ ಗುಂಡಿ ಮುಚ್ಚಲು 23 ಲಕ್ಷ ರೂ.ಗಳ ಟೆಂಡರ್ ನೀಡಲಾಗಿದೆ ಎಂದು ಹೇಳಲಾಗುತ್ತಿದೆಯಷ್ಟೆ. ಇಲ್ಲಿಯವರೆಗೆ ಕಾಮಗಾರಿ ಆರಂಭವಾಗಿಲ್ಲ. ಬುಧವಾರದಿಂದ ಕರಗ ದೇವತೆಗಳ ಸಂಚಾರ ಆರಂಭವಾಗುತ್ತಿದ್ದು, ರಸ್ತೆಗಳು ದುಸ್ಥಿತಿಯಿಂದ ಕೂಡಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡಬಾರದೆಂದು ಹೇಳದ ಕೆ.ಎಸ್.ರಮೇಶ್ ಕೀಳು ಮಟ್ಟದ ರಾಜಕೀಯದಿಂದ ಮಡಿಕೇರಿ ಹಾಳಾಗಿದೆ ಎಂದು ಟೀಕಿಸಿದರು.

ಸದಸ್ಯೆ ಅನಿತಾ ಪೂವಯ್ಯ ಮಾತನಾಡಿ, ಪ್ರತಿ ವರ್ಷ ಕರಗಗಳು ಸಂಚಾರ ಆರಂಭಿಸುವಾಗ ರಸ್ತೆ ಗುಂಡಿ ಮುಚ್ಚುವ ಕಾರ್ಯ ಕೈಗೊಳ್ಳಲಾಗುತ್ತಿದೆ. ಮಹದೇವಪೇಟೆ ರಸ್ತೆ ಸಂಪೂರ್ಣವಾಗಿ ಹಾಳಾಗಿದ್ದು, ಕರಗಗಳು ಬರುವುದಾದರು ಹೇಗೆ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಮಳೆಯ ಕಾರಣದಿಂದ ಕಾಮಗಾರಿಯನ್ನು ಆರಂಭಿಸಿಲ್ಲವೆಂದು ಸಮರ್ಥಿಸಿಕೊಂಡರು. ಬಿದ್ದಿರುವ ಮಣ್ಣಿನ ರಾಶಿಯನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ಚುರುಕುಗೊಳಿಸುವುದಾಗಿ ಭರವಸೆ ನೀಡಿದರು.

ಉಪಾಧ್ಯಕ್ಷ ಟಿ.ಎಸ್.ಪ್ರಕಾಶ್ ಮಾತನಾಡಿ, ಗ್ರಾಮೀಣ ಭಾಗದ ಪ್ರಯಾಣಿಕರು ಅಪಾಯದ ಅರಿವಿಲ್ಲದೆ ಹಳೆಯ ಖಾಸಗಿ ಬಸ್ ನಿಲ್ದಾಣದ ಶಿಥಿಲಾವಸ್ಥೆಯ ಕಟ್ಟಡದಲ್ಲಿ ಬಸ್‍ಗಾಗಿ ಕಾಯುತ್ತಿರುತ್ತಾರೆ. ಯಾವಾಗ ಬೇಕಾದರೂ ಅನಾಹುತ ಸಂಭವಿಸಬಹುದೆಂದು ಎಚ್ಚರಿಸಿದರು. 

ಈ ಸಂದರ್ಭ ಮಾತನಾಡಿದ ಕಾಂಗ್ರೆಸ್ ಸದಸ್ಯ ಹೆಚ್.ಎಂ.ನಂದ ಕುಮಾರ್, ಪ್ರಯಾಣಿಕರಿಗೆ ಸುರಕ್ಷಿತ ಸ್ಥಳದಲ್ಲಿ ಬಸ್ ಶೆಲ್ಟರ್ ಒಂದನ್ನು ನಿರ್ಮಿಸುವಂತೆ ತಿಳಿಸಿದರು. ಸುರಭಿ ಕಟ್ಟಡದ ಬಳಿ ಶೆಲ್ಟರ್ ನಿರ್ಮಿಸುವಂತೆ ಇತರ ಸದಸ್ಯರು ಸಲಹೆ ನೀಡಿದರು. 

ಅಶುಚಿತ್ವದ ಸ್ಟೋನ್‍ಹಿಲ್
ನಗರದ ತ್ಯಾಜ್ಯದ ರಾಶಿಯನ್ನು ಸುರಿಯುತ್ತಿರುವ ಸ್ಟೋನ್‍ಹಿಲ್ ಭಾಗದ ಅಶುಚಿತ್ವದ ವಾತಾವರಣದಿಂದ ಸುಬ್ರಹ್ಮಣ್ಯ ನಗರ ಸೇರಿದಂತೆ ಸುತ್ತಮುತ್ತಲ ಬಡಾವಣೆಗಳಲ್ಲಿ ಉಂಟಾಗಿರುವ ಪರಿಸರ ಮಾಲಿನ್ಯ ಮತ್ತು ನೊಣಗಳ ಹಾವಳಿಯ ಬಗ್ಗೆ ಸದಸ್ಯ ಪಿ.ಡಿ. ಪೊನ್ನಪ್ಪ ಸಭೆಯ ಗಮನ ಸೆಳೆದರು. ಮನೆ ಮನೆ ಕಸ ಸಂಗ್ರಹದ ಸಂದರ್ಭ ಒಣ ಕಸ ಮತ್ತು ಹಸಿ ಕಸ ಬೇರ್ಪಡಿಸಿ ಸಂಗ್ರಹಿಸುವ ಕ್ರಮ ಜಾರಿಗೆ ಬರಬೇಕು. ಮೊದಲ ಹಂತದಲ್ಲಿ ಎರಡು ಮೂರು ಬಡಾವಣೆಗಳಲ್ಲಿ ಪ್ರಾಯೋಗಿಕವಾಗಿ ನಿಯಮ ಬದ್ಧವಾಗಿ ಕಸ ಸಂಗ್ರಹಕ್ಕೆ ಕ್ರಮ ಕೈಗೊಳ್ಳಬೇಕೆಂದರು.

ಸದಸ್ಯ ಕೆ.ಎಸ್. ರಮೇಶ್ ಮಾತನಾಡಿ, ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿ ಕಸ ವಿಲೇವಾರಿ ವೈಜ್ಞಾನಿಕವಾಗಿ ನಡೆಯುತ್ತಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು. ಈ ಹಿಂದೆ ಯಂತ್ರಗಳ ಮೂಲಕ ಕಸಗಳನ್ನು ಬೇರ್ಪಡಿಸಿ ಪ್ಲಾಸ್ಟಿಕ್‍ಗಳನ್ನು ಪುನರ್ ಬಳಕೆಗಾಗಿ ಪ್ಲಾಸ್ಟಿಕ್ ಕೇಕ್‍ಗಳನ್ನಾಗಿ ಪರಿವರ್ತಿಸಲಾಗುತ್ತಿತ್ತು. ಹಸಿ ಕಸದಿಂದ ಗೊಬ್ಬರವನ್ನು ತಯಾರಿಸಲಾಗುತ್ತಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ  ಯಂತ್ರಗಳು ದುರಸ್ತಿಗೀಡಾಗಿ ಯಾವುದೇ ವೈಜ್ಞಾನಿಕ ಕ್ರಮಗಳನ್ನು ಅನುಸರಿಸುತ್ತಿಲ್ಲ. ಎಲ್ಲೆಂದರಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳು ಬಿದ್ದಿದ್ದು, ಕಸ ವಿಲೇವಾರಿಯ ಈ ಬೆಟ್ಟ ಅಪಾಯದ ಅಂಚಿನಲ್ಲಿದೆ. ಕೆಲವು ವರ್ಷಗಳ ಹಿಂದೆ ಕಸ ವಿಲೇವಾರಿಯನ್ನು ಕ್ರಮ ಬದ್ಧವಾಗಿ ಮಾಡಬೇಕೆಂದು 6 ಏಕರೆ ಜಾಗ ಮಂಜೂರು ಮಾಡಲಾಗಿತ್ತು. ಆದರೆ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ರಮೇಶ್ ಅಸಮಾಧಾನ ವ್ಯಕ್ತಪಡಿಸಿದರು.

ಗುಜರಿ ಅಂಗಡಿ ತೆರವುಗೊಳಿಸಿ
ಸದಸ್ಯೆ ಅನಿತಾ ಪೂವಯ್ಯ ಮಾತನಾಡಿ, ನಗರದೊಳಗೆ ಕಾರ್ಯ ನಿರ್ವಹಿಸುತ್ತಿರುವ ಗುಜರಿ ಅಂಗಡಿಗಳನ್ನು ತೆರವುಗೊಳಿಸುವಂತೆ ಒತ್ತಾಯಿಸಿದರು. ಹಲವು ಸಭೆಗಳಲ್ಲಿ ಈ ಬಗ್ಗೆ ನಿರ್ಣಯ ಮಾಡಿದ್ದರು, ಯಾವುದೇ ಕ್ರಮ ಕೈಗೊಂಡಿಲ್ಲ. ಗುಜರಿ ಅಂಗಡಿಗಳಿಂದ ನಗರದ ಸ್ವಚ್ಛತೆಗೆ ಧಕ್ಕೆಯಾಗಿದೆ ಎಂದರು. ಸದಸ್ಯ ಉಣ್ಣಿ ಕೃಷ್ಣ ಮಾತನಾಡಿ, ಸ್ಟೋನ್ ಹಿಲ್ ಬಳಿ ಗುಜರಿ ಅಂಗಡಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಸಲಹೆ ನೀಡಿದರು.
ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಮಾತನಾಡಿ, ಸಮರ್ಪಕ ಕಸ ವಿಲೇವಾರಿಗಾಗಿ ಅಗತ್ಯ ನೆರವು ಕೋರಲು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯುವುದಾಗಿ ತಿಳಿಸಿದರು. 

ಕಸಾಯಿಖಾನೆ ಸ್ವಚ್ಛವಿಲ್ಲ
ನೂತನ ಮಾರುಕಟ್ಟೆ ಅವ್ಯವಸ್ಥೆ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದು ಕಸಾಯಿಖಾನೆ ಇಲ್ಲದೆ ಅವೈಜ್ಞಾನಿಕ ರೂಪದಲ್ಲಿ ಕುರಿಗಳನ್ನು ಅಶುಚಿತ್ವದ ವಾತಾವರಣದಲ್ಲಿ ವಧೆ ಮಾಡುವ ಕಾರ್ಯ ನಡೆಯುತ್ತಿದೆ ಎಂದು ಸದಸ್ಯರು ಬೇಸರ ವ್ಯಕ್ತಪಡಿಸಿದರು. ಸದಸ್ಯರಾದ ಕೆ.ಜಿ. ಪೀಟರ್, ತಜಸುಂ, ಮನ್ಸೂರ್, ಮಾರುಕಟ್ಟೆ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಿ ವ್ಯಾಪಾರಕ್ಕೆ ಅವಕಾಶ ಕಲ್ಪಿಸಬೇಕು ಮತ್ತು ಕಸಾಯಿಖಾನೆಯನ್ನು ವೈಜ್ಞಾನಿಕ ರೂಪದಲ್ಲಿ ಸುಸಜ್ಜಿತವಾಗಿ ನಿರ್ಮಿಸಬೇಕೆಂದು ಒತ್ತಾಯಿಸಿದರು. ಆದರೆ, ಅಧಿಕಾರಿಗಳು ಕಸಾಯಿಖಾನೆ ಬಗ್ಗೆ ತಾಂತ್ರಿಕ ಅಡಚಣೆಯ ಕಾರಣವನ್ನು ನೀಡಿ ಮತ್ತೊಮ್ಮೆ ಯೋಜನೆಯನ್ನು ರೂಪಿಸಬೇಕಾಗಿದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು. ಪೌರಾಯುಕ್ತ ರಮೇಶ್ ಸಭೆಯಲ್ಲಿ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News