ಚಿಕ್ಕಮಗಳೂರು: ಇಬ್ಬರು ಕಡವೆ ಭೇಟೆಗಾರರ ಬಂಧನ

Update: 2018-10-09 11:55 GMT

ಚಿಕ್ಕಮಗಳೂರು, ಅ.9: ಅಕ್ರಮವಾಗಿ ಕಾಡಿನೊಳಗೆ ನುಗ್ಗಿ ವನ್ಯಜೀವಿಗಳ ಬೇಟೆಯಾಡುತ್ತಿದ್ದ ಇಬ್ಬರನ್ನು ಬಂಧಿಸಿರುವ ಅರಣ್ಯ ಇಲಾಖೆ ಸಿಬ್ಬಂದಿ ಕಡವೆಯ 20 ಕೆ.ಜಿ ಹಸಿ ಮಾಂಸವನ್ನು ವಶಪಡಿಸಿಕೊಂಡಿದ್ದಾರೆ.

ಖಚಿತ ಮಾಹಿತಿಯ ಮೇರೆಗೆ ವಲಯ ಅರಣ್ಯಾಧಿಕಾರಿ ಶಿಲ್ಪಾ ನೇತೃತ್ವದಲ್ಲಿ ಮಂಗಳವಾರ ಬೆಳಗ್ಗೆ 6 ಗಂಟೆ ವೇಳೆ ದಾಳಿ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿ ತಾಲೂಕಿನ ಕಂಬಿಹಳ್ಳಿಯಿಂದ ಮುಳ್ಳಯ್ಯನಗಿರಿಗೆ ಹೋಗುವ ಮಾರ್ಗದ ಅತ್ತಿಗೆರೆ ಸಮೀಪ ಕಡವೆಯ ಹಸಿ ಮಾಂಸವನ್ನು ಸಾಗಿಸುತ್ತಿದ್ದ ಇಬ್ಬರನ್ನು ಬಂಧಿಸಿದ್ದಾರೆ. ಅವರ ಜೊತೆಗಿದ್ದ 7 ಜನ ತಪ್ಪಿಸಿಕೊಂಡಿದ್ದು, ಅವರಿಗಾಗಿ ಹುಡುಕಾಟ ಮುಂದುವರಿದಿದೆ.

ಬಂಧಿತರನ್ನು ಕಂಬಿಹಳ್ಳಿ ಗ್ರಾಮದ ಪ್ರಕಾಶ್ ಮತ್ತು ಮಂಜುನಾಥ್ ಎಂದು ಗುರುತಿಸಲಾಗಿದೆ. ಬಂಧಿತರಿಂದ ಹಸಿಮಾಂಸದೊಂದಿಗೆ 2 ಟಾರ್ಚ್, ಉರುಳಿಗಾಗಿ ಬಳಸುವ 3 ಕೇಬಲ್ ತಂತಿಗಳು, ಬಂದೂಕಿನ ತೋಪುಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಪಡೆದುಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News