ಬೀರೂರು: ಯುವಕನ ಕೊಲೆ ಪ್ರಕರಣ; ಆರೋಪಿ ಬಂಧನ

Update: 2018-10-09 12:44 GMT

ಬೀರೂರು, ಅ.9: ಪಟ್ಟಣದ ಸಮೀಪದ ಬಿ.ಕೋಡಿಹಳ್ಳಿ ರಸ್ತೆಯ ನಾಗದೇವನಹಳ್ಳಿ ಚೌಡಮ್ಮ ದೇವಸ್ಥಾನದ ಬಳಿಯ ಬೀರೂರು ಬೀರದೇವರ ಗುಡಿ ಹಿಂಬಾಗದ ನಿವಾಸಿ ನಂಜುಂಡಪ್ಪನವರ ಮಗ ಮೋಹನ್‍ರ ಬರ್ಬರ ಹತ್ಯೆಗೆ ಸಂಬಂಧಪಟ್ಟಂತೆ ತರೀಕೆರೆಯ ತುದಿಪೇಟೆ ನಿವಾಸಿ ದಾಸಪ್ಪ ಎಂಬವರ ಮಗ ಶಿವರಾಜನನ್ನು ಬೀರೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅ.5ರಂದು ಶುಕ್ರವಾರ ಬೆಳಗ್ಗೆ ಮನೆಯಲ್ಲಿ ದೇವರ ಪೂಜೆಗೆಂದು ಬೇವಿನ ಸೊಪ್ಪು ತರಲು ಹೋಗಿದ್ದ ಮೋಹನನನ್ನು ಅಡ್ಡಗಟ್ಟಿದ ಶಿವರಾಜ ಲಿಫ್ಟ್ ಕೊಡಿ ಎಂದು ಕೇಳಿದ್ದಾನೆ. ಬಳಿಕ ದೇವಸ್ಥಾನದ ಬಳಿ ಮೋಹನ ತನ್ನ ಮೊಬೈಲ್ ಪೋನ್‍ಗೆ ಕರೆ ಬಂದಿದೆ ಎಂದು ಮೊಬೈಲ್ ತೆಗೆದು ನೋಡಿಕೊಂಡು ನಿಂತಿದ್ದ ವೇಳೆ, ಅಲ್ಲೆ ಬಿದ್ದಿದ್ದ ದಪ್ಪವಾದ ಮರದ ದೊಣ್ಣೆಯನ್ನು ತೆಗೆದುಕೊಂಡ ಶಿವರಾಜ ಮೋಹನ್ ತಲೆಯ ಹಿಂಭಾಗಕ್ಕೆ ಬಲವಾಗಿ ಬಾರಿಸಿದ್ದಾನೆ. ಇದರಿಂದ ಸ್ಥಳದಲ್ಲೇ ಮೃತಪಟ್ಟ ಮೋಹನ ಮೃತಪಟ್ಟದ್ದನ್ನು ತಿಳಿದ ಶಿವರಾಜ್ ಮೃತದೇಹವನ್ನು ಸ್ವಲ್ಪ ದೂರ ಎಳೆದುಕೊಂಡು ಹೋಗಿ ಪೊದೆಯೊಳಕ್ಕೆ ಎಸೆದು ಟಿವಿಎಸ್ ಸ್ಕೂಟರನ್ನು ತೆಗೆದುಕೊಂಡು ಹೋಗಿದ್ದ ಎಂದು ತಿಳಿದು ಬಂದಿದೆ.

ನಂತರ ಶಿವರಾಜ, ಟಿವಿಎಸ್ ಎಕ್ಸ್‍ಎಲ್ ಸ್ಕೂಟರ್ ಲ್ಲಿ ತಾನು ಓಡಾಡಿದರೆ ಪೊಲೀಸರ ಕಣ್ಣಿಗೆ ಬೀಳಬಹುದು ಎಂಬ ಭಯದಿಂದ ಭದ್ರಾವತಿಯ ಗ್ಯಾರೆಜ್‍ವೊಂದರಲ್ಲಿ ಮಾರಾಟ ಮಾಡಲು ಮುಂದಾಗಿದ್ದು, ಈ ವೇಳೆ ಪೊಲೀಸರ ಬಲೆಗೆ ಬಿದ್ದಿದ್ದಾನೆಂದು ತಿಳಿದು ಬಂದಿದೆ.

ಈ ಪ್ರಕರಣದ ಬಗ್ಗೆ ತನಿಖೆ ಕೈಗೊಂಡ ಪೊಲೀಸ್ ವೃತ್ತ ನಿರೀಕ್ಷಕ ಸತ್ಯನಾರಾಯಣ ಸ್ವಾಮಿ, ಎಸ್ಪಿ ಅಣ್ಣಾಮಲೈ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅಣ್ಣಪ್ಪ ನಾಯಕರವರ ನಿರ್ದೇಶನದಂತೆ ತರೀಕೆರೆ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ತಿರುಮಲೇಶ್‍ರವರ ಮಾರ್ಗದರ್ಶನದಂತೆ ಆರೋಪಿಯ ಪತ್ತೆ ಬಗ್ಗೆ ಬೀರೂರು ಪೊಲೀಸ್ ಠಾಣೆಯ ಪಿಎಸ್ಸೈ ರಾಜಶೇಖರ್ ಮತ್ತು ಠಾಣೆಯ ಅಪರಾಧ ವಿಭಾಗದ ಸಿಬ್ಬಂದಿಯಾದ ವೇದಮೂರ್ತಿ, ಕಾನ್‍ಸ್ಟೇಬಲ್‍ಗಳಾದ ಡಿ.ವಿ.ಹೇಮಂತ ಕುಮಾರ್ ಮತ್ತು ಬಿ.ಜಿ.ಮಧುರವರ ತಂಡವನ್ನು ರಚಿಸಲಾಗಿತ್ತು.

ಹತ್ಯೆಯ ಜಾಡು ಹಿಡಿದ ತಂಡವು ತರೀಕೆರೆ ಭದ್ರಾವತಿ ಕಡೆಗಳಲ್ಲಿ ಅಡ್ಡಾಡಿ ಆರೋಪಿಯ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಭದ್ರಾವತಿಯಲ್ಲಿ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News