ಕೊಡಗಿಗೆ 10 ಸಾವಿರ ಕೋಟಿ ರೂ. ವಿಶೇಷ ಪ್ಯಾಕೇಜ್ ನೀಡಿ: ಕೇಂದ್ರಕ್ಕೆ ವೀರಪ್ಪ ಮೊಯ್ಲಿ ಆಗ್ರಹ

Update: 2018-10-09 18:31 GMT

ಮಡಿಕೇರಿ, ಅ.9 : ಕೊಡಗಿನಲ್ಲಿ ಇತ್ತೀಚೆಗೆ ಸಂಭವಿಸಿದ ಪ್ರಾಕೃತಿಕ ವಿಕೋಪದ ಕುರಿತು ಸಮಗ್ರ ಮಾಹಿತಿಯನ್ನು ಪಡೆಯಲಾಗಿದ್ದು, ಕೇಂದ್ರ ಸರಕಾರ ಜಿಲ್ಲೆಗೆ 10 ಸಾವಿರ ಕೋಟಿ ರೂ. ವಿಶೇಷ ಪ್ಯಾಕೇಜ್ ಘೋಷಿಸಬೇಕೆಂದು ಸಂಸದೀಯ ಹಣಕಾಸು ಸಮಿತಿಯ ಅಧ್ಯಕ್ಷ ಎಂ.ವೀರಪ್ಪ ಮೊಯ್ಲಿ ಒತ್ತಾಯಿಸಿದ್ದಾರೆ.

ನಗರದ ಸುದರ್ಶನ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗಿನಲ್ಲಿ ಸಂಭವಿಸಿರುವ ಅತಿವೃಷ್ಟಿ ಹಾನಿಗೆ ಸ್ಥಳೀಯ ಜನರು ಕಾರಣರಲ್ಲ. ಬದಲಿಗೆ ಇದೊಂದು ಪ್ರಾಕೃತಿಕ ವಿಕೋಪವಷ್ಟೆ ಎಂದು ಅಭಿಪ್ರಾಯಪಟ್ಟರು. ಕೊಡಗಿನ ಎಲ್ಲಾ ನಷ್ಟವನ್ನು ತುಂಬಲು ಕೇವಲ ರಾಜ್ಯ ಸರ್ಕಾರದಿಂದ ಸಾಧ್ಯವಿಲ್ಲ. ಕೇಂದ್ರ ಸರ್ಕಾರ ಎನ್‍ಡಿಆರ್‍ಎಫ್ ಪರಿಹಾರ ಕಾರ್ಯವನ್ನು ಕೈಗೊಂಡರೆ ಮಾತ್ರ ಸಾಲದು, ವಿಶೇಷ ಪ್ಯಾಕೇಜನ್ನು ಘೋಷಿಸುವ ಅಗತ್ಯವಿದೆ. ಇದರೊಂದಿಗೆ ಮತ್ತೊಂದು ಜಿಯಾಲಜಿಕಲ್ ಸರ್ವೆ ನಡೆಸುವ ಅನಿವಾರ್ಯತೆಯೂ ಇದೆ ಎಂದರು.

ಅತಿವೃಷ್ಟಿ ಹಾನಿಗೆ ಕೊಡಗು ಸಿಲುಕಿ ಕೊಂಡಾಗ ಕೊಡಗು ಜಿಲ್ಲಾಡಳಿತದ ಕಾರ್ಯ ವೈಖರಿ ನಿಜಕ್ಕೂ ಶ್ಲಾಘನೀಯವೆಂದು ಮೆಚ್ಚುಗೆ ವ್ಯಕ್ತಪಡಿಸಿದರು. ನವೆಂಬರ್ 2 ರಂದು ಹಣಕಾಸು ಸಮಿತಿಯು ಪ್ರಾಕೃತಿಕ ವಿಕೋಪಕ್ಕೆ ತುತ್ತಾದ ಕೇರಳ ರಾಜ್ಯಕ್ಕೆ ಭೇಟಿ ನೀಡಿ ಮಾಹಿತಿಯನ್ನು ಸಂಗ್ರಹಿಸಲಿದೆ. ನವೆಂಬರ್ ಎರಡನೇ ವಾರದಲ್ಲಿ ಕೊಡಗಿನ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಪರಿಹಾರ ಕಾರ್ಯಗಳ ಕುರಿತು ಸಮಾಲೋಚನೆ ನಡೆಸಲಾಗುವುದು. ನಂತರ ಕೊನೆಯ ವಾರದಲ್ಲಿ ಸಂಸತ್ತಿನ ಉಪಸಮಿತಿಗೆ ವರದಿಯನ್ನು ನೀಡಲಾಗುವುದೆಂದರು.

ಸಂಸದರ ನಿಧಿಯಿಂದ 10 ಲಕ್ಷ ರೂ. ಮತ್ತು ನನ್ನ ಒಂದು ತಿಂಗಳ ಸಂಬಳವನ್ನು ಕೊಡಗಿಗೆ ನೀಡುವುದಾಗಿ ವೀರಪ್ಪ ಮೊಯ್ಲಿ ಘೋಷಿಸಿದರು. 
ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವು ಮಾದಪ್ಪ ಈ ಸಂದರ್ಭ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News