ಪ್ರೊ ಕಬಡ್ಡಿ: ದಿಲ್ಲಿ-ಗುಜರಾತ್ ಪಂದ್ಯ ರೋಚಕ ಡ್ರಾ

Update: 2018-10-09 18:50 GMT

ಚೆನ್ನೈ, ಅ.9: ಗುಜರಾತ್ ಫಾರ್ಚೂನ್‌ಜೈಂಟ್ಸ್ ಹಾಗೂ ದಬಾಂಗ್ ದಿಲ್ಲಿ ನಡುವೆ ಮಂಗಳವಾರ ಅತ್ಯಂತ ರೋಚಕವಾಗಿ ಸಾಗಿದ ಪ್ರೊ ಕಬಡ್ಡಿ ಲೀಗ್‌ನ ಪಂದ್ಯ 32-32 ರಿಂದ ಡ್ರಾನಲ್ಲಿ ಕೊನೆಗೊಂಡಿದೆ. ಇದು ಟೂರ್ನಮೆಂಟ್‌ನ ಎರಡನೇ ಡ್ರಾ ಪಂದ್ಯವಾಗಿದೆ.

 ಮೊದಲಾರ್ಧದಲ್ಲಿ 12-17ರಿಂದ ಹಿನ್ನಡೆಯಲ್ಲಿದ್ದ ದಿಲ್ಲಿ ತಂಡ ಕೊನೆಯ ನಿಮಿಷದಲ್ಲಿ ಹೋರಾಟ ನೀಡಿ ಟೈ ಸಾಧಿಸಿತು. ದಿಲ್ಲಿ ತಂಡದ ಪರ ಚಂದ್ರನ್ ರಂಜಿತ್ 10 ಅಂಕ ಗಳಿಸಿದರೆ, ಗುಜರಾತ್ ಪರ ರೋಹಿತ್ ಹಾಗೂ ಸಚಿನ್ ರೈಡ್ ಪಾಯಿಂಟ್ಸ್ ಗಳಿಸಿದರು.

ಕೊನೆಯ ಕ್ಷಣದಲ್ಲಿ ಕ್ಷಿಪ್ರವಾಗಿ ಎರಡು ಅಂಕ ಗಳಿಸಿದ ಉಭಯ ತಂಡಗಳು 40ನೇ ನಿಮಿಷದ ಅಂತ್ಯದಲ್ಲಿ 32-32ರಿಂದ ಡ್ರಾ ಸಾಧಿಸಿದವು. ಮತ್ತೊಂದು ಪಂದ್ಯದಲ್ಲಿ ತೆಲುಗು ಟೈಟಾನ್ಸ್ ತಂಡ ತಮಿಳ್ ತಲೈವಾಸ್ ವಿರುದ್ಧ 33-28 ಅಂತರದಿಂದ ಗೆಲುವು ಸಾಧಿಸಿತು. ಉದ್ಘಾಟನಾ ಪಂದ್ಯದಲ್ಲಿ ಪಾಟ್ನಾ ವಿರುದ್ಧ ಗೆಲುವು ಸಾಧಿಸಿದ ಬಳಿಕ ತಮಿಳ್ ತಂಡ ಸತತ 2ನೇ ಸೋಲು ಕಂಡಿದೆ. ತೆಲುಗು ಪರ ರಾಹುಲ್ ಚೌಧರಿ 9 ಅಂಕ ಗಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News