ಹೆಚ್1ಎನ್1 ಹರಡದಂತೆ ರಾಜ್ಯಾದ್ಯಂತ ಕಟ್ಟೆಚ್ಚರ: ಡಿಸಿಎಂ ಪರಮೇಶ್ವರ್

Update: 2018-10-10 12:11 GMT

ತುಮಕೂರು,ಅ.10: ರಾಜಧಾನಿ ಬೆಂಗಳೂರಿನಲ್ಲಿ ಹೆಚ್1ಎನ್1 ಸಾಂಕ್ರಾಮಿಕ ರೋಗ ಹರಡದಂತೆ ಈಗಾಗಲೇ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದು, ಎಲ್ಲ ಆಸ್ಪತ್ರೆಗಳಲ್ಲೂ ಅಗತ್ಯ ಔಷಧಿ ದಾಸ್ತಾನಿಗೆ ಸೂಚನೆ ನೀಡಲಾಗಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ನಗರದ ಪ್ರವಾಸಿ ಮಂದಿರದಲ್ಲಿ ಜಿಲ್ಲಾಧಿಕಾರಿ, ಎಸ್ಪಿ ಹಾಗೂ ಸಿಇಓ ಜತೆ ಜಿಲ್ಲೆಯ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಸುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ನಗರದಲ್ಲಿ ಹೆಚ್1ಎನ್1 ಸಾಂಕ್ರಾಮಿಕ ರೋಗ ಹರಡುತ್ತಿದೆ ಎಂಬ ವರದಿ ಹಿನ್ನೆಲೆಯಲ್ಲಿ ಬಿಬಿಎಂಪಿ ಆರೋಗ್ಯ ಶಾಖೆ ವತಿಯಿಂದ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜತೆಗೆ ನಗರದ ಎಲ್ಲಾ ಆಸ್ಪತ್ರೆಗಳಿಗೂ ಮುನ್ನೆಚ್ಚೆರಿಕೆಯಾಗಿ ಈ ರೋಗ ನಿಯಂತ್ರಣ ಸಂಬಂಧ ಅಗತ್ಯ ಔಷಧಿಗಳ ದಾಸ್ತಾನಿಗೂ ಸೂಚನೆ ನೀಡಲಾಗಿದೆ ಎಂದರು. 

ಹೆಚ್1ಎನ್1 ಪ್ರಕರಣ ಪತ್ತೆಯಾಗುತ್ತಿದೆ ಎಂದರೆ ವೈದ್ಯಕೀಯವಾಗಿ ವಿಫಲರಾಗಿದ್ದೇವೆ ಎಂದರ್ಥವಲ್ಲ. ವಿಮಾನ ನಿಲ್ದಾಣಗಳಲ್ಲಿ ಹೊರಗಡೆಯಿಂದ ಬರುವವರನ್ನು ಪರೀಕ್ಷಿಸುವಂತೆ ಈಗಾಗಲೇ ಸೂಚನೆ ನೀಡಲಾಗಿದೆ. ಆದರೆ ಇದುವರೆಗೂ ವಿಮಾನ ನಿಲ್ದಾಣಗಳಲ್ಲಿ ಈ ರೀತಿಯ ಪ್ರಕರಣಗಳು ಪತ್ತೆಯಾಗಿಲ್ಲ ಎಂದು ಡಾ.ಜಿ.ಪರಮೇಶ್ವರ್ ನುಡಿದರು. 

ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೆ ಇನ್ನೂ ಅಭ್ಯರ್ಥಿ ಹೆಸರು ಅಂತಿಮವಾಗಿಲ್ಲ. ಈ ಸಂಬಂಧ ಸಚಿವ ಡಿ.ಕೆ.ಶಿವಕುಮಾರ್ ಅವರು ಸ್ಥಳೀಯ ನಾಯಕರುಗಳ ಜತೆ ಸಭೆ ನಡೆಸಿದ್ದು, ಅಂತಿಮವಾಗಿ ಯಾರನ್ನು ಅಭ್ಯರ್ಥಿಯನ್ನಾಗಿಸಬೇಕು ಎಂಬ ಕುರಿತು ವರಿಷ್ಠರ ಗಮನಕ್ಕೆ ತಂದು ಆಯ್ಕೆ ಮಾಡಲಾಗುವುದು ಎಂದ ಅವರು, ಅ.14, 16, 19 ರಂದು ಮೈಸೂರು ದಸರಾ ಕಾರ್ಯಕ್ರಮದಲ್ಲಿ ತಾನು ಭಾಗವಹಿಸಬೇಕಾಗಿದೆ. ಹೀಗಾಗಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿಲ್ಲ ಎಂದ ಅವರು ಹೇಳಿದರು.

ಬೇರೆ ಬೇರೆ ಕಾರ್ಯಕ್ರಮಗಳಲ್ಲಿ ಪಕ್ಷದ ಶಾಸಕರು, ಸಚಿವರು ಪಾಲ್ಗೊಂಡಿದ್ದರಿಂದ ದಸರಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಲು ಸಾಧ್ಯವಾಗದಿರಬಹುದು ಎಂದು 'ಕೈ' ನಾಯಕರ ಗೈರು ಹಾಜರಿಯನ್ನು ಸಮರ್ಥಿಸಿಕೊಂಡರು.

ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವಕ್ಕೆ ಚಾಲನೆ ನೀಡಿದ ಸುಧಾಮೂರ್ತಿ ಅವರು ಕೊಡಗು ಸಂತ್ರಸ್ತರಿಗೆ 25 ಕೋಟಿ ರೂ. ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಸುಧಾಮೂರ್ತಿ ಅವರ ಸೇವಾ ಮನೋಭಾವ ಇಡೀ ಮನುಕುಲಕ್ಕೆ ಮಾದರಿ. ಹಾಗಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News