ಮುಖ್ಯಮಂತ್ರಿಯಾದರೂ ಸಂತೋಷದಿಂದಿಲ್ಲ: ಸಿಎಂ ಕುಮಾರಸ್ವಾಮಿ

Update: 2018-10-10 14:42 GMT

ಮೈಸೂರು,ಅ.10: ನಾನು ರಾಜಕಾರಣಿ ಅಲ್ಲ, ರಾಜಕೀಯಕ್ಕೆ ಆಕಸ್ಮಿಕವಾಗಿ ಬಂದೆ. ಎರಡು ಬಾರಿ ಮುಖ್ಯಮಂತ್ರಿ ಆದೆ. ಆದರೂ ನಾನು ಸಂತೋಷದಿಂದಿಲ್ಲ ಎಂದು ಸಿಎಂ ಎಚ್.ಡಿ.ಕುಮಾರಸ್ವಾಮಿ ತಮ್ಮ ಅಂತರಂಗದ ಭಾವನೆಯನ್ನು ವ್ಯಕ್ತಪಡಿಸಿದರು.

ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವಕ್ಕೆ ಬುಧವಾರ ಚಾಮುಂಡಿ ಬೆಟ್ಟದಲ್ಲಿ ಚಾಲನೆ ನೀಡಿದ ನಂತರ ವೇದಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಾಲದ ನೋಟಿಸ್‍ಗೆ ಹೆದರಿ ಆತ್ಮಹತ್ಯೆಗೆ ರಾಜ್ಯದ ಜನರು ಶರಣಾಗುತ್ತಿದ್ದಾರೆ. ದಯವಿಟ್ಟು ಅಂತಹ ಕೆಲಸ ಮಾಡಬೇಡಿ. ಸರ್ಕಾರವನ್ನು ನಂಬಿ. ನನ್ನ ಮೇಲೆ ವಿಶ್ವಾಸವಿಡಿ. ನಿಮ್ಮ ನೆಮ್ಮದಿಯ ಜೀವನಕ್ಕಾಗಿ ಹಲವು ಯೋಜನೆಗಳನ್ನು ರೂಪಿಸುತ್ತೇನೆ. ಆತ್ಮಹತ್ಯೆ ಮಾಡಿಕೊಂಡು ನಿಮ್ಮನ್ನು ನಂಬಿರುವ ಕುಟುಂಬವನ್ನು ಅನಾಥರನ್ನಾಗಿ ಮಾಡಬೇಡಿ. ನಿಮ್ಮ ಮಕ್ಕಳು ಕಷ್ಟಪಡುವುದಕ್ಕೆ ಅವಕಾಶ ಕಲ್ಪಿಸಬೇಡಿ ಎಂದು ರಾಜ್ಯದ ಜನರಲ್ಲಿ ಮನವಿ ಮಾಡಿದರು.

ನಾನು ರಾಜಕಾರಣಿ ಅಲ್ಲ. ನನ್ನ ವೃತ್ತಿಯೇ ಬೇರೆ. ನಾನು ರಾಜಕೀಯ ಮಾಡಬೇಕು ಎಂದು ಅಂದುಕೊಂಡಿರಲಿಲ್ಲ. ಆಕಸ್ಮಿಕವಾಗಿ ರಾಜಕೀಯಕ್ಕೆ ಬರಬೇಕಾಯಿತು. ಎರಡು ಬಾರಿ ಮುಖ್ಯಮಂತ್ರಿ ಆಗಿದ್ದೇನೆ. ಆದರೂ ನಾನು ಸಂತೋಷದಿಂದಿಲ್ಲ ಎಂದು ಹೇಳಿದರು.

ಮುಖ್ಯಮಂತ್ರಿಯಾಗಿ ಕೇವಲ ಮೂರು ತಿಂಗಳಾಗಿದೆ. ಅಷ್ಟರಲ್ಲಿಯೇ ಎಲ್ಲಾ ಸಮಸ್ಯೆ ಬಗೆಹರಿಸಲು ಸಾಧ್ಯವಿಲ್ಲ. ನನಗೆ ಕಾಲಾವಕಾಶ ನೀಡಿ. ನಿಮ್ಮ ಸಮಸ್ಯೆಯನ್ನು ಸಂಪೂರ್ಣವಾಗಿ ಬಗೆಹರಿಸುತ್ತೇನೆ ಎಂದು ಹೇಳಿದರು.

ಸುಧಾಮೂರ್ತಿ ಅವರದು ತಾಯಿ ಹೃದಯ: ನಾಡಿನಲ್ಲಿ ನಾ ಕಂಡ ಅಪರೂಪದ ಮಹಿಳೆ ಸುಧಾಮೂರ್ತಿ ಅವರು ತಾಯಿ ಹೃದಯ ಹೊಂದಿರುವ ಮಹಿಳೆ. ನಾಡ ಅಧಿದೇವತೆಗೆ ಸುಧಾ ಮೂರ್ತಿ ಪೂಜೆ ಸಲ್ಲಿಸದರೆ ಎಲ್ಲವೂ ಸುಸೂತ್ರವಾಗಿ ನಡೆಯಲಿದೆ ಎಂಬುದು ನನ್ನ ನಂಬಿಕೆ. ಪ್ರತಿಯೊಬ್ಬ ಮಾನವ ಜೀವಿಗೂ ತಾಯಿ ಹೃದಯ ಬರಬೇಕು ಎಂದರು.

ಕೊಡಗಿನಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಸುಧಾ ಮೂರ್ತಿ ಸ್ಪಂದಿಸಿದ ಕುರಿತು ಮಾತನಾಡಿದ ಕುಮಾರಸ್ವಾಮಿ, ಇದು ಹೊಸದಾಗಿ ಅವರು ನೀಡುತ್ತಿರುವ ಕಾರ್ಯಕ್ರಮವಲ್ಲ. ಅತ್ಯಂತ ಸರಳಜೀವಿ ನಾರಾಯಣ ಮೂರ್ತಿ ದಂಪತಿಗಳು ಸಂಸ್ಥೆಯ ಆಧಾಯವನ್ನು ಸ್ವಂತಕ್ಕೆ ಬಳಸದೆ ಬೆಂಗಳೂರಿನ ಮೆಟ್ರೋ ಯೋಜನೆಗೆ 200 ಕೋಟಿ ರೂ., ಪೊಲೀಸ್ ಸೈಬರ್ ಕ್ರೈಂ ವಿಭಾಗದ ಉನ್ನತೀಕರಣಕ್ಕೆ 25 ಕೋಟಿ ರೂ. ನೀಡಿದ್ದಾರೆ ಎಂದು ಸಂಸ್ಥೆಯ ಸಮಾಜಮುಖಿ ಸೇವೆಯನ್ನು ಸ್ಮರಿಸಿದರು. ಅವರ ಆಯ್ಕೆ ನಾಡಿನ ಸಮಸ್ತ ಮಹಿಳೆಯರಿಗೆ ನೀಡಿದ ಗೌರವ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಸಚಿವ ಹಾಗೂ ಮೈಸೂರು ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಮಾತನಾಡಿದರು. ಸಚಿವರಾದ ಸಾ.ರಾ.ಮಹೇಶ್, ಜಯಮಾಲ, ರಾಜಶೇಖರ ಬಸರಾಜ ಪಾಟೀಲ್, ಸಂಸದ ಪ್ರತಾಪ್ ಸಿಂಹ, ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಶಾಸಕರಾದ ಎಚ್.ವಿಶ್ವನಾಥ್, ಕೆ.ಮಹದೇವ್, ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಅಶ್ವಿನ್ ಕುಮಾರ್, ಹರ್ಷವರ್ಧನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಬಸವರಾಜು, ಜಿ.ಪಂ.ಅಧ್ಯಕ್ಷೆ ನಯೀಮಾ ಸುಲ್ತಾನ, ತಾ.ಪಂ.ಅಧ್ಯಕ್ಷೆ ಕಾಳೀರಮ್ಮ ಕೆಂಪರಾಮಯ್ಯ, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಜಿ.ಪಂ.ಸಿಇಓ ಕೆ.ಜ್ಯೋತಿ, ಅಪರ ಜಿಲ್ಲಾಧಿಕಾರಿ ಟಿ.ಯೋಗೀಶ್ ಸೇರಿದಂತೆ ಹಲವರು ಉಪಸ್ಥಿತಿರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News