ಭಿಲಯಿ ಸ್ಟೀಲ್ ಕಾರ್ಖಾನೆ ಸ್ಫೋಟ: ಮೃತರ ಸಂಖ್ಯೆ 11ಕ್ಕೆ ಏರಿಕೆ

Update: 2018-10-10 14:58 GMT

ರಾಯಪುರ,ಅ.10: ಚತ್ತೀಸ್‌ಗಡದ ಭಿಲಯಿಯಲ್ಲಿರುವ ಸ್ಟೀಲ್ ಕಾರ್ಖಾನೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಗಾಯಗೊಂಡಿದ್ದ ಇಬ್ಬರು ಕಾರ್ಮಿಕರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆಯುವ ಮೂಲಕ ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ ಬುಧವಾರ 11ಕ್ಕೇರಿದೆ.

ರಾಯಪುರ ಸಮೀಪದ ದುರ್ಗ ಜಿಲ್ಲೆಯಲ್ಲಿರುವ ಭಾರತೀಯ ಸ್ಟೀಲ್ ಪ್ರಾಧಿಕಾರ ನಿಯಮಿತ (ಸೈಲ್)ದ ಕಾರ್ಖಾನೆಯಲ್ಲಿ ಸಂಭವಿಸಿದ ಅನಿಲ ಪೈಪ್‌ಲೈನ್ ಸ್ಫೋಟದಲ್ಲಿ ಮಂಗಳವಾರ ಒಂಬತ್ತು ಮಂದಿ ಸಾವನ್ನಪ್ಪಿದ್ದರು. ಗಂಭೀರವಾಗಿ ಗಾಯಗೊಂಡಿದ್ದ 14 ಕಾರ್ಮಿಕರನ್ನು ಭಿಲಯಿಯ ಜವಾಹರ್ ಲಾಲ್ ನೆಹರೂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಪೈಕಿ ಇಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ತಡರಾತ್ರಿ ಸಾವನ್ನಪ್ಪಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಮಂಗಳವಾರ ನಿರ್ವಹಣಾ ಕಾರ್ಯ ನಡೆಯುತ್ತಿದ್ದ ವೇಳೆ ಕೋಕ್ ಒವನ್ (ಬೃಹತ್ ಒಲೆ) ವಿಭಾಗಕ್ಕೆ ಸಂಪರ್ಕಿಸಲಾಗಿದ್ದ ಗ್ಯಾಸ್ ಪೈಪ್‌ಲೈನ್‌ನಲ್ಲಿ ಸ್ಫೋಟ ಸಂಭವಿಸಿದೆ ಎಂದು ಸೈಲ್ ಅಧಿಕಾರಿಗಳು ತಿಳಿಸಿದ್ದಾರೆ. ಮೃತರ ಮರಣೋತ್ತರ ಪರೀಕ್ಷೆಯ ವರದಿ ಬಂದ ಕೂಡಲೇ ಭಾರತೀಯ ದಂಡ ಸಂಹಿತೆಯ ವಿಧಿ 304(ಎ) (ನಿರ್ಲಕ್ಷದಿಂದ ಸಾವು) ಯಡಿ ಪ್ರಕರಣ ದಾಖಲಿಸಿಕೊಳ್ಳಲಾಗುವುದು ಎಂದು ಐಜಿಪಿ ಜಿ.ಪಿ.ಸಿಂಗ್ ತಿಳಿಸಿದ್ದಾರೆ.

ಮೃತರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಲಾಗುವುದು ಮತ್ತು ಗಾಯಗೊಂಡವರಿಗೆ ಅತ್ಯುತ್ತಮ ವೈದ್ಯಕೀಯ ಸೇವೆ ಲಭಿಸುವಂತೆ ನೋಡಿಕೊಳ್ಳಲಾಗುವುದು ಎಂದು ಕೇಂದ್ರ ಸ್ಟೀಲ್ ರಾಜ್ಯ ಸಚಿವ ವಿಷ್ಣುದೇವ್ ಸಾಯಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News